‘ಯೋಗೇಶ್ ಕೊಲೆಗೆ ವಿನಯ್ ಕುಲಕರ್ಣಿನೇ ಕಾರಣ ಶಿಕ್ಷೆ ಆಗಲೇಬೇಕು’ – ಯೋಗೇಶ್ ಕುಟುಂಬಸ್ಥರ ಆರೋಪ
ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ವಿಚಾರಣೆ ನಡೆಯುತ್ತಿದ್ದು. ಠಾಣೆಯ ಎದುರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ.
2016ರಲ್ಲಿ ಜೂನ್ 15ರಂದು ಧಾರವಾಡದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಗುರುವಾರ ಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳಾ ಸಂಘಟಕರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು, ಬಿಜೆಪಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.ಬೆಳಿಗ್ಗೆ 6.30ಕ್ಕೆ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಯೋಗೇಶ್ ಪತ್ನಿ ಮಾತನಾಡಿ, ‘ಯಾರೇ ತಪ್ಪು ಮಾಡಿದರೂ ನ್ಯಾಯ ಸಿಗುತ್ತದೆ. ಒಟ್ಟಾರೆ ನನಗೆ ನ್ಯಾಯ ಸಿಗಬೇಕು. ಯಾರೇ ತಪ್ಪಿಕಸ್ಥರಿರಲಿ ಅವರಿಗೆ ಶಿಕ್ಷೆ ಆಗಬೇಕು. ನನ್ನ ಪತಿ ಕಡೆಯವರು ಇಲ್ಲ ಸಲ್ಲದ ಮಾತು ಹೇಳುತ್ತಿದ್ದಾರೆ. ವಿಚಾರಣೆ ಬಳಿಕ ನನಗೆ ನ್ಯಾಯ ಸಿಗಲಿದೆ’ ಎಂದು ಪತ್ನಿ ಮಲ್ಲಮ್ಮ ಹೇಳಿದ್ದಾರೆ.
‘ಕೊಲೆಗೂ ಮುನ್ನ ಯೋಗೇಶ್ ಗೌಡಗೆ ಪತ್ರ ಬರೆಯಲಾಗಿತ್ತು. ಅವನಿಗೆ ವಿನಯ್ ಕುಲಕರ್ಣಿ ತೊಂದರೆ ಕೊಟ್ಟಿದ್ದಾರೆ. ಕೇಸ್ ಮುಚ್ಚಿ ಹಾಕಲು ಬೆದರಿಕೆ ಕರೆಗಳು ನಮಗೆ ಬಂದಿವೆ. ಯೋಗೇಶ್ ಸ್ವತ: ಹೇಳ್ತಾಯಿದ್ರು ನನ್ನ ಮೇಲೆ ವಿನಯ್ ಸೇಡು ತೀರಿಸಿಕೊಳ್ತಾನೆಂದು. ಹೀಗಾಗಿ ಯೋಗೇಶ್ ಗೌಡ ಕೊಲೆಗೆ ವಿನಯ್ ಕಾರಣ ಎಂದು ಯೋಗೇಶ್ ಕುಟುಂಬಸ್ಥರು’ ಆರೋಪಿಸಿದ್ದಾರೆ.

