RRನಗರ ಅಖಾಡ; ಕೈ, ತೆನೆಗಿಂತ ಬಿಜೆಪಿಗಿದೆ ಅದೃಷ್ಟ!

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3 ರಂದು ಉಪಚುನಾವಣೆ ನಡೆಯಲಿದೆ. ಮೂರು ಪಕ್ಷಗಳು ಅಖಾಡ ಕ್ಕಿಳಿದು ಬಿರುಸಿನ ಸಿದ್ದತೆ ನಡೆಸುತ್ತಿವೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಮುನಿರತ್ನ ವಿರುದ್ಧ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಆದರೆ, ಈಗಲೇ ಆರ್‌ಆರ್‌ನಗರದಲ್ಲಿ 2 ಬಾರಿ ಗೆದ್ದಿದ್ದ ಮುನಿರತ್ನ ತಮ್ಮದೇ ಆದ ಮತಬ್ಯಾಂಕ್ ಇಟ್ಟುಕೊಂಡಿದ್ದು, ಚುನಾವಣೆಗೆ ಕೊಂಚ ಅನುಕೂಲವಾಗಿದೆ.

2008ರಲ್ಲಿ ಹೊಸದಾಗಿ ರಚನೆಯಾದ ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರೇ ಗೆದ್ದಿದ್ದರು. ಬಿಜೆಪಿಗೆ ಅಂದು ಓಟ್‌ ಹಾಕಿದ್ದ ಮತಗಳ ಬಹುಪಾಲು ಇನ್ನೂ ಬಿಜೆಪಿ ತೆಕ್ಕೆಯಲ್ಲಿಯೇ ಇವೆ ಎಂದು ಹೇಳಲಾಗುತ್ತಿದೆ. ನಂತರದ ಎರಡೂ ಚುನಾವಣೆಗಳಲ್ಲಿ ಮುನಿರತ್ನ ಗೆದ್ದಿದ್ದು, ಕ್ಷೇತ್ರದಲ್ಲಿ ತನ್ನದೇ ಆತ ಹಿಡಿತ ಇಟ್ಟುಕೊಂಡಿದ್ದಾರೆ. ಬಿಜೆಪಿ ಓಟ್‌ಬ್ಯಾಂಕ್‌ ಮತ್ತು ಮುನಿರತ್ನಗೆ ಕಟ್ಟಿಕೊಂಡಿರುವ ಮತಬ್ಯಾಂಕ್‌ಗಳು ಬಿಜೆಪಿಯನ್ನು ಗೆಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಹೇಳಲಾಗುತ್ತಿದೆ.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಗಂಗಟಕಾರ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ ಅವರಿಬ್ಬರ ನಡುವೆ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಕಾಂಗ್ರೆಸ್‌—ಜೆಡಿಎಸ್‌ ಪರಸ್ಪರ ಶತ್ರುಗಳಂತೆ ವರ್ತಿಸುತ್ತಿದ್ದು, ಬಿಜೆಪಿ ವಿರುದ್ಧದ ಜೆಡಿಎಸ್‌ ವಾಗ್ದಾಳಿ ನಡೆಸುವುದನ್ನು ಮೇಲ್ನೋಟಕ್ಕಷ್ಟೇ ಮಾಡುತ್ತಿದ್ದು, ಬಿಜೆಪಿ ಗೆದ್ದರೂ ಚಿಂತೆ ಇಲ್ಲ ಎಂಬ ಮನಸ್ಥಿತಿಗೆ ಜೆಡಿಎಸ್‌ ಬಂದು ನಿಂತಿದೆ ವ್ಯಂಗ್ಯದ ಮಾತುಗಳು ಕೇಳಿಬರುತ್ತಿವೆ.

ಜಾತಿ ಲೆಕ್ಕಾಚಾರ ಒಂದೆಡೆಯಾದರೆ, ಕೊರೊನಾ ಮತ್ತು ಲಾಕ್‌ಡೌನ್‌ ಸಂದರ್ಭವೂ ಮುನಿರತ್ನಗೆ ಅನುಕೂಲ ಮಾಡಿಕೊಟ್ಟಿದೆ. ಉಪ ಚುನಾವಣೆಗೆ ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳನ್ನು ಯಾರನ್ನು ಕಣಕ್ಕಿಳಿಸಬಹುದು ಎಂಬ ಯೋಚನೆಯನ್ನೂ ಮಾಡದಿದ್ದ ಸಂದರ್ಭದಲ್ಲೇ, ಬಿಜೆಪಿಯಿಂದ ತಾವೇ ಅಭ್ಯರ್ಥಿಯೆಂದು ಖಾತ್ರಿಯಲ್ಲಿದ್ದ ಮುನಿರತ್ನ, ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಒಂದಷ್ಟು ಜನರಿಗೆ ನೆರವು ನೀಡಿದ್ದರು. ಇದು ಭಾವನಾತ್ಮಕ, ಮಾನವೀಯ ದೃಷ್ಠಿಯಲ್ಲಿ ನೆರವಾಗಲಿದೆ.

ಅಲ್ಲದೆ, ಕಳೆದ ವಾರ ಕ್ಷೇತ್ರದ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಬಿಜೆಪಿ ಸೇರಿದ್ದು, ಇದೂ ಕೂಡ ಕಾಂಗ್ರೆಸ್‌, ಜೆಡಿಎಸ್‌ ಓಟುಗಳನ್ನು ಬಿಜೆಪಿಗೆ ತಂದುಕೊಡಲಿವೆ ಎಂದು ಭಾವಿಸಲಾಗಿದೆ. ಹೀಗಾಗಿ ಮುನಿರತ್ನ ರಾಜಾರಾಜೇಶ್ವರಿಯನ್ನು ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಆದರೂ ಮತದಾರರೇ ಅಂತಿಮ ಆಯ್ಕೆ ಮಾಡಲಿದ್ದಾರೆ.


ಇದನ್ನೂ ಓದಿ: ಶಿರಾ ಗೆಲ್ಲಲು ಬಿಜೆಪಿಗೆ ಕಷ್ಟ: ಕ್ಷೇತ್ರದಲ್ಲಿ ನಡೆಯುತ್ತಾ ವಿಜಯೇಂದ್ರ ತಂತ್ರಗಾರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights