ಸಲಿಂಗ ವಿವಾಹವನ್ನು ನಮ್ಮ ಕಾನೂನು, ಸಮಾಜ, ಮೌಲ್ಯಗಳು ಒಪ್ಪುವುದಿಲ್ಲ: ದೆಹಲಿ ಹೈಕಾರ್ಟ್ಗೆ ಕೇಂದ್ರ ಹೇಳಿಕೆ
ಸಲಿಂಗ ಸಂಗಾತಿಗಳ, ಪ್ರೇಮಿಗಳ ವಿವಾಹವನ್ನು “ನಮ್ಮ ಕಾನೂನುಗಳು, ಕಾನೂನು ವ್ಯವಸ್ಥೆ, ಸಮಾಜ ಮತ್ತು ನಮ್ಮ ಮೌಲ್ಯಗಳು ಒಪ್ಪುವುದಿಲ್ಲ” ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಸಲಿಂಗ ಕಾಮವನ್ನು ಒಪ್ಪುವವರ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿರೋಧಿಸಿರುವ ಕೇಂದ್ರ ಸರ್ಕಾರ, ಭಾರತೀಯ ಸಮಾಜದ ಮೌಲ್ಯಗಳು ಸಲಿಂಗ ಕಾಮ ಮತ್ತು ವಿವಾಹವನ್ನು ಒಪ್ಪುವುದಿಲ್ಲ ಎಂದು ಹೇಳಿದೆ.
ಸಲಿಂಗ ವಿವಾಹವನ್ನು ಕಾನೂನು ಬದ್ದಗೊಳಿಸುವ ಅರ್ಜಿಯನ್ನು ಎರಡು ಕಾರಣಗಳಿಂದ ವಿರೋಧಿಸಲಾಗುತ್ತಿದೆ. “ಮೊದಲನೆಯದಾಗಿ, ಅರ್ಜಿಯು ನ್ಯಾಯಾಲಯವನ್ನು ಶಾಸನ ಮಾಡುವಂತೆ ಕೇಳುತ್ತಿದೆ. ಎರಡನೆಯದಾಗಿ, ಯಾವ ಪರಿಹಾರಗಳು ವಿವಿಧ ಶಾಸನಬದ್ಧ ನಿಬಂಧನೆಗಳಿಗೆ ವಿರುದ್ಧವಾಗಿರುತ್ತವೋ, ಅಂತಹ ವಿಚಾರಗಳಲ್ಲಿ ನ್ಯಾಯಾಲಯವು ವಿವಿಧ ಕಾನೂನುಗಳಿನ್ನು ಮೀರಲು ಸಾಧ್ಯವಿಲ್ಲ. ಹಾಗಾಗಿ, ಸಲಿಂಗ ವಿವಾಹವನ್ನು ಕಾನೂನುಬದ್ದ ಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ಪರ ವಕೀಲ ತುಶಾರ್ ಮೆಹ್ತಾ ವಾದಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ, ವಿವಾಹಗಳನ್ನು ನಿಯಂತ್ರಿಸುವ ವಿವಿಧ ನಿಬಂಧನೆಗಳು ಗಂಡ ಮತ್ತು ಹೆಂಡತಿಯ ಸಂಬಂಧಗಳ ಬಗ್ಗೆ ಮಾತನಾಡುತ್ತವೆ. ಆದರೆ, ಸಲಿಂಗ ವಿವಾಹದಲ್ಲಿ ಅಥವಾ ಸಂಬಂಧದಲ್ಲಿ ಈ ಪಾತ್ರಗಳನ್ನು ಯಾರ ಮೂಲಕ ನೋಡಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ವಾದವನ್ನು ಆಲಿಸಿದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಎಸ್ ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠವು, ಪ್ರಪಂಚದಾದ್ಯಂತ ಹಲವಾರು ವಿಷಯಗಳು ಬದಲಾಗುತ್ತಿವೆ. ಇದು ಭಾರತಕ್ಕೂ ಅನ್ವಯವಾಗಬಹುದು ಅಥವಾ ಅನ್ವಯವಾಗದೆಯೂ ಇರಬಹುದು ಎಂದು ಹೇಳಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.
ಆ ವೇಳೆಗೆ, ಸಲಿಂಗ ವಿವಾಹವನ್ನು ಕಾನೂನು ಬದ್ದಗೊಳಿಸುವ ಅರ್ಜಿಯ ಅಗತ್ಯವೇನು? ಸಲಿಂಗ ವಿವಾಹವನ್ನು ನೊಂದಾಯಿಸಲು ಸಲಿಂಗ ಕಾರ್ಯಕರ್ತರು ಮಾಡಿದ ಪ್ರಯತ್ನಗಳೇನು? ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿದಾರರ ಪರ ವಕೀಲ ಅಭಿಜಿತ್ ಅಯ್ಯರ್ ಮಿತ್ರಾಗೆ ಸೂಚಿಸಿದೆ.
ಒಪ್ಪಿತ ಸಲಿಂಗಕಾಮ ಸಂಬಂಧವನ್ನು ಹೊಂದಬಹುದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಆದರೆ, ಸಲಿಂಗ ವಿವಾಹಗಳ ಬಗ್ಗೆ ಹೇಳಲಾಗಿಲ್ಲ.
ಇದನ್ನೂ ಓದಿ: NEET exam: ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನ್ಯಾಯಧೀಶರ ಒತ್ತಾಯ

