ಕೇಂದ್ರ ಸರ್ಕಾರಿ ನೌಕರರಿಗೆ 10,000 ಬಡ್ಡಿರಹಿತ ಅಡ್ವಾನ್ಸ್‌; ನಗದು ವೋಚರ್‌: ನಿರ್ಮಲಾ ಸೀತಾರಾಮನ್

ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸುವ ಉದ್ದೇಶದಿಂದ ದೇಶದಲ್ಲಿ ಬೇಡಿಕೆ ಮತ್ತು ಗ್ರಾಹಕರ ಖರ್ಚು ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳ ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ (ಅಡ್ವಾನ್ಸ್‌) ನೀಡುವ ಮತ್ತು ನಗದು ವೋಚರ್‌ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ಸರ್ಕಾರದ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಯೋಜನೆಯನ್ನು 6ನೇ ವೇತನ ಆಯೋಗದಿಂದ  ನಿಲ್ಲಿಸಲಾಗಿದೆ. ಆದರೆ ಈ ಬಾರಿ ವಿಶೇಷವಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಬಡ್ಡಿ ರಹಿತ ಮುಂಗಡವನ್ನು ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ಧಾರೆ.

ಕೇಂದ್ರ ಸರ್ಕಾರ ಇದಕ್ಕಾಗಿ 4,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂಪಾಯಿ ಮುಂಗಡ ದೊರೆಯಲಿದ್ದು, ಮಾ.31,2021 ರವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನೀಡಲಾಗುವ ಎಲ್‌ಟಿಸಿಯ ಬದಲಾಗಿ ಈ ಬಾರಿ ನಗದು ವೋಚರ್ ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಉದ್ಯೋಗಿಗಳು ತಮ್ಮ ಊರಿಗೆ ಒಮ್ಮೆ ತೆರಳುವ ವೆಚ್ಚವನ್ನು ಎಲ್ ಟಿಸಿ ರೂಪದಲ್ಲಿ ಪಡೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣ ಸೂಕ್ತವಲ್ಲದ ಹಿನ್ನೆಲೆಯಲ್ಲಿ ಎಲ್ ಟಿಸಿ ಬದಲಿಗೆ ನಗದು ವೋಚರ್ ಗಳನ್ನು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನಗದು ವೋಚರ್ ಗಳನ್ನು ಆಹಾರಯೇತರ, ಶೇ.12 ಹಾಗೂ ಹೆಚ್ಚಿನ ಜಿಎಸ್ ಟಿ ರೇಟೆಡ್ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಬಳಕೆ ಮಾಡಬಹುದಾಗಿದ್ದು, ಜಿಎಸ್ ಟಿ ನೋಂದಾಯಿತ ಔಟ್ ಲೆಟ್ ಗಳಲ್ಲಿ ಡಿಜಿಟಲ್ ಮೋಡ್ ನಲ್ಲೇ ಪಾವತಿ ಮಾಡಬೇಕಾಗುತ್ತದೆ.


ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನು ತುಳಿಯಲಾಗುತ್ತಿದೆ: ನಟಿ ಖುಷ್ಬೂ ಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights