ಶಿರಾ ಗೆಲ್ಲಲು ಬಿಜೆಪಿಗೆ ಕಷ್ಟ: ಕ್ಷೇತ್ರದಲ್ಲಿ ನಡೆಯುತ್ತಾ ವಿಜಯೇಂದ್ರ ತಂತ್ರಗಾರಿಕೆ!
ನವೆಂಬರ್ 03ನೇ ತಾರೀಖು ಬಿಹಾರದಲ್ಲಿ ಮೂರನೇ ಹಂತದ ಚುನಾವಣೆ ನಡೆಯಲಿದೆ. ಅಂದೇ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯೂ ನಡೆಯುತ್ತಿದೆ. ಅಲ್ಲದೆ, ಕರ್ನಾಟಕದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ನಡೆಯುತ್ತಿದೆ. ಸದ್ಯ, ಶಿರಾದಲ್ಲಿ ಯಾರು ಗೆಲ್ಲುತ್ತಾರೆ? ಬಿಜೆಪಿ ಅಲ್ಲಿಯೂ ತನ್ನ ಖಾತೆ ತೆರೆಯಬಲ್ಲುದೇ, ವಿಜಯೇಂದ್ರ ತಂತ್ರಗಾರಿಕೆ ಶಿರಾದಲ್ಲಿ ಫಲ ಕೊಡುತ್ತಾ ಎಂಬ ಕುತೂಹಲ ಹುಟ್ಟಿಕೊಂಡಿದೆ.
ಮುಖ್ಯವಾಗಿ, ಶಿರಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಇಳಿದಿದ್ದು, ಕೆ.ಆರ್.ಪೇಟೆಯಂತೆ ಅಲ್ಲಿಯೂ ಜಾಧೂ ಮಾಡಿಬಿಡುತ್ತಾರಾ? ಎಂಬ ತರ್ಕ ಶುರುವಾಗಿದೆ. ಅಸಲಿಗೆ ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಗೆಲುವಿಗೆ ವಿಜಯೇಂದ್ರರ ತಂತ್ರಗಾರಿಕೆಯೇ ಕಾರಣ ಎಂದು ಬಿಜೆಪಿ ನಾಯಕರೂ, ಮಾಧ್ಯಮಗಳೂ ಬಿಂಬಿಸಿದರಾದರೂ, ಅದರ ಅಸಲಿಯತ್ತೇ ಬೇರೆ ಇತ್ತು.
ಲೋಕಸಭಾ ಚುನಾವಣೆ ವೇಳೆ, ಮಂಡ್ಯದ ಸ್ಥಳೀಯ ಆಕಾಂಕ್ಷಿಗಳಿಗೆ ಲೋಕಸಭಾ ಟಿಕೆಟ್ ನೀಡುವುದನ್ನು ಬಿಟ್ಟು, ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದ್ದರಿಂದಾಗಿ ಜೆಡಿಎಸ್ ವಿರುದ್ಧ ಸಿಟ್ಟಾಗಿದ್ದ ಜೆಡಿಎಸ್ ಬೆಂಬಲಿಗರೂ ಸೇರಿದಂತೆ ಮತದಾರರು ಜೆಡಿಎಸ್ ವಿರುದ್ಧವಾಗಿ ಮತ ಹಾಕಿದ್ದರು. ಆದ್ದರಿಂದಾಗಿ ಸುಮಲತಾ ಸಂಸತ್ ಮೆಟ್ಟಿಲೇರಿದರು.
ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ವರಿಷ್ಠರ ಮೇಲೆ ಬೇಸರಗೊಂಡಿದ್ದ ಒಕ್ಕಲಿಗ ಸಮುದಾಯ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸದ ನಂತರ, ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ, ವರ್ಚಸ್ಸು, ಜನಪ್ರಿಯತೆ ಕುಸಿಯತೊಡಗಿತು. ಜೆಡಿಎಸ್ ಬಗ್ಗೆ ಒಕ್ಕಲಿಗ ಸಮುದಾಯದಲ್ಲೇ ಬೇಸರ, ಅಸಮಾಧಾನ, ಆಕ್ರೋಶ ಹುಟ್ಟಿತು. ಇದರ ಜತೆಗೆ ಹಿಂದುಳಿದ ವರ್ಗಗಳ ಇತರೆ ಸಮುದಾಯವೂ ಸಹ ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸಡಿಲಿಕೆಯಿಂದಾಗಿ ಬಿಜೆಪಿಯತ್ತ ಮುಖಮಾಡಿದ್ದವು. ಈ ಕಾರಣದಿಂದಾಗಿ ಮತ್ತು ಮೈತ್ರಿ ಸರ್ಕಾರದ ಪತನದ ನಂತರ ಕಾಂಗ್ರೆಸ್-ಜೆಡಿಎಸ್ ತಿಕ್ಕಾಟದಿಂದಾಗಿ ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಗೆಲುವು ಸಾಧಿಸಿದರು.
ಇದನ್ನೂ ಓದಿ: ಶಿರಾ ಮತ್ತು ಆರ್‌ಆರ್ ನಗರ ಉಪ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ : ಮಂಕಾದ ಬಿಜೆಪಿ!
ಆದರೆ, ವಿಜಯೇಂದ್ರರನ್ನು ಚುನಾವಣಾ ಪ್ರಚಾರಕ್ಕೆ ಮುಂದೆ ಬಿಟ್ಟಿದ್ದ ಸಿಎಂ ಯಡಿಯೂರಪ್ಪ, ತಮ್ಮ ನಂತರ ಬಿಜೆಪಿಯಲ್ಲಿ ತಮ್ಮ ಮಗನ ವರ್ಚಸ್ಸು, ನಾಯಕತ್ವವನ್ನು ಸ್ಥಾಪಿಸುವ ಉದ್ದೇಶದಿಂದಾಗಿ ಕೆಆರ್ ಪೇಟೆ ಗೆಲುವನ್ನು ತಮ್ಮ ಮಗ ವಿಜಯೇಂದ್ರರಿಗೆ ಕಿರೀಟವಾಗಿ ಕಟ್ಟಿ, ಮತ್ತಷ್ಟು ಮುಂಚೂಣಿಗೆ ತಂದರು. ಮಾಧ್ಯಮಗಳೂ ವಿಜಯೇಂದ್ರರನ್ನು ಕೊಂಡಾಡಿ, ಅಬ್ಬರಿಸಿ ಬೊಬ್ಬಿರಿದವು.
ಆದರೆ, ಶಿರಾ ಅಖಾಡದ ವಾಸ್ತವಾಂಶ ಬೇರೆಯೇ ಇದೆ. ಇಲ್ಲಿ ವಿಜಯೇಂದ್ರ ತಂತ್ರಗಾರಿಕೆ ನಡೆಯುವುದಿಲ್ಲ ಎಂದು ರಾಜಕೀಯ ಮೂಲಗಳು ಹೇಳುತ್ತವೆ. ಶಿರಾದಲ್ಲಿ ಕುಂಚಿಟಿಗ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಪರಿಸ್ಥಿತಿ ಅನುಕೂಲಕರವಾಗಿದೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅನುಕಂಪದ ಆಧಾರದಲ್ಲೇ ಗೆಲುವಿನ ನಗೆ ಬೀರಲು ಯತ್ನಿಸಬೇಕಾಗಿದೆ. ಬಿಜೆಪಿ ಸರ್ಕಾರವೂ ಕುಂಚಿಟಿಗ ಒಕ್ಕಲಿಗರನ್ನು ಸೆಳೆಯಲು ಭರವಸೆಯ ಆಶ್ವಾಸನೆಗಳನ್ನೂ ಒಡ್ಡಲಾರಂಭಿಸಿದೆ.
ಆದರೂ, ಬಿಜೆಪಿಗೆ ಶಿರಾ ಗೆಲ್ಲುವುದು ಕಷ್ಟ ಎಂಬುದು ರಾಜಕೀಯ ಪಂಡಿತರ ಅನುಭವದ ಮಾತು. ವಿಜಯೇಂದ್ರ ಅವರ ರಾಜಕೀಯ ಆಟ ಶಿರಾದಲ್ಲಿ ನಡೆಯುವುದಿಲ್ಲ. ಹಣವನ್ನು ನೀರಿನಂತೆ ಚೆಲ್ಲುವ ಪ್ರಯುತ್ನ ಮಾಡಬಹುದು. ಅದನ್ನು ಬಿಟ್ಟರೆ ಅವರ ತಂತ್ರಗಾರಿಕೆ ಶಿರಾದಲ್ಲಿ ಫಲ ಕೊಡುವ ಸಾಧ್ಯತೆಗಳು ಬಹಳ ಕಡಿಮೆ. ಅಲ್ಲದೆ, 5,000 ಕೋಟಿ ರೂಗಳ ಭ್ರಷ್ಟಾಚಾರದ ಆರೋಪವೂ ವಿಜಯೇಂದ್ರ ಮೇಲಿರುವುದರಿಂದಾಗಿ ವಿಜಯೇಂದ್ರ ಆಟಕ್ಕೆ ಕಿಮ್ಮತ್ತು ಸಿಗುವುದಿಲ್ಲ ಎಂದು ರಾಜಕೀಯ ವಲಯ ಹೇಳುತ್ತಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸ್ನೇಹಿತ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್ ಪ್ರಚಾರದಲ್ಲಿ ಯತೀಂದ್ರ ಹೇಳಿದ್ದೇನು?
ಹೇಗಾದರೂ ತನ್ನ ಖಾತೆ ತೆರೆಯಲು ಯತ್ನಿಸುತ್ತಿರುವ ಬಿಜೆಪಿ ಸರ್ಕಾರ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದಿಳಿದಿರುವ ಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ಕಾಡು ಗೊಲ್ಲ ಅಭಿವೃದ್ದಿ ನಿಗಮವನ್ನು ರಚಿಸಿರುವ ಬಿಜೆಪಿ ಸರ್ಕಾರ, ನಿಗಮಕ್ಕೆ 50 ಕೋಟಿ ರೂ ಅನುದಾನವನ್ನೂ ಬಿಡುಗಡೆ ಮಾಡಿದೆ. ಅಲ್ಲದೆ, ಜನರಲ್ ಕೆಟಗೆರಿಯಲ್ಲಿರುವ ಕುಂಚಿಟಿಗರನ್ನು ಓಬಿಸಿ ಕ್ಯಾಟಗರಿಗೆ ಸೇರಿಸಲು ಮುಂದಾಗಿದೆ. ಕುಂಚಿಟಿಗರನ್ನು ಓಬಿಸಿ ಕ್ಯಾಟಗರಿಗೆ ಸೇರಿಸುವುದರಿಂದ ಐಎಎಸ್. ಐಎಫ್ ಎಸ್ ಓದುವ ಕುಂಚಿಟಿಗ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಹೇಳುತ್ತಿದೆ. ಈ ಮೂಲಕ ಗೊಲ್ಲ ಸಮುದಾಯ ಮತ್ತು ಕುಂಚಿಟಿಗ ಒಕ್ಕಲಿಗರ ಓಟುಗಳನ್ನು ಸೆಳೆಯುವ ಕಸರತ್ತು ನಡೆಸುತ್ತಿದೆ.
ಶಿರಾದಲ್ಲಿ ಹೊರಗಿನವರ ಆಟ ನಡೆಯುವುದಿಲ್ಲ. ರಾಜ್ಯದ ವಿಷಯಗಳು ಇಲ್ಲಿನ ಚುನಾವಣಾ ವಿಷಯವಾಗುವುದಿಲ್ಲ. ಸ್ಥಳೀಯ ವಿಷಯಗಳೇ ಪ್ರಮುಖ ಪಾತ್ರ ವಹಿಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಜೆಡಿಎಸ್ ಮತ ಬುಟ್ಟಿಗೆ ಕೈ ಹಾಕಿರುವುದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆಗಳೇ ಹೆಚ್ಚಾಗಿ ಕಾಣಿಸುತ್ತಿದೆ.
ಮಾಜಿ ಸಂಸದ ಮೂಡಲಗಿರಿಯಪ್ಪ ಜೆ.ಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ನೀಡಿಲ್ಲ. ಹೀಗಾಗಿ ಅವರ ಬೆಂಬಲಿಗರು ಬಿಜೆಪಿ ಕಡೆ ವಾಲಿದ್ದು, ಮೇಲಾಗಿ ಬಿಜೆಪಿ ಅವರ ಮಗನಿಗೆ ಟಿಕೆಟ್ ಕೊಟ್ಟಿರುವ ಕಾರಣ, ಪರಿಣಾಮ ಜೆಡಿಎಸ್ ಮತ ಕಸಿಯುವ ಸಾಧ್ಯತೆ ಬಹಳವಾಗಿದೆ. ಜಾತಿ ಲೆಕ್ಕಾಚಾರದಲ್ಲೇ ನೋಡಿದರೂ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಕುರುಬ ಸಮುದಾಯದ ಬಿ.ಕೆ. ಮಂಜುನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಪಕ್ಷ ಟಿಕೆಟ್ ನೀಡದ ಕಾರಣ ಕುರುಬ ಸಮುದಾಯದ ಅಸಮಾಧಾನ, ಆಕ್ರೋಶ ಸ್ಫೋಟಗೊಂಡು ಅದು ಜಯಚಂದ್ರ ಗೆಲುವಿಗೆ ಕೊಂಚ ಮಟ್ಟಿಗೆ ಸಹಾಯ ಮಾಡಲೂಬಹುದು. ಕಾಂಗ್ರೆಸ್ – ಜೆಡಿಎಸ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಹವಾ ಕಾಣುತ್ತಿಲ್ಲ.
ಇದನ್ನೂ ಓದಿ: ಸಿರಾದಲ್ಲಿ ಕಮಲ ಅರಳಿಸಲು ತಂತ್ರ: ಜಾತಿ ರಾಜಕಾರಣಕ್ಕಿಳಿದ ಬಿಜೆಪಿ

