ಮಥುರಾದಲ್ಲಿ ಈದ್ಗಾ ಮಸೀದಿ ತೆರವಿಗಾಗಿ ಸಲ್ಲಿಸಿದ್ದ ಅರ್ಜಿ ವಜಾ!

ಮಥುರಾದಲ್ಲಿ ಶ್ರೀಕೃಷ್ಣನ ಜನಿಸಿದ ಸ್ಥಳದಲ್ಲಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಹಾಗಾಗಿ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಮಥುರಾ ಸಿವಿಲ್‌ ಕೋರ್ಟ್‌ ವಜಾಗೊಳಿಸಿದೆ.

ಲಖನೌ ಹೈಕೋರ್ಟ್‌ನಲ್ಲಿ ಅಯೋಧ್ಯ ಮೊಕದ್ದಮೆಯಲ್ಲಿ ವಾದಿಸಿದ್ದ ವಕೀಲರಲ್ಲಿ ಒಬ್ಬರಾದ ರಂಜನಾ ಅಗ್ನಿಹೋತ್ರಿ ಅವರು, ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವ ಸ್ಥಳದ ಮೇಲೆ ಶ್ರೀಕೃಷ್ಣ ದೇವಾಲಯಕ್ಕೆ ಮಾಲೀಕತ್ವವನ್ನು ಪಡೆಯಲು ಮತ್ತು ಮಸೀದಿಯನ್ನು ತೆಗೆಯಬೇಕೆಂದು ಕೋರಿ ಮೊಕದ್ದಮೆ ಹೂಡಿದ್ದರು. ಈ ಅರ್ಜಿಯನ್ನು ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991ರ ಅಡಿಯಲ್ಲಿ ನ್ಯಾಯಾಲಯ ವಜಾಗೊಳಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಕೆಲವು ಮುಸ್ಲಿಮರ ಸಹಾಯದಿಂದ ಈದ್ಗಾ ಟ್ರಸ್ಟ್, ಶ್ರೀಕೃಷ್ಣ ಜನಂಸ್ಥಾನ್ ಟ್ರಸ್ಟ್ ಮತ್ತು ದೇವರಿಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿ ಈದ್ಗಾ ಮಸೀದಿ ನಿರ್ಮಿಸಿದೆ ಎಂದು ಮೊಕದ್ದಮೆಯಲ್ಲಿ ದೂರಲಾಗಿತ್ತು. ಶ್ರೀಕೃಷ್ಣನ ಜನ್ಮಸ್ಥಳವು ಟ್ರಸ್ಟ್ ರಚಿಸಿದ ಮಸೀದಿಯ ಕೆಳಗೆ ಇದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿತ್ತು.

ಇದನ್ನೂ ಓದಿ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ಬಳಿ ಮಸೀದಿ ತೆರವು ಕೋರಿ ಮೊಕದ್ದಮೆ!

ಅಲ್ಲದೆ ದೇವಾಲಯ ಆಡಳಿತ ಮಂಡಳಿಯಾಗಿರುವ ಶ್ರೀಕೃಷ್ಣ ಜನಂಸ್ಥಾನ್ ಸೇವಾ ಸಂಸ್ಥೆಯು ಆಸ್ತಿಯನ್ನು ಕಸಿದುಕೊಳ್ಳುವ ಉದ್ದೇಶದಿಂದ ಶಾಹಿ ಈದ್ಗಾ ಟ್ರಸ್ಟ್‌ನೊಂದಿಗೆ ಅಕ್ರಮ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು.

ಮೊಕದ್ದಮೆಯನ್ನು ವಜಾಗೊಳಿಸಲು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಹಿರಿಯ ವಿಭಾಗ) ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ಅನ್ನು ಉಲ್ಲೇಖಿಸಿದೆ. ಬಾಬರಿ ಮಸೀದಿಯನ್ನು ಅಕ್ರಮವಾಗಿ ಉರುಳಿಸಿದ ನಂತರ ಈ ಕಾಯ್ದೆ ಜಾರಿಗೆ ಬಂದಿತ್ತು.

ಈ ಕಾಯ್ದೆಯ ಪ್ರಕಾರ, ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಸ್ವಾತಂತ್ರ್ಯದ ಸಮಯದಲ್ಲಿ ಹೇಗಿತ್ತೋ ಹಾಗೆ ಉಳಿಸುತ್ತದೆ. ಕಾಯ್ದೆ ಜಾರಿಗೆ ಬಂದ ನಂತರ ಪ್ರಾರ್ಥನಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವ ಯಾವುದೇ ಮನವಿಯನ್ನು ಯಾವುದೇ ನ್ಯಾಯಾಲಯವು ಒಪ್ಪಿಕೊಳ್ಳುವುದಿಲ್ಲ ಎಂದು ಕಾಯಿದೆಯ ಸೆಕ್ಷನ್ 4 ಹೇಳುತ್ತದೆ. ಈ ಹಿನ್ನೆಲೆ ನ್ಯಾಯಾಲಯವು ಈದ್ಗಾ ಮಸೀದಿ ತೆರವು ಅರ್ಜಿಯನ್ನು ಕಾನೂನಿನ ಪ್ರಕಾರ ವಜಾಗೊಳಿಸಿತು.

ಸದ್ಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಎಚ್‌ಪಿ ಕರಸೇವಕರ ನಾಚಿಕೆಗೇಡಿನ ಕೃತ್ಯಗಳಿಗೆ ನ್ಯಾಯಾಂಗದ ಅನುಮೋದನೆ, ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ರಾಮ ಮಂದಿರವನ್ನು ನಿರ್ಮಿಸಲು ಅನುಮತಿ ಸಿಕ್ಕಿದೆ. ಜೊತೆಗೆ ಈಗ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿ ಅಂದು ಹಿಂಸಾಚಾರವನ್ನು ಪ್ರಚೋದಿಸಿದ ಎಲ್ಲ ಆರ್‌ಎಸ್‌ಎಸ್ ನಾಯಕರನ್ನು ಖುಲಾಸೆಗೊಳಿಸಿದೆ. ಇದು ಹಿಂದೂ ಮೂಲಭೂತವಾದಿಗಳಲ್ಲಿ ನಿರ್ಭಯದ ಭಾವನೆಯನ್ನು ಸೃಷ್ಟಿಸಿದೆ.

ಈದ್ಗಾ ಮಸೀದಿಯನ್ನು ತೆರುವುಗೊಳಿಸುವ ಮೊದಲಿನ ಪ್ರಯತ್ನಕ್ಕೆ ಸೋಲಾಗಿದೆ. ಕಾನೂನು ಕೂಡ ಮಸೀದಿ ತೆರವಿಗೆ ಅನುಮತಿ ನೀಡುವುದಿಲ್ಲ. ಆದರೂ ಇವೆಲ್ಲದರ ನಡುವೆಯೂ ಹಿಂದುತ್ವ ಕಾರ್ಯಕರ್ತರು ಮಸೀದಿ ತೆರವಿಗೆ ಒತ್ತಾಯಿಸುತ್ತಿದ್ದಾರೆ.

ಪ್ರಸ್ತುತ ರಾಮ ಜನ್ಮಭೂಮಿಯ ಉತ್ಸಾಹವು ಕಳೆದಿದೆ ಹಾಗಾಗಿ ಈ ಮೊಕದ್ದಮೆಯು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸಲು ಮತ್ತು ಸರ್ಕಾರದ ವೈಫಲ್ಯಗಳನ್ನು ಗಮನಿಸದಂತೆ ದೇಶದ ಜನರನ್ನು ಬೇರೆಡೆಗೆ ಸೆಳೆಯುವ ಮತ್ತೊಂದು ಪ್ರಚಾರ ಅಭಿಯಾನದ ಆರಂಭವನ್ನು ಸೂಚಿಸುತ್ತದೆ.


ಇದನ್ನೂ ಓದಿ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ಬಳಿ ಮಸೀದಿ ತೆರವು ಕೋರಿ ಮೊಕದ್ದಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights