ಯಡಿಯೂರಪ್ಪ ಹೈಕಮಾಂಡ್‌ಗೂ ಸಾಕಾಗಿದ್ದಾರೆ, ಬಿಎಸ್‌ವೈ ಖುರ್ಚಿ ಉಳಿಯುವುದಿಲ್ಲ: ಬಿಜೆಪಿ ಶಾಸಕ ಯತ್ನಾಳ್‌

ಸಿಎಂ ಯಡಿಯೂರಪ್ಪನವರು ಮೇಲಿನ ಹೈಕಮಾಂಡ್‌ಗೂ ಸಾಕಾಗಿದ್ದಾರೆ. ಯಡಿಯೂರಪ್ಪನವರ ಖರ್ಚು ಬಹಳದಿನ ಉಳಿಯುವುದಿಲ್ಲ. ಅವರು ಅಧಿಕಾರದಲ್ಲಿ ಹೆಚ್ಚು ದಿನ ಇರಲಾರರು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿಯಾಗಲಿದ್ದಾರೆ.ವಿಜಯಪುರಕ್ಕೆ ಬಂದಿದ್ದ  125 ಕೋಟಿ ರೂ. ಅನುದಾನವನ್ನು ಸಿಎಂ ಹಿಂದಕ್ಕೆ ಪಡೆದಿದ್ದಾರೆ. ಅವರು ಎಲ್ಲಾ ಅನುದಾನವನ್ನು ಬರೀ ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ. ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ. ಏಕೆಂದ್ರೆ ಮೇಲಿನವರಿಗೂ ಅವರು ಸಾಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಉಮೇಶ ಕತ್ತಿ ಇವರು ಶಿವಮೊಗ್ಗ ಮುಖ್ಯಮಂತ್ರಿಯೋ? ಕರ್ನಾಟಕದ ಮುಖ್ಯಮಂತ್ರಿಯೋ ಎಂದು ಹೇಳಿಕೆ ನೀಡಿದ್ದರು ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರಕ್ಕೆ ನೀಡಿದ್ದ ಅನುದಾನ ವಾಪಸ್ ಪಡೆದಿದ್ದರೂ ನಾನು ಬಿಡಲ್ಲ. ಹೇಗೆ ತರಬೇಕೋ ತರ್ತಿನಿ. ಬೆಂಗಳೂರಿನವರು ಬಂದು ವಿಜಯಪುರದ ನಮ್ಮ ಮನೆಯ ಮುಂದೆ ನಿಲ್ಲಬೇಕು. ಈಗ ನಾವು ಅವರ ಮನೆಯ ಮುಂದೆ ಹೋಗಿ ನಿಲ್ಲುತ್ತಿದ್ದೇವೆ. ಉತ್ತರ ಕರ್ನಾಟಕದ ಶಾಸಕರಿಂದಲೇ ಬಿಜೆಪಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸ್ನೇಹಿತ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್‌ ಪ್ರಚಾರದಲ್ಲಿ ಯತೀಂದ್ರ ಹೇಳಿದ್ದೇನು?

ಮಂಡ್ಯ, ಚಾಮರಾಜನಗರ ಮತ್ತು ಕೋಲಾರದಲ್ಲಿ ಯಾರಾದರೂ ಬಿಜೆಪಿಗೆ ಓಟ್ ಹಾಕ್ತಾರಾ? ಉತ್ತರ ಕರ್ನಾಟಕದವರೇ 100 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಆ ಮೇಲೆ ಆ ಕಡೆ 10 ರಿಂದ 15 ಶಾಸಕರು ಆಯ್ಕೆಯಾಗಿರುತ್ತಾರೆ. ಹೀಗಾಗಿ ಮೇಲಿನವರಿಗೂ ಇದು ಗೊತ್ತಾಗಿದೆ. ಮುಂದಿನ ಉತ್ತರಾಧಿಕಾರಿ ಉತ್ತರ ಕರ್ನಾಟಕದವರೇ ಆಗುತ್ತಾರೆ. ಪ್ರಧಾನಿ ಮಂತ್ರಿಗಳ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಯತ್ನಾಳ ತಿಳಿಸಿದ್ದಾರೆ.

ಯತ್ನಾಳ್‌ ಮಾತಿಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್‌ ಅಶೋಕ್‌, ಯಡಿಯೂರಪ್ಪನವರ ನೇತೃತ್ವದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ. ಯಡಿಯೂರಪ್ಪನವರ ನೇತೃತ್ವದಲ್ಲೇ ಸರ್ಕಾರ ಮೂರು ವರ್ಷ ಕೆಲಸ ‌ಮಾಡುತ್ತದೆ. ಸಿಎಂ ಸೀಟ್ ಖಾಲಿ ಇದ್ದರೆ ಟವೆಲ್ ಹಾಕಬಹುದು. ಸೀಟ್ ಖಾಲಿ ಇಲ್ಲ ಎಂದಮೇಲೆ ಟವೆಲ್ ಎಲ್ಲಿ ಹಾಕುತ್ತೀರ? ಖಾಲಿ ಇಲ್ಲದ ಸೀಟ್​ಗೆ ಟವೆಲ್ ಹಾಕಿ, ಸುಮ್ಮನೆ ಸಮಯ ವ್ಯರ್ಥ ಮಾಡೋದು ಸರಿಯಲ್ಲ ಎಂದು ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪನವರ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಯತ್ನಾಳ್ ಅವರು ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಆಲದ ಮರದ ಇದ್ದಂತೆ. ಆಲದ ಮರದ ಕೆಳಗೆ ಇದ್ದು ನಾವು ರಾಜಕಾರಣ ಮಾಡಬೇಕು. ಯಡಿಯೂರಪ್ಪನವರನ್ನು ಟೀಕೆ ಮಾಡಿದ ಮಾತ್ರಕ್ಕೆ ನೀವು ಸಿಎಂ ಆಗೋಕೆ ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.


ಇದನ್ನೂ ಓದಿ: ಎಮ್ಮೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights