ಬೈ-ಎಲೆಕ್ಷನ್ ಸೋಲು: ಭಯದಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಕೇಂದ್ರ ಸರ್ಕಾರ!
ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ ಲೀ.ಗೆ 5 ರೂ ಮತ್ತು ಡೀಸೆಲ್ ಮೇಲೆ ಲೀ.ಗೆ 7 ರೂ ಕಡಿತ ಮಾಡಿದೆ. ಹೀಗಾಗಿ, ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 105 ರೂ. ಮತ್ತು ಡೀಸೆಲ್ ದರ 88.4 ರೂ.ಗೆ ಇಳಿದಿದೆ.
ಇತ್ತೀಚೆಗೆ ನಡೆದ 13 ರಾಜ್ಯಗಳಲ್ಲಿ ಒಟ್ಟು 32 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗವನ್ನು ಅನುಭವಿಸಿದ್ದು, ಕೇವಲ 8 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ, ಚುನಾವಣಾ ಭಯದಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.
ಸುಂಕ ಕಡಿತದಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ಗೆ 32.9 ರೂ. ಇದ್ದ ಸುಂಕವು 27.9 ರೂಗೆ ಕಡಿತಗೊಂಡಿದೆ. ಅದೇ ರೀತಿಯಲ್ಲಿ ಪ್ರತಿ ಲೀಟರ್ ಡೀಸೆಲ್ಗೆ 31.8 ರೂ ಇದ್ದ ಸುಂಕವು 21.8 ರೂ.ಗೆ ಇಳಿದಿದೆ.
ಕೇಂದ್ರ ಸರ್ಕಾರ ಸುಂಕ ಕಡಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಕರ್ನಾಟಕದ ರಾಜ್ಯ ಸರ್ಕಾರವೂ ಕೂಡ ಸುಂಕ ಕಡಿತಗೊಳಿಸುವುದಾಗಿ ಘೋಷಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ 7 ರೂ. ಗಳಷ್ಟು ಕಡಿಮೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇದು, ಗುರುವಾರ ಸಂಜೆಯಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಸುಂಕ ಕಡಿತ ಇನ್ನೂ ಜಾರಿಗೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ಗೆ 107.64 ರೂ ಮತ್ತು ಡೀಸೆಲ್ಗೆ 92.3 ರೂ ಇದೆ. ಇಂದು ಸಂಜೆ ರಾಜ್ಯ ಸರ್ಕಾರದ ಸುಂಕ ಕಡಿತ ಜಾರಿಯಾದ ನಂತರ, ಪೆಟ್ರೋಲ್ ಬೆಲೆ 100 ರೂ ಮತ್ತು ಡೀಸೆಲ್ ಬೆಲೆ 86 ರೂ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಉಪಚುನಾವಣೆ: ದೇಶದ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು; ಎರಡನೇ ಸ್ಥಾನದಲ್ಲಿ ಬಿಜೆಪಿ!