ನಾನು ಯಾವತ್ತೂ ಹೀರೋನೇ, ವಿಲನ್ ಆಗೋ ಮಾತೇ ಇಲ್ಲ: ಸಿದ್ದರಾಮಯ್ಯ

ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಕಾರಣ ಸಿದ್ದರಾಮಯ್ಯ ಎಂದು ಹೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಳಿತರೆ ಸರ್ಕಾರ ನಡೆಸೋಕಾಗುತ್ತಾ? ನಾನು ಕೊಡೋ ಹೇಳಿಕೆಯಿಂದ ಕುಮಾರಸ್ವಾಮಿಗೆ ಮುಜುಗರ ಆಗುತ್ತದೆ. ನಾನು ಯಾವತ್ತೂ ಹೀರೋನೇ, ವಿಲನ್ ಆಗಿಲ್ಲ ಎಂದು ಹೇಳಿದ್ದಾರೆ.

ನೆರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ನೆರೆ ಕುರಿತ ಚರ್ಚೆಗಾಗಿ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ

ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿದೆ. ಇದೇ ಕಾರಣಕ್ಕೆ ಸರ್ಕಾರಕ್ಕೆ ಧಮ್ ಇಲ್ಲ ಎಂದಿದ್ದೇನೆ. ಆದರೆ ಕೆಲವರು ಇದನ್ನು ದೈಹಿಕ ತಾಕತ್ತಿಗೆ ಹೋಲಿಸುತ್ತಿದ್ದಾರೆ. ಸಿದ್ದರಾಮಯ್ಯನಿಗಿಂತ ನಮಗೆ ನಾಲ್ಕು ಪಟ್ಟು ಧಮ್ ಇದೆ ಎಂದು ಹೇಳುತ್ತಿದ್ದಾರೆ. ನಾನು ದೈಹಿಕ ಸಾಮರ್ಥ್ಯದ ಬಗ್ಗೆ ಮಾತಾಡಿಲ್ಲ. ಇವರಿಗೆ ಪರಿಹಾರ ಕೊಡಿಸೋ ಧಮ್ ಇಲ್ಲ ಎಂದಿದ್ದೇನೆ. ಈಗಲೂ ಧಮ್ ಇದ್ರೆ ಕೂಡಲೇ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲಿ. ನೆರೆ ನಿರ್ವಹಣೆಯ ಬಗ್ಗೆ ಚರ್ಚೆಗಾಗಿ ಸರ್ಕಾರ ವಿಶೇಷ ಅಧಿವೇಶನ ಕರೆಯಲಿ ಎಂದು ಬಿಜೆಪಿಗರಿಗೆ ಸವಾಲು ಹಾಕಿದರು.

ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಉಸ್ತುವಾರಿ ಮಂತ್ರಿಗಳು ಜಿಲ್ಲೆಗಳಲ್ಲಿ ಬೀಡು ಬಿಟ್ಟು ಪರಿಹಾರ ಕೈಗೊಳ್ಳಬೇಕು. ಆದರೆ, ಕಲಬುರ್ಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಮೇ ತಿಂಗಳಿನಿಂದ ಜಿಲ್ಲೆಯತ್ತ ತಲೆ ಹಾಕಿಲ್ಲ. ಕಂದಾಯ ಸಚಿವರು ಪಿಕ್​ನಿಕ್ ಬಂದಂತೆ ಕಲಬುರ್ಗಿಗೆ ಬಂದು ಹೋಗಿದ್ದಾರೆ. ಸಿಎಂ ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಮೇಲಿಂದ ಅವರಿಗೆ ಏನು ಕಂಡಿತೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೂವರೆಗೂ ಒಬ್ಬನೇ ಒಬ್ಬ ಸಂತ್ರಸ್ಥರನ್ನು ಸಿಎಂ ಭೇಟಿ ಮಾಡಿಲ್ಲ. ಅವರ ಕಷ್ಟ ಆಲಿಸಿಲ್ಲ. ಸಿಎಂ ಮತ್ತು ಮಂತ್ರಿಗಳ ನಡೆಯಿಂದ ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ. ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ನೆರೆ ಸಂಕಷ್ಟ ನಿಭಾಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಏನೇ ಕೇಳಿದರೂ ಯಡಿಯೂರಪ್ಪ ದುಡ್ಡಿಲ್ಲ ಅಂತ ಹೇಳ್ತಾರೆ. ಪ್ರವಾಹ, ಮತ್ತು ಮಳೆಯಿಂದ ಉಂಟಾದ ಹಾನಿ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಲು ನಾನು ಡಿಮ್ಯಾಂಡ್ ಮಾಡ್ತೇನೆ. ರಾಜ್ಯ ಸರ್ಕಾರ ಯಾವುದೆ ನೆಪ ಹೇಳದೆ ಕೂಡಲೆ ನೆರೆ, ಅತಿವೃಷ್ಟಿ ಪರಿಹಾರ ಕೊಡಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯಲ್ಲಿ ಬಂದು ಕುಳಿತುಕೊಳ್ಳಬೇಕು. ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.


ಇದನ್ನೂ ಓದಿ: ಕನ್ನಡಿಗರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್‌ ಇದೆಯೇ? ನಳಿನ್‌ಗೆ ಸಿದ್ದರಾಮಯ್ಯ ಸವಾಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights