ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರವಾಹ : 9 ಜನ ಮೃತ – 7 ಮಂದಿ ಕಾಣೆ!
ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಗೆ ಪ್ರವಾಹ ಉಂಟಾಗಿ ಒಂಬತ್ತು ಜನರು ಸಾವನ್ನಪ್ಪಿದ್ದು ಏಳು ಮಂದಿ ಕಾಣೆಯಾಗಿದ್ದಾರೆ.
ರಾಜ್ಯದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಏಳು ಜನರು ಮತ್ತು ಚಂಬಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೆಹಲಿಯ ಓರ್ವ ಪ್ರವಾಸಿ ಸೇರಿದಂತೆ ಕುಲ್ಲು ಜಿಲ್ಲೆಯಿಂದ ನಾಲ್ಕು ಜನರು ಕಾಣೆಯಾಗಿದ್ದಾರೆ. ಇನ್ನೂ ಲಾಹೌಲ್ ಮತ್ತು ಸ್ಪಿತಿಯಿಂದ ಮೂವರು ಕಾಣೆಯಾಗಿದ್ದಾರೆ. ರಾಜ್ಯ ರಾಜಧಾನಿ ಶಿಮ್ಲಾ ಮತ್ತು ಮಂಡಿ ಜಿಲ್ಲೆಯಲ್ಲಿ, ಭೂಕುಸಿತದಿಂದ ವಾಹನಗಳು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ.
ಕಾಣೆಯಾದವರು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ. ಸಿಕ್ಕಿಬಿದ್ದವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ತಂಡಗಳು ಕಾರ್ಯಾಚರಣೆ ನಡೆಸಿವೆ.
ಎನ್ಡಿಆರ್ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್, “ನಾವು ಲಾಹೌಲ್ ಮತ್ತು ಸ್ಪಿಟಿಯಲ್ಲಿ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕಾರ್ಯಚರಣೆಗೆ ಹವಾಮಾನ ಬದಲಾವಣೆ ಅಡ್ಡಿಯನ್ನುಂಟುಮಾಡುತ್ತಿದೆ” ಎಂದು ಹೇಳಿದರು.
ಫ್ಲ್ಯಾಷ್ ಪ್ರವಾಹದಿಂದಾಗಿ ಅನೇಕ ಕಡೆ ಭೂಕುಸಿತ ಹಾಗೂ ಅನೇಕ ಸೇತುವೆಗಳ ಕುಸಿತ ಉಂಟಾಗಿದೆ. ಹೆದ್ದಾರಿಗಳು ಮತ್ತು ಲಿಂಕ್ ರಸ್ತೆಗಳು ಹಾನಿಯಾಗಿವೆ. ವಿವಿಧ ಪ್ರದೇಶಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಮನಾಲಿ-ಲೇಹ್ ಹೆದ್ದಾರಿ ಮತ್ತು ಗ್ರಾಂಪು- ಕಾಜಾ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಭೂಕುಸಿತದಿಂದ ಕಲ್ಕಾ-ಶಿಮ್ಲಾ ಹೆದ್ದಾರಿ ಮತ್ತು ಚಂಡೀಗಢ- ಮನಾಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ಯಮುನಾ ಸೇರಿದಂತೆ ಹರಿಯಾಣದ ವಿವಿಧ ಉಪನದಿಗಳು ಮತ್ತು ಪ್ರಮುಖ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು ಜನ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಭಾಗಾ ನದಿಯ ನೀರಿನ ಮಟ್ಟ ಏರಿದ ನಂತರ ಲಾಹೌಲ್ ಮತ್ತು ಸ್ಪಿಟಿಯ ದಾರ್ಚಾ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಚಂಡೀಗಢ, ಪಂಜಾಬ್ ಮತ್ತು ಹರಿಯಾಣಕ್ಕೆ ಎಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ.