‘ರಾಜ್ಯದಲ್ಲಿ ಪ್ರವಾಹ ಮತ್ತು ಕೋವಿಡ್ -19 ಸವಾಲುಗಳಿಗೆ ಮೊದಲ ಆದ್ಯತೆ’ ಸಿಎಂ ಬೊಮ್ಮಾಯಿ!

ರಾಜ್ಯದಲ್ಲಿ ಪ್ರವಾಹ ಮತ್ತು ಕೋವಿಡ್ -19 ಸವಾಲುಗಳಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಸಿಎಂ ಬೊಮ್ಮೈ ಹೇಳಿದ್ದಾರೆ.

ಲಿಂಗಾಯತ ನಾಯಕ ಬಸವರಾಜ್ ಸೋಮಪ್ಪ ಬೊಮ್ಮಾಯಿ ಅವರು ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ರಾಜ್ ಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬೊಮ್ಮಾಯಿ ಅವರಿಗೆ ಪ್ರಮಾಣವಚನ ಬೋದಿಸಿದರು.

ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಬಸವರಾಜ್ ಬೊಮ್ಮೈ ಅವರು, “ಪ್ರವಾಹ ಮತ್ತು ಕೋವಿಡ್ -19 ಸವಾಲುಗಳಾಗಿದ್ದು, ಅವುಗಳಿಗೆ ಮೊದಲು ಆದ್ಯತೆ ನೀಡಲಾಗುವುದು. ಸಾಂಕ್ರಾಮಿಕ ರೋಗದ ಮಧ್ಯೆ ಬಡವರು, ರೈತರು ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಉನ್ನತೀಕರಿಸುವ ತಂಡವಾಗಿ ತಮ್ಮ ಸರ್ಕಾರ ಕೆಲಸ ಮಾಡುತ್ತದೆ. ಕರ್ನಾಟಕದ ಜನರು ನನ್ನ ಮೇಲೆ ಇರಿಸಿದ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಿಎಂ ಬೊಮ್ಮಾಯಿ, ರೈತರ ಮಕ್ಕಳಿಗೆ ಅವರ ಉನ್ನತ ಶಿಕ್ಷಣ ಪ್ರೋತ್ಸಾಹ ನೀಡಲು ಮತ್ತು ವಿದ್ಯೆಯಿಂದ ವಂಚಿತರಾಗಬಾರದೆಂಬ ಉದ್ದೇಶಕ್ಕೆ ಹೊಸ ಶಿಷ್ಯ ವೇತನ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಸರ್ಕಾರ 1 ಸಾವಿರ ಕೋಟಿ ಹಣ ಮೀಸಲಿಟ್ಟಿದೆ.

ಈಗಾಗಲೇ ಜಾರಿಯಲ್ಲಿರುವ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿಯನ್ನು ತಿಂಗಳಿಗೆ 1200 ರೂಪಾಯಿಗಳಿಗೆ ಏರಿಕೆ ಮಾಡುತ್ತಿದ್ದು ಇದರಿಂದ 35 ಲಕ್ಷ ಫಲಾನುಭವಿಗಳಿಗೆ ಲಾಭ ಉಂಟಾಗಲಿದೆ. ಸರ್ಕಾರಕ್ಕೆ 863 ಕೋಟಿ ರೂಪಾಯಿ ಹೆಚ್ಚು ಖರ್ಚಾಗಲಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ವಿಧವಾ ವೇತನವನ್ನೂ ಬೊಮ್ಮಾಯಿ ನೇತೃತ್ವದ ಸರ್ಕಾರ 600 ರಿಂದ 800 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಹಾಗೂ 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಶೇ.40-70 ಅಂಗವೈಕಲ್ಯವಿರುವವರಿಗೆ ಮಾಸಿಕವಾಗಿ ಈಗ ನೀಡಲಾಗುತ್ತಿರುವ 600 ರೂಪಾಯಿಗಳ ವೇತನವನ್ನು 800 ರೂಗೆ ಏರಿಕೆ ಮಾಡಲಾಗಿದ್ದು, 3.66 ಸಾವಿರ ಫಲಾನುಭವಿಗಳು ಪ್ರಯೋಜನವಾಗಲಿದ್ದು ಸರ್ಕಾರದ ಬೊಕ್ಕಸಕ್ಕೆ 90 ಕೋಟಿ ಹೆಚ್ಚು ವೆಚ್ಚವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

“ರೈತರ ಮಕ್ಕಳ ಉನ್ನತಿಯ ಬಗ್ಗೆ ಚಿಂತನೆ, ಬಡವರಿಗೆ ಸಹಾಯ ಮಾಡಲು ನನ್ನ ಸರ್ಕಾರದ ಆದ್ಯತೆ, ಈ ನಿಟ್ಟಿನಲ್ಲಿ ನನ್ನ ಚಿಂತನೆಯ ಮೊದಲ ಹೆಜ್ಜೆಯನ್ನು ಸಚಿವ ಸಂಪುಟದ ನಿರ್ಣಯದಲ್ಲಿ ಇಡಲಾಗಿದ್ದು, ಜನಕಲ್ಯಾಣ, ಬಡವ, ದೀನದಲಿತರ ಪರವಾಗಿ ಸರ್ಕಾರ ನಿಲ್ಲಲಿದೆ” ಎಂದು ಸಿಎಂ ಭರವಸೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *