Fact Check: ಕಂಗನಾ ಬೆಂಬಲಿಸಿ ಮುಂಬೈಗೆ ಬಂದಿತ್ತಾ ಬಲಪಂಥೀಯ ಸಂಘಟನೆ ಕರ್ಣಿಸೇನಾ!

ಬಾಲಿವುಡ್ ನಟಿ ಕಂಗನಾ ರಾಣಾವತ್ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ  ಹೋಲಿಸಿದ್ದು, ಬಾಲಿವುಡ್‌ನಲ್ಲಿ ಡ್ರಗ್ ಮಾಫಿಯಾ ಇದೆ ಎಂಬ ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ್ದಾರೆ. ಇದರಿಂದ ಅವರ ಮೇಲೆ ಶಿವಸೇನೆ ನೇತೃತ್ವದ ಮಹಾರಾಷ್ಟರ ಸರ್ಕಾರ ತಿರುಗಿಬಿದ್ದಿದ್ದು, ವಿವಾದವು ಕಂಗನಾ v/s ಶಿವಸೇನೆ ಎನ್ನುವ ಮಟ್ಟಿಗೆ ಬಂದಿದೆ.

ಈ ವಿವಾದದ ನಂತರ ಮುಂಬೈಯಲ್ಲಿರುವ ಕಂಗನಾಗೆ ಸೇರಿರುವ ಮಣಿಕರ್ಣಿಕಾ ಫಿಲ್ಮಂ ಕಚೇರಿಯನ್ನು ಬಿಎಂಸಿ ಧ್ವಂಸಗೊಳಿಸಲು ಹೋಗಿದ್ದು, ಪ್ರತಿಕಾರದ ಕೃತ್ಯ ಎನಿಸಿಕೊಂಡಿತ್ತು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಕಂಗನಾಗೆ ಬೆಂಬಲ ತೋರಿಸಲು ಬಲಪಂಥೀಯ ಸಂಘಟನೆ ಕರ್ಣಿಸೇನಾದ ಗುಂಪು ಮುಂಬೈಗೆ ಪ್ರಯಾಣಿಸುತ್ತಿದೆ ಎಂಬ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿವೆ.

ಈ ಚಿತ್ರಗಳು, ವಿಡಿಯೋಗಳು ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳಾಗಿದ್ದು, ಕರ್ಣಿಸೇನಾ ನಟಿಗೆ ಬೆಂಬಲ ನೀಡಲು 1,000 ಕಾರುಗಳ ಬೆಂಗಾವಲು ಪಡೆಯೊಂದಿಗೆ ಹೋಗುತ್ತಿರುವುದು ಸುಳ್ಳು ಸುದ್ದಿಯಾಗಿದೆ.

’ದಿ ಕ್ವಿಂಟ್‌’ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದು ಬಂದ ವಿಷಯವೆಂದರೇ, ಈ ಚಿತ್ರಗಳು ಮತ್ತು ವೀಡಿಯೊಗಳು 2016 ರ ಹಳೆಯ ಚಿತ್ರಗಳಾಗಿವೆ. ಈ ಚಿತ್ರಗಳಿಗೂ ಕರ್ಣಿಸೇನಾ ಕಂಗನಾಗೆ ಬೆಂಬಲ ನೀಡುತ್ತಿದೆ ಎಂಬ ಸುದ್ದಿಗೂ ಯಾವುದೇ ಸಂಬಂಧವಿಲ್ಲ.

ಈ ಚಿತ್ರಗಳು ಮತ್ತು ವೀಡಿಯೊಗಳ ಪ್ರಕಾರ “ಕಂಗನಾ ರಾಣಾವತ್ ಅವರ ಗೌರವಾರ್ಥವಾಗಿ, ಕರ್ಣಿಸೇನಾ ಮಹಾರಾಷ್ಟ್ರಕ್ಕೆ 1,000 ಕಾರುಗಳ ಬೆಂಗಾವಲಿನಲ್ಲಿ ಹೊರಟಿದೆ” ಎಂದು ಪೋಸ್ಟ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್‌ನಲ್ಲಿ ಕಂಡಿದ್ದೇನು..?

ದಿ ಕ್ವಿಂಟ್ ನಡೆಸಿದ ಫ್ಯಾಕ್ಟ್‌ಚೆಕ್ ಪ್ರಕಾರ ತಿಳಿದುಬಂದದ್ದೇನೆಂದರೆ, ಈ ಚಿತ್ರಗಳು ತುಂಬ ಹಳೆಯ ಮತ್ತು ಕರ್ಣಿಸೇನಾದಿಂದ ಕಂಗನಾಗೆ ಬೆಂಬಲ ಪ್ರದರ್ಶನಕ್ಕೂ ಯಾವುದೇ ಸಂಬಂಧವಿಲ್ಲದ ಚಿತ್ರಗಳು ಎಂದು.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಚಿತ್ರಗಳನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಸಿಕ್ಕ ಮಾಹಿತಿಗಳು ಹೀಗಿವೆ.

ಚಿತ್ರ 1

ಈ ಚಿತ್ರ ಮಾರ್ಚ್ 1, 2017 ರ ಚಿತ್ರವಾಗಿದ್ದು, ಟ್ವಿಟ್ಟರ್‌ನಲ್ಲಿ ಸಿಗುತ್ತದೆ. ಗುಜರಾತಿ ಶೀರ್ಷಿಕೆಯೊಂದಿಗೆ ಇರುವ ಈ ಚಿತ್ರದಲ್ಲಿ “ದಕ್ಷಿಣ ಭಾರತದ ಚಿತ್ರದ ಮಾದರಿಯಲ್ಲಿ ವಧುವನ್ನು ಕರೆತರಲು ತಾರಾದ್‌ನ ವರನೊಬ್ಬ 30 ಸ್ಕಾರ್ಪಿಯೋಗಳನ್ನು ಬಳಸಿಕೊಂಡಿದ್ದಾನೆ, ವಾವ್ ಉತ್ತರ ಗುಜರಾತ್ ವಾವ್” ಎಂದು ಬರೆಯಲಾಗಿದೆ.

 

ಚಿತ್ರ 2

ಎರಡನೇ ಚಿತ್ರವನ್ನು ಕೂಡ ಗೂಗಲ್‌ನಲ್ಲಿ ಹುಡುಕಾಡಿದಾಗ ಅದು ನಮ್ಮನ್ನು 2016 ರಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಈ ಚಿತ್ರವನ್ನು 2016 ರಲ್ಲಿ ಬಾರ್ಮರ್ ಕಾಂಗ್ರೆಸ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಚಿತ್ರ 3

ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಈ ಚಿತ್ರವನ್ನು ಒಳಗೊಂಡ ಹಲವಾರು ವಿಡಿಯೋಗಳು ದೊರಕಿವೆ. ಈ ಚಿತ್ರ ಕರ್ಣಿ ಸೇನೆಯ ಗುಜರಾತ್ ಮುಖ್ಯಸ್ಥ ರಾಜ್ ಸಿಂಗ್ ಶೇಖಾವತ್ ಅವರ ಬೆಂಗಾವಲು ಪಡೆಯದ್ದಾಗಿದೆ.

ವೈರಲ್ ಆದ ಈ ಚಿತ್ರವನ್ನು ಶ್ರೀ ರಾಷ್ಟ್ರೀಯ ರಜಪೂತ ಕರ್ಣಿಸೇನಾ ಫೇಸ್‌ಬುಕ್ ಪುಟದಲ್ಲಿ 22 ಡಿಸೆಂಬರ್ 2019 ರಂದು ಪೋಸ್ಟ್  ಮಾಡಲಾಗಿದೆ. ಜೊತೆಗೆ “ಈ ಚಿತ್ರವನ್ನು ಗುಜರಾತ್‌ನ ಗಾಂಧಿನಗರದಲ್ಲಿ ಕ್ಲಿಕ್ಕಿಸಲಾಗಿದೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ವಿಡಿಯೋ

ಈ ವೈರಲ್ ಚಿತ್ರಗಳ ಜೊತೆಗೆ, ಕೆಲವು ವೈರಲ್ ಪೋಸ್ಟ್‌ಗಳು ಅದೇ ಸುಳ್ಳುನ್ನು ಹರಡಲು ಹಲವು ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇನ್ವಿಡ್ ಗೂಗಲ್ ಕ್ರೋಮ್ ವಿಸ್ತರಣೆಯನ್ನು ಬಳಸಿಕೊಂಡು ವೀಡಿಯೊವನ್ನು ಅನೇಕ ಕೀಫ್ರೇಮ್‌ಗಳಾಗಿ ವಿಂಗಡಿಸಿ ನೋಡಿದಾಗ ಇದು ಜಮ್ಮು ಮತ್ತು ಕಾಶ್ಮೀರದ ಚಿತ್ರ ಎಂದು ತಿಳಿಯುತ್ತದೆ.

2018 ರ ಅಕ್ಟೋಬರ್ 25 ರಂದು ಜಮ್ಮುವಿನಲ್ಲಿ ನಡೆಸಲಾದ ಮಹಾರಾಜ ಹರಿಸಿಂಗ್ ಜನ್ಮದಿನದ ಅಂಗವಾಗಿ ನಡೆದ ರ್‍ಯಾಲಿಯ ಚಿತ್ರವಾಗಿದೆ. ಇದನ್ನು ವಿಶಾಲ್ ಸಿಂಗ್ ಎನ್ನುವವರು ತಮ್ಮ ಯೂಟ್ಯೂಬ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ.

ಒಟ್ಟಿನಲ್ಲಿ ಈ ಎಲ್ಲಾ ವಿಡಿಯೋ ಮತ್ತು ಚಿತ್ರಗಳಿಗೆ ಕರ್ಣಿಸೇನಾ ಹಾಗೂ ಕಂಗನಾ ರಾಣಾವತ್‌ಗೆ ಬೆಂಬಲ ಪ್ರದರ್ಶನ ಎಂಬ ಸುದ್ದಿಗೂ ಯಾವುದೇ ಸಂಬಂಧವಿಲ್ಲ. ವೈರಲ್ ಆದ ಚಿತ್ರಗಳು, ವಿಡಿಯೋಗಳು ಸುಮಾರು ನಾಲ್ಕು ವರ್ಷಗಳ ಹಿಂದಿನದ್ದಾಗಿದೆ.


ಇದನ್ನೂ ಓದಿ: ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ ಹುಟ್ಟುಹಾಕಿದ್ದೇ ಬಿಜೆಪಿ: ಪ್ರಶಾಂತ್ ಭೂಷಣ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights