ಶೋಪಿಯನ್ ಎನ್ಕೌಂಟರ್ ನಕಲಿ; ಸೇನೆ ಕಾನೂನು ಉಲ್ಲಂಘಿಸಿದೆ: ಕ್ರಮಕ್ಕೆ ಮುಂದಾದ ಸೇನೆ!
ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ಯುವಕರನ್ನು ಹತ್ಯೆ ಮಾಡಿದ್ದವು. ಆದರೆ, ಘಟನೆ ನಕಲಿ ಎನ್ಕೌಂಟರ್ ಆಗಿದ್ದು, ಕಾನೂನು ಉಲ್ಲಂಘನೆ ಕಂಡುಬಂದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಸೈನಿಕರು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA) ಉಲ್ಲಂಘಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಜುಲೈ 18 ರಂದು ಸೈನ್ಯವು ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಎಂಬ ಅನುಮಾನದ ಮೇಲೆ ಮೂವರು ಯುವಕರನ್ನು ಕೊಂದಿತ್ತು. ಈ ಘಟನೆಯ ತನಿಖೆ ನಡೆಸಲಾಗಿತ್ತು.
ಇದನ್ನೂ ಓದಿ: Fact Check: ಲಡಾಕ್ನಲ್ಲಿ ಚೀನಾ ಆಕ್ರಮಿತ ಭೂ ಪ್ರದೇಶವನ್ನು ಪುನಃ ಪಡೆದುಕೊಂಡ ನಂತರ ಸೇನೆ ನೃತ್ಯ ಮಾಡಿ ರಂಜಿಸಿತ್ತೇ?
ಮಿಲಿಟರಿ ದಳದಲ್ಲಿ ನಡೆಸಿದ ಆಂತರಿಕ ತನಿಖೆಯಲ್ಲಿ ಈ ವಿಷಯ ಕಂಡುಕೊಂಡಿದ್ದು, ಯುವಕರನ್ನು ನಕಲಿ ಎನ್ಕೌಂಟರ್ ಮೂಲಕ ಹತ್ಯೆಗೈಯ್ಯಲಾಗಿತ್ತು ಎಂಬ ಆರೋಪವನ್ನು ಅವರ ಕುಟುಂಬಗಳು ಮಾಡಿದ್ದವು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಆಗ ಸೈನ್ಯವು ಈ ವಿಷಯವನ್ನು ಪರಿಶೀಲಿಸಿತ್ತು.
1990 ರ AFSPA ಕಾಯ್ದೆಯು ಸೈನ್ಯವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಈ ಕಾಯ್ದೆಯ ಉಲ್ಲಂಘನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ ಎಂದು ಸೈನ್ಯವು ತಿಳಿಸಿದೆ.
ರಾಜೌರಿಯ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ್, ಅಕ್ಬರ್ ಅಹ್ಮದ್ ಮತ್ತು ಮೊಹಾದ್ ಇಬಾರ್ ಎಂಬವರನ್ನು ಸೈನ್ಯದಿಂದ ಕೊಲ್ಲಲ್ಪಟ್ಟಿದ್ದರು.
ಇದನ್ನೂ ಓದಿ: ಪುಲ್ವಾಮ ರೀತಿಯ ಮತ್ತೊಂದು ದಾಳಿಯನ್ನು ನಿಗ್ರಹಿಸಿದ ಭಾರತೀಯ ಸೇನೆ!

