ಅಂತರ್ಜಾತಿ ವಿವಾಹ: 29 ದಲಿತ ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ!

ದೌರ್ಜನ್ಯ ತಡೆ (ಎಸ್‌ಸಿ /ಎಸ್‌ಟಿ) ಕಾಯ್ದೆಯಡಿ ಹಿಂದೂ ಜಾತಿಯವರ (ಅತಿ ಹಿಂದುಳಿದ ಸಮುದಾಯ) ವಿರುದ್ಧ ದಲಿತರು ದಾಖಲಿಸಿದ್ದ ದೂರನ್ನು ಹಿಂತೆಗೆದುಕೊಳ್ಳದ ಕಾರಣ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉಲಗಂ ಹಳ್ಳಿಯಲ್ಲಿ 29 ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಅಲ್ಲದೆ, ಅವರಿಗೆ ಯಾರಾದರೂ ಸಹಾಯ ಮಾಡಿದರೆ 5,000ದಿಂದ 10,000ದ ವರೆಗೆ ದಂಡ ಹಾಕಲಾಗುವುದು ಎಂದು ಹೇಳಲಾಗಿದೆ. ಹಾಗಾಗಿ ದಲಿತ ಕಾಲೋನಿಗೆ ಬರುತ್ತಿದ್ದ ಹಾಲು, ನೀರು ನಿಲ್ಲಿಸಲಾಗಿದೆ. ದಿನಸಿ ಅಂಗಡಿಯವರು ದಿನಸಿ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅಲ್ಲಿನ ದಲಿತರು ಆರೋಪಿಸಿದ್ದಾರೆ.

“ಏನಾಗುತ್ತಿದೆ ಎಂಬುದೇ ನಮಗೆ ತಿಳಿಯುತ್ತಿಲ್ಲ. ಅಂಗಡಿಯವರು ಇದ್ದಕ್ಕಿದ್ದಂತೆ ನಮಗೆ ದಿನಸಿ ನೀಡಲು ನಿರಾಕರಿಸಿದ್ದಾರೆ. ಅಕ್ಟೋಬರ್ 2 ರಿಂದ ನಮ್ಮ ಮನೆಗಳಿಗೆ ಹಾಲು ನೀಡುತ್ತಿದ್ದವರು ಬಂದಿಲ್ಲ. ಹಳ್ಳಿಯ ಕೊಳಾಯಿಗಳಿಂದ ನಮಗೆ ನೀರು ಬಂದಿಲ್ಲ’ ಎಂದು ಹೊಸೂರಿನ ಉಲಗಂ ಗ್ರಾಮದ ದಲಿತ ಕಾಲೋನಿ ಮಹಿಳೆ ಆತಂಕ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಉಲಗಂ ಹಳ್ಳಿಯ 22 ವರ್ಷದ ದಲಿತ ಯುವಕ ಸೂರ್ಯಕುಮಾರ್, ಅತಿ ಹಿಂದುಳಿದ ಸಮುದಾಯಕ್ಕೆ (MBC) ಸೇರಿದ ಕುರುಂಬಾರ್ ಜಾತಿಗೆ ಸೇರಿದ ಹೊಸೂರಿನ ಮಣಿಯಂಗಲ್ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಊರು ಬಿಟ್ಟು ಹೋಗಿದ್ದರು.

ಇದನ್ನೂ ಓದಿ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲಿಸಿದ ಪೊಲೀಸ್‌

ಘಟನೆ ನಡೆದ ಕೂಡಲೇ ಬಾಲಕಿಯ ಪೋಷಕರು ಅಪಹರಣದ ಆರೋಪ ಮತ್ತು ಪೊಕ್ಸೊ ಕಾಯ್ದೆಯಡಿ ಸೂರ್ಯ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದರೆ, ಇತ್ತ ಸೂರ್ಯಕುಮಾರ್ ಅವರ ಕುಟುಂಬ ವಾಸಿಸುವ ಉಲಗಂ ಗ್ರಾಮದಲ್ಲಿ ಕುರುಂಬಾರ್ ಸಮುದಾಯದ ಜನ ದಲಿತ ಕಾಲೋನಿ ಮತ್ತು ಅಲ್ಲಿನ ಜನರ ಮೇಲೆ ಹಲ್ಲೆ ನಡೆಸಿದ್ದರು. ಗ್ರಾಮದ ದಲಿತ ಜನರ ದೂರಿನ ಆಧಾರದ ಮೇಲೆ ಪೊಲೀಸರು 30 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರು ತಿಂಗಳ ನಂತರ ಕುರುಂಬಾರ್‌ ಸಮುದಾಯದ ಹುಡುಗಿಗೆ 18 ವರ್ಷ ಆದಾಗ, ಎರಡೂ ಕುಟುಂಬಗಳು ಸೇರಿ ಸೂರ್ಯಕುಮಾರ್ ಅವರೊಂದಿಗೆ ಆಕೆಯ ಮದುವೆ ಮಾಡಿದ್ದಾರೆ. ನಂತರ ಹುಡುಗಿಯ ಕುಟುಂಬ ಸೂರ್ಯಕುಮಾರ್ ವಿರುದ್ಧ ಸಲ್ಲಿಸಿದ್ದ ಪ್ರಕರಣವನ್ನು ಹಿಂತೆಗೆದುಕೊಂಡರು. ಆದರೆ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದವರರ ಮೇಲೆ ದಲಿತರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಿಸಿದ್ದ ದೂರನ್ನು ವಾಪಾಸ್ ಪಡೆದಿರಲ್ಲ. ಈ ಪ್ರಕರಣ ಅಕ್ಟೋಬರ್ 1 ರಂದು ವಿಚಾರಣೆಗೆ ಬಂದಿತ್ತು.

“ಅವರು ಪ್ರಕರಣವನ್ನು ಹಿಂಪಡೆಯಲು ನಮಗೆ ಅನೇಕ ಬಾರಿ ಹೇಳಿದರು. ಅವರ್‍ಯಾರು ಹುಡುಗಿಯ ಸಂಬಂಧಿಗಳಲ್ಲ ಅಥವಾ ಅವರು ಹುಡುಗಿಯ ಹಳ್ಳಿಗೆ ಸೇರಿದವರಲ್ಲದ ಕಾರಣ ನಾವು ಪ್ರಕರಣವನ್ನು ಹಿಂತೆಗೆದುಕೊಳ್ಳಲು ಇಷ್ಟಪಡಲಿಲ್ಲ” ಎಂದು ಉಲಗಂ ಗ್ರಾಮಸ್ಥ ಟಿ.ಸೇತು ಹೇಳುತ್ತಾರೆ.

ಇದನ್ನೂ ಓದಿ: ಭೂಸ್ವಾಧೀನಕ್ಕಾಗಿ ದಲಿತ ಕುಟುಂಬದ ಮೇಲೆ ಅಧಿಕಾರ ದೌರ್ಜನ್ಯ; ಜಿಲ್ಲಾಧಿಕಾರಿ, ಎಸ್‌ಪಿ ಅಮಾನತು

ಅಕ್ಟೋಬರ್‌ 1ರಂದು ವಿಚಾರಣೆ ಎದುರಿಸಿ ಗ್ರಾಮಕ್ಕೆ ಹಿಂತಿರುಗಿದಾಗ, ಡಂಗೂರ ಬಾರಿಸುವ ಮೂಲಕ ನಮ್ಮನ್ನು ಬಹಿಷ್ಕರಿಸಲಾಗಿದೆ. ಗ್ರಾಮದ ದಲಿತ ಜನರಿಗೆ ದಿನಸಿ, ಹಾಲು ಮತ್ತು ನೀರು ನೀಡುವ ಜನರಿಂದ 5,000 ರೂ.ಗಳ ದಂಡವನ್ನು ವಸೂಲಿ ಮಾಡಬೇಕೆಂದು ಗ್ರಾಮ ಜಾತಿ ಪಂಚಾಯತ್ ಆದೇಶಿಸಿದೆ ಎಂದು ಸೇತು ತಿಳಿಸಿದ್ದಾರೆ.

ಗ್ರಾಮದಲ್ಲಿ ನಮ್ಮ ಸಮುದಾಯದವರು 29 ಕುಟುಂಬಗಳಿವೆ. ಕುರುಂಬಾರ್‌ ಸಮುದಾಯದ 300 ಕುಟುಂಬಗಳಿವೆ. ಹಾಗಾಗಿ ಅವರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗ ಬಹಿಷ್ಕಾರ ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕಂದಾಯ ಅಧಿಕಾರಿ ಗುಣಶೇಖರನ್ ಘಟನೆಯ ಬಗ್ಗೆ ತಿಳಿದಿಲ್ಲ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಬೈಕ್ ಮುಟ್ಟಿದ್ದಕ್ಕಾಗಿ ದಲಿತ ಯುವಕನ ಅರೆಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ: 18 ಜನರ ವಿರುದ್ಧ FRI

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights