ನಟ ಸೂರ್ಯ ಬೆಂಬಲಕ್ಕೆ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು; ಪ್ರಕರಣ ದಾಖಲಿಸದಂತೆ ಮನವಿ
ನೀಟ್ ಪರೀಕ್ಷೆಯ ವಿರುದ್ಧ ಮಾತನಾಡಿದ್ದ ತಮಿಳು ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವ ಬೆನ್ನಲೇ, ಮದ್ರಾಸ್ ಹೈಕೋರ್ಟ್‌ನ 06 ನಿವೃತ್ತ ನ್ಯಾಯಾಧೀಶರು ಪ್ರಕರಣ ದಾಖಲಿಸಬಾರದು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗೆ ಹೆದರಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಸೂರ್ಯ, ‘ಕೊರೊನಾ ವೈರಸ್‌ನಿಂದಾಗಿ ತಮ್ಮ ಜೀವಕ್ಕೆ ಹೆದರಿ, ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯವನ್ನು ನೀಡುವ ನ್ಯಾಯಾಲಯ, ವಿದ್ಯಾರ್ಥಿಗಳನ್ನು ಮಾತ್ರ ನಿರ್ಭಯವಾಗಿ ಹೋಗಿ ಪರೀಕ್ಷೆಗಳನ್ನು ಬರೆಯುವಂತೆ ಆದೇಶಿಸುತ್ತದೆ’ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಈ ಟ್ವೀಟ್ ನ್ಯಾಯಾಂಗವನ್ನು ನಿಂದಿಸಿದ್ದು, ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರರಕಣ ದಾಖಲಿಸಬೇಕು ಎಂದು ಮದ್ರಾಸ್ ಐಕೋರ್ಟ್‌ನ ನ್ಯಾಯಮೂರ್ತಿ ಎಂ ಸುಬ್ರಹ್ಮಣಿಯನ್ ಅವರು ಮದ್ರಾಸ್ ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದ್ದರು.
ಹೀಗಾಗಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ ಚಂದ್ರು, ಕೆ ಎನ್ ಬಾಷಾ, ಟಿ ಸುದಂತಿರಾಮ್, ಡಿ ಹರಿಪರಂತಮನ್, ಕೆ ಕಣ್ಣನ್ ಮತ್ತು ಜಿ ಎಂ ಅಕ್ಬರ್ ಅಲಿ ಅವರು ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಅವರಿಗೆ ಪತ್ರ ಬರೆದಿದ್ದಾರೆ.
“ಸೂರ್ಯ ಅವರು ಚಾರಿಟಬಲ್ ಟ್ರಸ್ಟ್ ಮೂಲಕ ಮಾಡಿರುವ ಒಳ್ಳೆಯ ಕೆಲಸಗಳನ್ನು ಈ ಮೂಲಕ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗಿರುವುದನ್ನು ಪರಿಗಣಿಸಿ, ಸೂರ್ಯ ಅವರ ಹೇಳಿಕೆಯನ್ನು ಅರಿವಿನ ವ್ಯಾಪ್ತಿಗೆ ತೆಗೆದುಕೊಳ್ಳಬಾರದು ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: NEET exam: ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನ್ಯಾಯಧೀಶರ ಒತ್ತಾಯ