ವ್ಯಕ್ತಿಯೊಬ್ಬನ ಮುಂಡ ಮಧ್ಯಪ್ರದೇಶದಲ್ಲಿ, ರುಂಡ ಬೆಂಗಳೂರಿನಲ್ಲಿ ಪತ್ತೆ!

ಮಧ್ಯಪ್ರದೇಶದ ಬೆತುಲ್ ಬಳಿಯ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಮುಂಡ ಪತ್ತೆಯಾಗಿದ್ದು, ಅದೇ ವ್ಯಕ್ತಿಯ ರುಂಡ ಬೆಂಗಳೂರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಕ್ಟೋಬರ್ 3 ರಂದು ಬೆತುಲ್ ಬಳಿಯ ಮಚ್ನಾ ಸೇತುವೆ ಬಳಿ ರುಂಡ, ಮತ್ತಿತರ ಭಾಗಗಳು ಇಲ್ಲದ ಮೃತ ವ್ಯಕ್ತಿಯ ದೇಹವೊಂದು ಪತ್ತಯಾಗಿತ್ತು. ಇದಾದ  ಎರಡು ವಾರಗಳ ನಂತರ ಸುಮಾರು 1,300 ಕಿಲೋ ಮೀಟರ್ ದೂರದ ಬೆಂಗಳೂರಿನಲ್ಲಿ ರುಂಡ ಪತ್ತೆಯಾಗಿದೆ.  ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ನವದೆಹಲಿ- ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ನಂತರ ಆಲರ್ಟ್ ಮಾಡಲಾಗಿತ್ತು ಎಂದು ಬೆತುಲ್ ಜಿಆರ್ ಪಿ ಹೆಡ್ ಕಾನ್ಸ್ ಟೇಬಲ್ ವೇದ ಪ್ರಕಾಶ್ ಹೇಳಿದ್ದಾರೆ.

ರೈಲ್ವೆ ಹಳಿಗಳಿಂದ ದೇಹದ ಭಾಗಗಳನ್ನು ಪೊಲೀಸರು ಸಂಗ್ರಹಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅವುಗಳನ್ನು ಸಂರಕ್ಷಿಸಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 4 ರಂದು ರುಂಡವನ್ನು ಬೆಂಗಳೂರಿನ ರೈಲ್ವೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅಲ್ಲಿನ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಫೋಟೋವನ್ನು ಹಂಚಿದ್ದಾರೆ. ಕೊನೆಯದಾಗಿ ಬೆತೂಲ್ ನಲ್ಲಿ ತಲೆಯಿಲ್ಲದ ದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿಯ ತಲೆಯನ್ನು ಪತ್ತೆ ಹಚ್ಚಿರುವುದಾಗಿ ಬೆತೂಲ್ ರೈಲ್ವೆ ಸುರಕ್ಷತಾ ಸಿಬ್ಬಂದಿ ತಿಳಿಸಿದ್ದಾರೆ.

ಮೃತನನ್ನು ಬೆತೂಲ್ ನಿವಾಸಿ 28 ವರ್ಷದ ರವಿ ಮಾರ್ಕಮ್ ಎಂಬುದಾಗಿ ಅವರ ಕುಟುಂಬ ಸದಸ್ಯರು ಗುರುತಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಬೆಂಗಳೂರಿನಿಂದ ಪೊಲೀಸ್ ತಂಡ ಬೆತೂಲ್ ಗೆ ಆಗಮಿಸಿರುವುದಾಗಿ ವೇದಪ್ರಕಾಶ್ ತಿಳಿಸಿದ್ದಾರೆ.

ಹಣಕಾಸಿನ ಸಮಸ್ಯೆಯಿಂದಾಗಿ ಮೃತನ ಕುಟುಂಬ ಸದಸ್ಯರು ಬೆಂಗಳೂರಿಗೆ ಹೋಗಲು ಸಾಧ್ಯವಾಗದೆ ಪೊಲೀಸರು ರುಂಡವನ್ನು ಬೆಂಕಿಗೆ ಹಾಕಿದ್ದಾರೆ. ಉಳಿದಿರುವ ದೇಹದ ಭಾಗಗಳನ್ನು ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರೈಲ್ವೆಹಳಿ ಮೇಲಿನ ಅಪಘಾತದಿಂದಾಗಿ ಆತ ಮೃತಪಟ್ಟನೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಮೋದಿಗೆ ಕನ್ನಡಿಗರು ಇಷ್ಟವಿಲ್ಲವಾ ಅಥವಾ ಯಡಿಯೂರಪ್ಪ ಇಷ್ಟವಿಲ್ಲವಾ? ಪ್ರಿಯಾಂಕ್‌ ಖರ್ಗೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights