ಮಂತ್ರಿಗಿರಿಗಾಗಿ BJP ಶಾಸಕರ ಕಾಳಗ; ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ!

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡುತ್ತಿದ್ದಂತೆಯೇ, ರಾಜ್ಯ ಬಿಜೆಪಿಯಲ್ಲಿ ಸಚಿವಾಕಾಂಕ್ಷಿಗಳ ಬೇಗುದಿ ಭುಗಿಲೆದ್ದಿದೆ. ನಾಳೆ (ಜ.13) ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ಬೆನ್ನಲ್ಲೇ, ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು BJP ಶಾಸಕರು ಧ್ವನಿ ಎತ್ತಿರುವುದು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಒಂದೆಡೆ ಚನ್ನಪಟ್ಟಣದ ಬಿಜೆಪಿ ಮುಖಂಡ ಎಂಎಲ್‌ಸಿ ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ರಾಜ್ಯ ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ. ಅಲ್ಲದೆ, ಮೇಲ್ಮನೆ ಸದಸ್ಯರಾದ ಆರ್.ಶಂಕರ್, ಎಂ.ಟಿ.ಬಿ ನಾಗರಾಜ್‌ಗೂ ಸಚಿವ ಸ್ಥಾನ ಗ್ಯಾರಂಟಿ ಎಂದು ಹೇಳಲಾಗಿದೆ. ಆದರೆ, ಹಳ್ಳಿಹಕ್ಕಿ ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿದೆ.

ಈ ಮಧ್ಯೆ, ಸಚಿವ ಸ್ಥಾನಕ್ಕಾಗಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿರುವ ಶಾಸಕರು ಸಭೆ ನಡೆಸಲು ಮುಂದಾಗಿದ್ದು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಸುರಪುರ ಶಾಸಕ ರಾಜುಗೌಡ, ಬೀಳಗಿಯ ಮುರುಗೇಶ ನಿರಾಣಿ, ಸೇಡಂನ ರಾಜಕುಮಾರ ಪಾಟೀಲ ತೆಲ್ಕೂರ, ಯಲಬುರ್ಗಾದ ಹಾಲಪ್ಪ ಆಚಾರ್, ರಾಯಚೂರಿನ ಡಾ.ಶಿವರಾಜ್ ಪಾಟೀಲ, ಗಂಗಾವತಿಯ ಪರಣ್ಣ ಮುನವಳ್ಳಿ, ಕಲಬುರ್ಗಿ ದಕ್ಷಿಣದ ದತ್ತಾತ್ರೇಯ ಪಾಟೀಲ ರೇವೂರ, ಕಲಬುರ್ಗಿ ಗ್ರಾಮಾಂತರದ ಬಸವರಾಜ ಮತ್ತಿಮೂಡ ಸೇರಿದಂತೆ ಮತ್ತಿತರ ಶಾಸಕರು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಬಾರದು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಇದನ್ನೂ ಓದಿ: ಹಳ್ಳಿಹಕ್ಕಿಗಿಲ್ಲ ಸಚಿವ ಸ್ಥಾನ; ಮಂತ್ರಿಗಿರಿಗೆ ವಿಶ್ವನಾಥ್‌ ಅನರ್ಹ: ಹೈಕೋರ್ಟ್‌ ತೀರ್ಪು

ಇವರ ಪೈಕಿ ಬಹುತೇಕ ಶಾಸಕರು ಮುಖ್ಯಮಂತ್ರಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಆಗಿರುವುದು ಮತ್ತೊಂದು ವಿಶೇಷ. ಅಲ್ಲದೆ, ಪಕ್ಷ ನಿಷ್ಠರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಮಂತ್ರಿ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಮತ್ತೊಂದು ಬಣದ ವಾದ.

ಇನ್ನು ಸಂಪುಟಕ್ಕೆ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿರುವ ಶಾಸಕರು ತಮಗೆ ನಿರ್ಧಿಷ್ಟ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ವಲಸಿಗರ ಕಥೆಯಾದರೆ ಮೂಲ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವ ಶಾಸಕರು ಅಸಮಾಧಾನಗೊಂಡು ವರಿಷ್ಠರ ವಿರುದ್ಧ ಒಳಗೊಳಗೆ ಕುದಿಯುತ್ತಿದ್ದಾರೆ.

ಈಗಾಗಲೇ 3ಕ್ಕೂ ಹೆಚ್ಚು ಬಾರಿ ಗೆದ್ದು ಬಂದಿರುವವರು ತಮಗೆ ಮಂತ್ರಿ ಸ್ಥಾನ ಕೊಡದೆ ಕಡೆಗಣಿಸುತ್ತಿರುವುದಕ್ಕೆ ಮುನಿಸಿಕೊಂಡಿದ್ದು, ಅಧಿಕಾರಕ್ಕಾಗಿ ಬಂದವರಿಗೆ ಮಣೆ ಹಾಕಿದರೆ ನಮ್ಮಂಥ ಪಕ್ಷ ನಿಷ್ಠರ ಕಥೆ ಏನು ಎಂಧು ಪ್ರಶ್ನೆ ಮಾಡುತ್ತಿದ್ದಾರೆ.


ಇದನ್ನೂ ಓದಿ: ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ ಎಂಬುದು ಸುಳ್ಳು: ಬ್ರಾಹ್ಮಣರಿಗಿರುವ 15 ಯೋಜನೆಗಳು ಇಲ್ಲಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights