ಸಮಿತಿಗೆ BJP ಸದಸ್ಯರ ರಾಜೀನಾಮೆ; ಸತ್ಯ ತಿಳಿಯುವ ಮುನ್ನವೇ ಶಸ್ತ್ರತ್ಯಾಗ ಎಂದ ಕಾಂಗ್ರೆಸ್‌!

ವಿಧಾನ ಪರಿಷತ್‌ನ ವಿಶೇಷ ಅಧಿವೇಶನದ ವೇಳೆ ನಡೆದ ಘಟನೆಯ ಬಗ್ಗೆ ವರದಿ ನೀಡಲು ಸದನ ಸಮಿತಿ ರಚಿಸಲಾಗಿದ್ದು, ಬಿಜೆಪಿ ಸದಸ್ಯರು ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿ ಸದಸ್ಯರು ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ಎಸ್ಕೇಪ್‌ ಆಗುವ ಉದ್ದೇಶದಿಂದ ರಾಜೀನಾಮೆ ಕೊಟ್ಟಿರಬಹುದು ಎಂಬ ಸಂಶಯವನ್ನು ಹುಟ್ಟಿಸಿದೆ ಎಂದು ಕಾಂಗ್ರೆಸ್‌ ಎಂಎಲ್‌ಸಿ ಪಿಆರ್‌ ರಮೇಶ್‌ ಹೇಳಿದ್ದಾರೆ.

ಡಿ. 15ರಂದು ವಿಧಾನಪರಿಷತ್‌ನಲ್ಲಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿರುವ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆ ಕುರಿತು ಪರಿಶೀಲಿಸಿ ವರದಿ ನೀಡಲು ಸಭಾಪತಿ ಸದನ ಸಮಿತಿ ರಚಿಸಿದ್ದರು. ಈ ಸಮಿತಿಗೆ ಬಿಜೆಪಿ ಸದಸ್ಯರಾದ ಎಚ್‌. ವಿಶ್ವನಾಥ್‌ ಮತ್ತು ಎಸ್‌.ವಿ. ಸಂಕನೂರು ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಮೇಶ್‌, ಸದನ ಸಮಿತಿಗೆ ನೇಮಕಗೊಂಡಿದ್ದ ಇಬ್ಬರು ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದು ಏಕೆ? ಘಟನೆ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು. ಈ ಕಾರಣಕ್ಕೆ ಸದನ ಸಮಿತಿ ರಚಿಸಲಾಗಿದೆ. ಆದರೆ, ಬಿಜೆಪಿ ಸದಸ್ಯರು ಸಮಿತಿಯಿಂದ ಹೊರ ನಡೆದಿರುವುದು ಸರಿಯಾದ ನಡೆಯಲ್ಲ. ಬಿಜೆಪಿ ‘ಸತ್ಯ ತಿಳಿಯುವ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ’ ಎಂದು ಟೀಕಿಸಿದ್ದಾರೆ.

ಸದನದಲ್ಲಿ ನಡೆದ ಅಹಿತಕರ ಘಟನೆಯ ಸರಿ, ತಪ್ಪು ಸದನದಲ್ಲೇ ತೀರ್ಮಾನ ಆಗಬೇಕು ಎಂದು ಕೋರ್ಟ್‌ ಕೂಡ ಸ್ಪಷ್ಟವಾಗಿ ಹೇಳಿದೆ. ಸದನ ಸಮಿತಿ ಬಿಟ್ಟು ಬೇರೆ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ. ಬಿಜೆಪಿ ಸದಸ್ಯರು ಸದನ ಸಮಿತಿಗೆ ಗೌರವ ಕೊಡುವ ಬದಲು ಓಡಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಪರಿಷತ್‌ನಲ್ಲಿ ಗಲಾಟೆ: ಸದನ ಸಮಿತಿಗೆ ಹಳ್ಳಿಹಕ್ಕಿ ವಿಶ್ವನಾಥ್, ಸಂಕನೂರು‌ ರಾಜೀನಾಮೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights