ಸಂಪುಟ ವಿಸ್ತರಣೆ : ಹಳ್ಳಿಹಕ್ಕಿ ಕೈಬಿಡ್ತಾರಾ ಬಿಎಸ್ವೈ..? : ಮೂಲ ಬಿಜೆಪಿ ನಾಯಕರಿಂದ ಅಪಸ್ವರ..

ಹಳ್ಳಿಹಕ್ಕಿ ಖ್ಯಾತಿಯ ಮಾಜಿ ಸಚಿವ ಹೆಚ್.ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟ ಸೇರುವುದು ಅನುಮಾನ ಎನ್ನಲಾಗಿದ್ದು, ಮತ್ತೆ ಲಕ್ ಕೈಕೊಡ್ತಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನಗೊಳಿಸುವ ಪಣತೊಟ್ಟು ನಾಯಕತ್ವ ವಹಿಸಿ ಅದರಲ್ಲಿ ಯಶಸ್ಸು ಕಂಡಿದ್ದವರು ಹೆಚ್.ವಿಶ್ವನಾಥ್. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗುಡ್‍ಬೈ ಹೇಳಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ತಿರುಗೇಟು ನೀಡಿದ್ದರು.

ರಾಜೀನಾಮೆ ನಂತರ ತೆರವಾಗಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಹೆಚ್.ವಿಶ್ವನಾಥ್ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಸರ್ಕಾರ ನಾಮಕರಣ ಮಾಡಿದೆ.
ಬಿಎಸ್‍ವೈ ಸಂಪುಟ ಸೇರಲು ಕಳೆದ ಒಂದು ವರ್ಷದಿಂದ ಹೆಚ್.ವಿಶ್ವನಾಥ್ ಸರ್ಕಸ್ ನಡೆಸುತ್ತಲೇ ಬಂದಿದ್ದಾರೆ. ಮೊದಲ ಎರಡು ಸಂಪುಟ ವಿಸ್ತರಣೆಯಲ್ಲೂ ವಿಶ್ವನಾಥ್ ಹೆಸರು ಕೈಬಿಡಲಾಗಿತ್ತು. ನಾಳೆ ಅಥವಾ ಸದ್ಯದಲ್ಲೇ ನಡೆಯಲಿರುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲೂ ಹೆಚ್.ವಿಶ್ವನಾಥ್ ಹೆಸರು ಇಲ್ಲ ಎನ್ನಲಾಗಿದೆ.

ಸಚಿವ ಸ್ಥಾನ ಹಿಡಿಯಲೇಬೇಕು ಎಂದು ಮೈತ್ರಿ ಸರ್ಕಾರ ಕೆಡವಿದ್ದ ವಿಶ್ವನಾಥ್‍ಗೆ ಬಿಜೆಪಿಯಲ್ಲಿ ಒಂದಲ್ಲಾ ಒಂದು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ.

ಹಳ್ಳಿಹಕ್ಕಿ ವಿಶ್ವನಾಥ್ ನಂಬಿಕೆಗೆ ಅರ್ಹರಲ್ಲ, ಬಹಳ ವರ್ಷ ಯಾವ ಪಕ್ಷದಲ್ಲೂ ಇರುವುದಿಲ್ಲ ಎಂದು ಮೂಲ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ. ಬಿಜೆಪಿ ಸಿದ್ಧಾಂತಗಳಿಗೆ ತದ್ವಿರುದ್ಧವಾದ ವ್ಯಕ್ತಿತ್ವ ಹೊಂದಿರುವ ವಿಶ್ವಾನಾಥ್, ಒಂದು ರೀತಿಯಲ್ಲಿ ಸೆರಗಿನ ಕೆಂಡ ಇದ್ದಂತೆ. ಇತ್ತೀಚೆಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ಶಾಲಾ ಪಠ್ಯ ಇರಬೇಕು ಎಂದು ಹೇಳಿ ಹೊಗಳುವ ಮೂಲಕ ಬಿಜೆಪಿ ನಾಯಕರು ಇರಿಸು ಮುರಿಸು ಆಗುವಂತೆ ಮಾಡಿದ್ದರು.

ಹೀಗಾಗಿ ಹೆಚ್.ವಿಶ್ವನಾಥ್‍ಗೆ ಸದ್ಯ ಸಚಿವ ಸಂಪುಟ ಸೇರುವ ಅದೃಷ್ಟ ಕ್ಷೀಣ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ವಿಶ್ವನಾಥ್ ಸಂಪುಟ ಸೇರಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಯಾವುದಕ್ಕೂ ಕಾಲವೇ ಉತ್ತರ ನೀಡಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights