ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ಕೊಡಿ: ಕೇಂದ್ರಕ್ಕೆ ಬಿಎಸ್‌ವೈ ಮನವಿ!

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ನಾನಾ ವಿಚಾರಗಲ ಕುರಿತು ಚರ್ಚಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪನವರು ಎರಡು ದಿನಗಳ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವ 14 ನೇ ಹಣಕಾಸು ಆಯೋಗದ ಶಿಫಾರಸನ್ನು ಅಂಗೀಕರಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ರಾಜ್ಯದ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ್ದರೂ, ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಹಲವಾರು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಕೇಳಿದ್ದ 2,100 ಕೋಟಿ ರೂ.ಗಳ ಬದಲಾಗಿ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕ್ಷಮತೆ ಅನುದಾನವಾಗಿ ಕೇವಲ 869.40 ಕೋಟಿ ರೂ. ಅನುದಾನ ದೊರೆತಿದೆ. ಬಾಕಿ ಮೊತ್ತ 1,230 ಕೋಟಿ ರೂ. ಬಿಡುಗಡೆ ಮಾಡಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNGREGA) ಯೋಜನೆಗೆ ಸಂಬಂಧಿಸಿದಂತೆ, ಸುಮಾರು 665.09 ಕೋಟಿ ರೂ.ಗಳ ಬಾಕಿ ಉಳಿದಿದ್ದು, ಜೊತೆಗೆ 54.65 ಕೋಟಿ ರೂ.ಗಳ ಕೌಶಲ್ಯರಹಿತ ವೇತನ ಬಾಕಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಕೋರಿದ್ದಾರೆ. ಇದರೊಂದಿಗೆ ಕೊರೊನಾ ವೈರಸ್‌ನಿಂದ ಉದ್ಯೋಗದ ಅಭಾವ ಹೆಚ್ಚಾಗಿದ್ದು, ಉದ್ಯೋಗ ಖಾತರಿ ದಿವಸಗಳಲ್ಲಿ ಇನ್ನು 50 ದಿನಗಳನ್ನು ಹೆಚ್ಚುವರಿಯಾಗಿ ಸೇರಿಸಲು ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಹೊಸ ಡಿಆರ್‌ಡಿಒ ಸೌಲಭ್ಯ

ಸಿಎಂ ಯಡಿಯೂರಪ್ಪ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನಿನ್ನೆಯೇ ಭೇಟಿಯಾಗಿ, ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(DRDO) ಸ್ವತಂತ್ರ ಪ್ರಯೋಗಾಲಯವನ್ನು ನಿರ್ಮಿಸುವಂತೆ ಕೋರಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಿಆರ್‌ಡಿಒ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಪರಿಗಣಿಸಿದೆ. ಆದರೆ ರಾಜ್ಯವು ಶಿವಮೊಗ್ಗದಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ ಡಿಆರ್‌ಡಿಒ ಪ್ರಯೋಗಾಲಯ, ಅಪಾರ ಸಂಖ್ಯೆಯ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ನಿರೀಕ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೊತೆಗೆ  ಪ್ರಯೋಗಾಲಯ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಹಾಗೂ ಸಿಬ್ಬಂದಿಗೆ ಅಧಿಕೃತ ಕ್ವಾರ್ಟರ್ಸ್ ಅನ್ನು ರಾಜ್ಯ ಸರ್ಕಾರವು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರ ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.


ಇದನ್ನೂ ಓದಿ:  ಮೋದಿ ಸರ್ಕಾರದ ಕೃಷಿ ನೀತಿ ರೈತ ವಿರೋಧಿಯಾಗಿದೆ ಎಂದು ಸಚಿವ ಸ್ಥಾನಕ್ಕೆ ಕೇಂದ್ರ ಸಚಿವೆ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights