ಹಿಂದಿ ರಾಷ್ಟ್ರಭಾಷೆಯಲ್ಲ; ಕರ್ನಾಟಕದಲ್ಲಿ ಹಿಂದಿ ಹೇರಿಕೆ ಸರ್ಕಾರ ಅಂದುಕೊಂಡಿರುವಷ್ಟು ಸುಲಭವಲ್ಲ: ಹೆಚ್‌ಡಿಕೆ

ಕಳೆದ ಕೆಲವು ವರ್ಷಗಳಿಂದ ಹಿಂದಿ ದಿವಸ್‌ ಆಚರಣೆ ಮಾಡಲಾಗುತ್ತಿದ್ದು, ಹಿಂದಿಯೇತರ ರಾಜ್ಯಗಳು ಹಿಂದಿ ದಿವಸದ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಅದರಲ್ಲಿಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಲಾಗುತ್ತಿದ್ದು, ಹಿಂದಿ ಹೇರಿಕೆ ಯ ವಿರುದ್ಧ ಅಭಿಯಾನಗೇ ನಡೆಯುತ್ತಿವೆ.

ಇಂದು ಹಿಂದಿ ದಿವಸ್‌ ಆಚರಣೆ ಮಾಡಲಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹಿಂದಿ ಭಾಷೆಯನ್ನು ಸಿದ್ಧಾಂತದ ವಿಚಾರವಾಗಿ ಪರಿವರ್ತಿಸಲಾಗಿದೆ. ರಾಷ್ಟ್ರೀಯತೆ, ದೇಶಭಕ್ತಿ, ಹಿಂದುತ್ವದೊಂದಿಗೆ ಹಿಂದಿಯನ್ನು ಸಮೀಕರಿಸಲಾಗಿದೆ. ಇದು ಅತ್ಯಂತ ದೊಡ್ಡ ದೇಶದ್ರೋಹದ ಕೆಲಸ ಎಂದು ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿದ್ದು, ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಆಡಳಿತದಲ್ಲಿ ಹಿಂದಿ ಜಾರಿಗೆ ಬಂದಿದ್ದಕ್ಕಾಗಿ, ಹಿಂದಿ ಜಾರಿ ಹೋರಾಟ ಮಾಡಿದ ಬೋಹರ್‌ ರಾಜೇಂದ್ರ ಸಿಂಹ ಜನ್ಮದಿನದ ನೆನಪಿಗಾಗಿ ಸೆ. 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ರಾಜೇಂದ್ರ ಸಿಂಹ ಹುಟ್ಟುಹಬ್ಬದಲ್ಲಿ, ಹಿಂದಿ ಆಡಳಿತ ಭಾಷೆ ಆಗಿದ್ದರಲ್ಲಿ ಹಿಂದಿಯೇತರರು ಸಂಭ್ರಮಿಸುವುದು ಏನಿದೆ? ನಿರ್ಥಕ ಹಿಂದಿ ದಿವಸ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಹಿಂದಿಯನ್ನು ಸುಲಭವಾಗಿ ಹೇರಬಹುದು ಎಂದು ಹಿಂದಿ ಶ್ರೇಷ್ಠತೆ ವ್ಯಸನಿಗಳು ಅಂದಾಜಿಸಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರ ನಡತೆಯೂ ಕಾರಣವಿರಬಹುದು. ಕನ್ನಡಿಗರದ್ದು ಸೌಹಾರ್ದ ಗುಣ. ಅದನ್ನು ದೌರ್ಬಲ್ಯ ಎಂದೆಣಿಸುವುದು ಬೇಡ. ಕನ್ನಡಿಗರ ಐತಿಹಾಸಿಕವಾದ ಮತ್ತೊಂದು ಗುಣ ಸಿಡಿದರೆ ಎಲ್ಲರೂ ತರಗೆಲೆಗಳೇ.

ಹಿಂದಿ ಹೇರಿಕೆಗೆ ಕಲಿಕೆ ನೆಪ ನೀಡಲಾಗುತ್ತಿದೆ. ಕಲಿಕೆ ಎಂದಿಗೂ ಆಯ್ಕೆಯೇ ಹೊರತು ಹೇರಿಕೆಯಿಂದ ಕಲಿಕೆಯಾಗಲು ಸಾಧ್ಯವಿಲ್ಲ. ಭಾಷೆಯೊಂದರ ಹೇರಿಕೆಯು ಇನ್ನೊಂದು ಭಾಷೆಯ ಅಸ್ಮಿತೆಯನ್ನು ಪ್ರಶ್ನಿಸುವಂತಿರಬಾರದು. ಭಾಷೆಯ ಹೇರಿಕೆಯು ಮತ್ತೊಂದು ಭಾಷೆಯ ಅವಸಾನಕ್ಕೆ ದಾರಿಯಾಗಬಾರದು. ದೇಶದ ಸಂಸ್ಕೃತಿ, ವೈವಿದ್ಯತೆ, ಸಮಗ್ರತೆಗೆ ಧಕ್ಕೆ ತರಬಾರದು ಎಂದಿದ್ದಾರೆ.

Read Also: ಬ್ರಾಹ್ಮಣರ ಕೈಗೆ ಕುರಾನ್‌ ಕೊಟ್ಟಂತಿದೆ ಹಿಂದಿ ಹೇರಿಕೆ: IRS ಅಧಿಕಾರಿ ಬಾಲಮುರುಗನ್

ವಿವಿಧ ಭಾಷೆಗಳನ್ನು ಆಡುವ ಭಾರತೀಯರ ದೇಶಭಕ್ತಿಯನ್ನು ಭಾಷೆ ಮೂಲಕ ಅಳೆಯುವುದು ಅಪಚಾರ, ಇದು ದೇಶದ ಸಮಗ್ರತೆಗೆ ಎಸೆದ ಸವಾಲಾಗಿದೆ. ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಹಿಂದಿಯನ್ನು ಸುಲಭವಾಗಿ ಹೇರಬಹುದು ಎಂದು ಹಿಂದಿ ಶ್ರೇಷ್ಠತೆ ವ್ಯಸನಿಗಳು ಅಂದಾಜಿಸಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರ ಪ್ರೋತ್ಸಾಹ, ಬೆಂಬಲವೂ ಕಾರಣವಿರಬಹುದು. ಕನ್ನಡಿಗರದ್ದು ಸೌಹಾರ್ದ ಗುಣ. ಅದನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಗೊಂದಲಕಾರಿ ಅಂಶಗಳಿವೆ. ಇದೇ ಗುರಾಣಿ ಹಿಡಿದು ಹಿಂದಿ ಹೇರಿಕೆ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸಲೇ ಬಂದಿರುವ ಬಿಜೆಪಿಗರು, ಒಂದೊಳ್ಳೆ ಕಾರಣಕ್ಕಾಗಿ ಇದನ್ನು ಬದಲಿಸಲಿ. ಈ ಮೂಲಕ ಕನ್ನಡವೂ ಸೇರಿ ಅನ್ಯ ಭಾಷೆಗಳ ಅಸ್ಮಿತೆಯನ್ನು ರಕ್ಷಿಸಲಿ ಎಂದು ಆಗ್ರಹಿಸಿದ್ದಾರೆ.

ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ, ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ. ಹಿಂದಿ ದಿವಸ ಆಚರಣೆ ಅಂಥವುಗಳಲ್ಲಿ ಒಂದು. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಸರ್ಕಾರಿ ಸೇವೆಗಳು ಕನ್ನಡದಲ್ಲಿಯೇ ಇರಬೇಕು: ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರ ಅಭಿಯಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights