ಕೆಆರ್‌ ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ವಿಜಯೇಂದ್ರ ಕಾರಣವಲ್ಲ! ಹಾಗಿದ್ದರೆ ಗೆದ್ದದ್ದು ಹೇಗೆ?

ಶಿರಾದಲ್ಲಿ ನವೆಂಬರ್ 03ರಂದು ಉಪಚುನಾವಣೆ ನಡೆಯಲಿದೆ. ಶಿರಾದಲ್ಲಿ ಬಿಜೆಪಿ ಪರ ಪ್ರಚಾರ ಉಸ್ತುವಾರಿಯನ್ನು ಮುಖ್ಯಮಂತ್ರಿ ಪುತ್ರ ವಿಜಯೇಂದ್ರಗೆ ನೀಡಲಾಗಿದೆ. ಕೆ ಆರ್‌ ಪೇಟೆ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ  ಬಿಜೆಪಿ ಗೆಲುವು ಸಾಧಿಸಿದ್ದು, ಈ ಸಾಧನೆಗೆ ವಿಜಯೇಂದ್ರ ಕಾರಣ ಎಂದು ಹೇಳಲಾಗಿದೆ. ಆ ಕಾರಣಕ್ಕಾಗಿ ಶಿರಾದಲ್ಲಿ ಬಿಜೆಪಿ ಗೆಲ್ಲಿಸುವ ಉಸ್ತುವಾರಿ ವಿಜಯೇಂದ್ರಗೆ ನೀಡಲಾಗಿದೆ. ಕೆ.ಆರ್‌.ಪೇಟೆಯಂತೆ ಅಲ್ಲಿಯೂ ಜಾಧೂ ಮಾಡಿಬಿಡುತ್ತಾರಾ? ಎಂಬ ತರ್ಕ ಶುರುವಾಗಿದೆ. ಅಸಲಿಗೆ ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಗೆಲುವಿಗೆ ವಿಜಯೇಂದ್ರರ ತಂತ್ರಗಾರಿಕೆಯೇ ಕಾರಣ ಎಂದು ಬಿಜೆಪಿ ನಾಯಕರೂ, ಮಾಧ್ಯಮಗಳೂ ಬಿಂಬಿಸಿದರಾದರೂ, ಅದರ ಅಸಲಿಯತ್ತೇ ಬೇರೆ ಇತ್ತು.

ಲೋಕಸಭಾ ಚುನಾವಣೆ ವೇಳೆ, ಮಂಡ್ಯದ ಸ್ಥಳೀಯ ಆಕಾಂಕ್ಷಿಗಳಿಗೆ ಲೋಕಸಭಾ ಟಿಕೆಟ್‌ ನೀಡುವುದನ್ನು ಬಿಟ್ಟು, ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಟ್ಟಿದ್ದರಿಂದಾಗಿ ಜೆಡಿಎಸ್‌ ವಿರುದ್ಧ ಸಿಟ್ಟಾಗಿದ್ದ ಜೆಡಿಎಸ್‌ ಬೆಂಬಲಿಗರೂ ಸೇರಿದಂತೆ ಮತದಾರರು ಜೆಡಿಎಸ್‌ ವಿರುದ್ಧವಾಗಿ ಮತ ಹಾಕಿದ್ದರು. ಆದ್ದರಿಂದಾಗಿ ಸುಮಲತಾ ಸಂಸತ್‌ ಮೆಟ್ಟಿಲೇರಿದರು.

ಇದನ್ನೂ ಓದಿ: ಶಿರಾ ಮತ್ತು ಆರ್‌ಆರ್‍ ನಗರ ಉಪ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ : ಮಂಕಾದ ಬಿಜೆಪಿ!

ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್‌ ವರಿಷ್ಠರ ಮೇಲೆ ಬೇಸರಗೊಂಡಿದ್ದ ಒಕ್ಕಲಿಗ ಸಮುದಾಯ ನಿಖಿಲ್‌ ಕುಮಾರಸ್ವಾಮಿಯನ್ನು ಸೋಲಿಸದ ನಂತರ, ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ, ವರ್ಚಸ್ಸು, ಜನಪ್ರಿಯತೆ ಕುಸಿಯತೊಡಗಿತು. ಜೆಡಿಎಸ್ ಬಗ್ಗೆ ಒಕ್ಕಲಿಗ ಸಮುದಾಯದಲ್ಲೇ ಬೇಸರ, ಅಸಮಾಧಾನ, ಆಕ್ರೋಶ ಹುಟ್ಟಿತು. ಇದರ ಜತೆಗೆ ಹಿಂದುಳಿದ ವರ್ಗಗಳ ಇತರೆ ಸಮುದಾಯವೂ ಸಹ ಜೆಡಿಎಸ್ ಬಿಟ್ಟು, ಕಾಂಗ್ರೆಸ್‌ ಸಡಿಲಿಕೆಯಿಂದಾಗಿ  ಬಿಜೆಪಿಯತ್ತ ಮುಖಮಾಡಿದ್ದವು. ಈ ಕಾರಣದಿಂದಾಗಿ ಮತ್ತು ಮೈತ್ರಿ ಸರ್ಕಾರದ ಪತನದ ನಂತರ ಕಾಂಗ್ರೆಸ್‌-ಜೆಡಿಎಸ್‌ ತಿಕ್ಕಾಟದಿಂದಾಗಿ ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಗೆಲುವು ಸಾಧಿಸಿದರು.

ಆದರೆ, ವಿಜಯೇಂದ್ರರನ್ನು ಚುನಾವಣಾ ಪ್ರಚಾರಕ್ಕೆ ಮುಂದೆ ಬಿಟ್ಟಿದ್ದ ಸಿಎಂ ಯಡಿಯೂರಪ್ಪ, ತಮ್ಮ ನಂತರ ಬಿಜೆಪಿಯಲ್ಲಿ ತಮ್ಮ ಮಗನ ವರ್ಚಸ್ಸು, ನಾಯಕತ್ವವನ್ನು ಸ್ಥಾಪಿಸುವ ಉದ್ದೇಶದಿಂದಾಗಿ ಕೆಆರ್‌ ಪೇಟೆ ಗೆಲುವನ್ನು ತಮ್ಮ ಮಗ ವಿಜಯೇಂದ್ರರಿಗೆ ಕಿರೀಟವಾಗಿ ಕಟ್ಟಿ, ಮತ್ತಷ್ಟು ಮುಂಚೂಣಿಗೆ ತಂದರು. ಮಾಧ್ಯಮಗಳೂ ವಿಜಯೇಂದ್ರರನ್ನು ಕೊಂಡಾಡಿ, ಅಬ್ಬರಿಸಿ ಬೊಬ್ಬಿರಿದವು.

ಅದೇ ಹುಮ್ಮಸ್ಸಿನಲ್ಲಿ ಶಿರಾವನ್ನು ಗೆಲ್ಲಲು ವಿಜಯೇಂದ್ರರನ್ನು ಮುಂದೆ ಬಿಡಲಾಗಿದೆ. ಆದರೆ, ಶಿರಾದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ತಮ್ಮದೇ ಮತಬ್ಯಾಂಕ್‌ ಹೊಂದಿದ್ದು, ಜಾತಿಯಿಂದಲೂ ಈ ಎರಡೂ ಪಕ್ಷಗಳಿಗೆ ಅನುಕೂಲವಾಗಲಿದೆ. ಶಿರಾ ಬಿಜೆಪಿಗೆ ಕಷ್ಟ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.


ಇದನ್ನೂ ಓದಿ: RRನಗರ ಗೆಲ್ಲುವುದು ಬಿಜೆಪಿಗೆ ಸುಲಭ, ಕಾಂಗ್ರೆಸ್‌-ಜೆಡಿಎಸ್‌ಗೆ ಕಷ್ಟ: ಏಕೆ ಗೊತ್ತೇ? 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights