ಸುದ್ದಿ ಪ್ರಸಾರ ಮಾಡಿ, ಮಾನಹಾನಿ ಮಾಡುವ ನಿಮ್ಮ ಅಭಿಪ್ರಾಯವನ್ನಲ್ಲ: ರಿಪಬ್ಲಿಕ್‌ ಟಿವಿ ಮತ್ತು ಟೈಮ್ಸ್‌ ನೌಗೆ ಹೈಕೋರ್ಟ್‌ ತಾಕೀತು!

ಬಾಲಿವುಡ್‌ ವಿರುದ್ಧ ಕೆಲವು ಮಾಧ್ಯಮಗಳು ‘ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿಕರ ಪ್ರಕಟಿಸುತ್ತಿವೆ. ಅಂತಹ ಸುದ್ದಿಗಳ ಪ್ರಸಾರವನ್ನು ತಡೆಯಬೇಕು ಎಂದು ಕೋರಿ ಬಾಲಿವುಡ್‌ನ ಸ್ಟಾರ್‌ ನಟರು ಹಾಗೂ ನಿರ್ಮಾಪಕರು ಅಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್‌ ಸ್ಪಂಧಿಸಿದ್ದು, ಸುದ್ದಿಗಳನ್ನು ಪ್ರಸಾರ ಮಾಡಬೇಕೇ ವಿನಃ ಮಾನಹಾನಿ ಮಾಡುವ ವಿಶ್ಲೇಷಣೆಗಳನ್ನು ಮಾಡಬಾರದು. ಯಾವುದೇ ಮಾನಹಾನಿಕರ ವಿಷಯವನ್ನು ಚಾನೆಲ್‌ಗಳಲ್ಲಿ ಪ್ರದರ್ಶಿಸಬಾರದು ಎಂದು ರಿಪಬ್ಲಿಕ್‌ ಟಿವಿ ಮತ್ತು ಟೈಮ್ಸ್‌ ನೌ ಚಾನೆಲ್‌ಗಳಿಗೆ ತಾಕೀತು ಮಾಡಿದೆ.

ಯಾವುದೇ ಮಾನಹಾನಿಕರ ವಿಷಯವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಬಾರದು ಅಥವಾ ಅವರ ಚಾನೆಲ್‌ಗಳಲ್ಲಿ ಪ್ರದರ್ಶಿಸದಂತೆ ನೋಡಿಕೊಳ್ಳಬೇಕೆಂದು ಮಾಧ್ಯಮ ಸಂಸ್ಥೆಗಳಾದ ಎಜಿಆರ್‌ ಔಟ್‌ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಬೆನೆಟ್ ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್‌ ಕಂಪನಿಗಳಿಗೆ ನ್ಯಾಯಮೂರ್ತಿ ರಾಜೀವ್ ಶಕ್ತಿರ್ ಸೂಚನೆ ನೀಡಿದ್ದಾರೆ.

ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವ್‌ಗನ್, ಕರಣ್ ಜೋಹರ್, ಆದಿತ್ಯ ಚೋಪ್ರಾ ಮತ್ತು ಫರ್ಹಾನ್ ಅಖ್ತರ್ ಸೇರಿದಂತೆ ಬಾಲಿವುಡ್‌ನ ಸ್ಟಾರ್‌ಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಪೀಠ, ಮಾಧ್ಯಮಗಳು ಕಾರ್ಯಕ್ರಮದ ಸಂಹಿತೆಯನ್ನು ಅನುಸರಿಸಬೇಕು ಎಂದು ಹೇಳಿದೆ.

ಸುಶಾಂತ್ ಸಿಂಗ್ ಅಸಹಜ ಸಾವಿನ ಆರಂಭದಿಂದ ಇಲ್ಲಿಯವರೆಗೂ ಮಾಧ್ಯಮಗಳನ್ನು ನಿಯಂತ್ರಿಸಲು ನ್ಯಾಯಾಲಯ ಮತ್ತು ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದಾಗ್ಯೂ ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಸುಶಾಂತ್ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳುವುದಕ್ಕೂ ಮೊದಲು ಮತ್ತು ನಂತರ ತಮ್ಮದೇ ಆದ ಊಹಾಪೂಹದ ತನಿಖಾ ವರದಿಗಳನ್ನು ಈ ಸುದ್ಧಿ ಸಂಸ್ಥೆಗಳು ಪ್ರಸಾರ ಮಾಡುತ್ತಿದ್ದವು.

ಮಾಧ್ಯಮಗಳು ಚಿತ್ರೋದ್ಯಮದಲ್ಲಿರುವವರ ಗೌಪ್ಯತೆಯ ಹಕ್ಕನ್ನು ಕಸಿದುಕೊಳ್ಳುವಂತಹ ರೀತಿಯಲ್ಲಿ ವರ್ತಿಸುತ್ತಿವೆ. ಮಾಧ್ಯಮಗಳ ಈ ವರ್ತನೆಯನ್ನು ತಡೆಯಬೇಕು. ಚಾನೆಲ್‌ಗಳು 1994 ರ ಪ್ರೋಗ್ರಾಂ ಕೋಡ್‌ಗೆ ಬದ್ಧವಾಗಿರಬೇಕು ಮತ್ತು ಬಾಲಿವುಡ್ ವಿರುದ್ಧ ಪ್ರಕಟಿಸಿದ ಎಲ್ಲಾ ಮಾನಹಾನಿಕರ ವಿಷಯವನ್ನು ಹಿಂತೆಗೆದುಕೊಳ್ಳಿ ಅಥವಾ ತೆಗೆದುಹಾಕಿ” ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕರು ಮತ್ತು ‌ ನಟರು ಕೇಳಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್‌, ಸೆಲೆಬ್ರೆಟಿಗಳು ಅರ್ಹರಾಗಿದ್ದಾರೆ. ಅವರ ಖಾಸಗೀ ವಿಚಾರಗಳಲ್ಲಿ ಮಾಧ್ಯಮಗಳು ಇದೇ ರೀತಿ ಮುಂದುವರೆಯಲು ಸಾಧ್ಯವಿಲ್ಲ. ಚಾನೆಲ್‌ಗಳು ಪ್ರಸಾರ ಮಾಡುವ ಸುದ್ದಿಗಳಲ್ಲಿ ಸುದ್ದಿಗಿಂತಲೂ ಹೆಚ್ಚಾಗಿ, ಅಭಿಪ್ರಾಯಗಳೇ ತುಂಬಿವೆ. ನೀವು ಸುದ್ದಿಯನ್ನಷ್ಟೇ ಪ್ರಸಾರ ಮಾಡಿ, ನಿಮ್ಮ ವಿಶ್ಲೇಷಣೆಯನ್ನಲ್ಲ. ಸುದ್ದಿ ಪ್ರಸಾರ ಮಾಡದಂತೆ ನಿಮ್ಮನ್ನು ಯಾರೂ ತಡೆಯುವುದಿಲ್ಲ ಎಂದು ಹೇಳಿದೆ.

ಬಾಲಿವುಡ್ ವಿರುದ್ಧ ಬೇಜವಾಬ್ದಾರಿ, ಅವಹೇಳನಕಾರಿ ಮತ್ತು ಮಾನಹಾನಿಕರ ಟೀಕೆಗಳನ್ನು ಮಾಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದುರಿಂದ ದೂರವಿರಬೇಕೆಂದು  ರಿಪಬ್ಲಿಕ್ ಟಿವಿ, ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ವರದಿಗಾರ ಪ್ರದೀಪ್ ಭಂಡಾರಿ, ಟೈಮ್ಸ್ ನೌ ಚಾನೆಲ್‌ ಮತ್ತು ಅದರ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಮತ್ತು ನವಿಕಾ ಕುಮಾರ್ ಮತ್ತು ಇತರ ಆರೋಪಿಗಳಿಗೆ ತಾಕೀತು ಮಾಡಿದೆ.

ಹೆಚ್ಚಿನ ವಿಚಾರಣೆಗೆ ಡಿಸೆಂಬರ್ 14 ಕ್ಕೆ ಹೈಕೋರ್ಟ್ ಮುಂದೂಡಿದೆ.


ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಸಿಡಿದ ಬಾಲಿವುಡ್‌: ಸುದ್ದಿ ಚಾನೆಲ್‌ಗಳ ಮೇಲೆ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights