ಪರಿಷತ್‌ನಲ್ಲಿ ಗಲಾಟೆ: ಸದನ ಸಮಿತಿಗೆ ಹಳ್ಳಿಹಕ್ಕಿ ವಿಶ್ವನಾಥ್‌ ರಾಜೀನಾಮೆ

ಡಿಸೆಂಬರ್‌ 15ರಂದು ಕರೆಯಲಾಗಿದ್ದ ವಿಧಾನ ಪರಿಷತ್‌ ವಿಶೇಷ ಅಧಿವೇಶನದಲ್ಲಿ ನಡೆದ ಗಲಾಟೆ ಸಂಬಂಧ ವರದಿ ನೀಡುವಂತೆ ರಚಿಸಲಾಗಿದ್ದ ಸದನ ಸಮಿತಿಗೆ ಎಂಎಲ್‌ಸಿ ವಿಶ್ವನಾಥ್‌ ಮತ್ತು ಸಂಕನೂರ್ ರಾಜೀನಾಮೆ ನೀಡಿದ್ದಾರೆ.

ಗೋಹತ್ಯೆ ನಿಷೇಧ ಮಸೂದೆಯನ್ನು ಪರಿಷತ್‌ನಲ್ಲಿ ಅಂಗೀಕರಿಸಲು ಸಿಎಂ ಯಡಿಯೂರಪ್ಪ ವಿಶೇಷ ಪರಿಷತ್‌ ಅಧಿವೇಶನ ಕರೆದಿದ್ದರು. ಈ ವೇಳೆ ಪರಿಷತ್‌ ಸಭಾಪತಿಯನ್ನು ಬದಲಿಸು ಬಿಜೆಪಿ-ಜೆಡಿಎಸ್‌ ಸದಸ್ಯರು ಮುಂದಾಗಿದ್ದರು. ಇದಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಮೂರು ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದು ಉಪಸಭಾಪತಿ ಧರ್ಮೇಗೌಡರನ್ನು ಸಭಾಪತಿ ಖುರ್ಚಿಯಿಂದ ಎಳೆದೊಯ್ದು ಗಲಾಟೆ ಮಾಡಲಾಗಿತ್ತು.

ಈ ಘಟನೆ ಕುರಿತು ವರದಿ ನೀಡುವಂತೆ ಕೇಳಿ, ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಹಿರಿಯ ಸದಸ್ಯ ಮರಿತಿಬ್ಬೇಗೌಡರ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು. ಸದನದಲ್ಲಿ ಚರ್ಚಿಸದೇ ಸಮಿತಿ ರಚಿಸಿರುವುದನ್ನು ಬಿಜೆಪಿ ವಿರೋಧಿಸಿದ್ದು, ಈ ಹಿನ್ನೆಲೆಯಲ್ಲಿ ಎಂಎಲ್​ಸಿ ಹೆಚ್​. ವಿಶ್ವನಾಥ್ ಮತ್ತು ಸಂಕನೂರ್‌ ಅವರು ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಧರ್ಮೇಗೌಡರ ಸಾವಿಗೆ ವಿಧಾನ ಪರಿಷತ್‌ನ MLCಗಳು ಕಾರಣ; ಎಲ್ಲರನ್ನೂ ಬಂಧಿಸಿ: ಎಎಪಿ ಆಗ್ರಹ

ಡಿ. 15ರಂದು ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಅಂದಿನ ಗಲಾಟೆಯಲ್ಲಿ ಈಗಿನ ಸದನ ಸಮಿತಿ ಅಧ್ಯಕ್ಷರು, ಸದಸ್ಯರು ಕೂಡ ಇದ್ದರು. ಕಲಾಪದಲ್ಲಿ ನಡೆದ ಗಲಾಟೆಯಲ್ಲಿ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಕೂಡ ಭಾಗವಹಿಸಿದ್ದರು. ಈಗ ಅವರೇ ಹೇಗೆ ಸದನ ಸಮಿತಿಯನ್ನು ರಚಿಸುತ್ತಾರೆ ಎಂದು ಹೆಚ್‌ ವಿಶ್ವನಾಥ್ ಹೇಳಿರುವುದಾಗಿ ನ್ಯೂಸ್‌ 18 ವರದಿ ಮಾಡಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪ ಸಭಾಪತಿ ಧರ್ಮೇಗೌಡರ ಸಾವಿನ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಎಂದಿದ್ದಾರೆ. ಹಾಗಾಗಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ರಾಜಿನಾಮೆ ನೀಡಿದ್ದೇವೆ ಎಂದು ಹೆಚ್​. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸದನ ಸಮಿತಿಯ ಸಭೆಯಲ್ಲಿ ಕಾಂಗ್ರೆಸ್​ ಎಂಎಲ್​ಸಿಗಳಾದ ಬಿ.ಕೆ‌ ಹರಿಪ್ರಸಾದ್ ಮತ್ತು ಆರ್.ಬಿ ತಿಮ್ಮಾಪೂರ್ ಮಾತ್ರ ಹಾಜರಾಗಿದ್ದರು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಭೆಯಿಂದ ಹೊರಗುಳಿಸಿದ್ದಾರೆ. ಈ ವೇಳೆ ವಿಶ್ವನಾಥ್‌ ಮತ್ತು ಸಂಕನೂರ್‌ ಅವರು ರಾಜೀನಾಮೆ ನೀಡಿ ಸಭೆ ಬಹಿಷ್ಕರಿಸಿ ಹೊರನಡೆದಿದ್ದಾರೆ.


ಇದನ್ನೂ ಓದಿ: ಧರ್ಮೇಗೌಡರನ್ನು ಕೊಂದವರು ಯಾರು? ಆತ್ಮಹತ್ಯೆಗೆ ಕಾರಣಗಳೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights