ಅಮೆರಿಕಾದಲ್ಲಿ ಶುರವಾಗಿದೆ ಡೆಮಾಕ್ರಾಟ್ ಪಕ್ಷದವರ ಟ್ರಂಪೀಕರಣ!?

ಅಮೇರಿಕ ಚುನಾವಣೆಯ ಫಲಿತಾಂಶಗಳು ಅಳೆದು-ಸುರಿದೂ, ಅಂತಿಮವಾಗಿ ಡೆಮಾಕ್ರಾಟ್ ಪಕ್ಷದವರಿಗೆ ಬಹುಮತವನ್ನೇನೋ ನೀಡಿದೆ. ಆದರೆ ಅದೇ ಸಮಯದಲ್ಲಿ ಹೆಚ್ಚೂ ಕಡಿಮೆ ಅರ್ಧ ಅಮೇರಿಕ ಟ್ರಂಪಿನ ಬಗ್ಗೆಯೂ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ವಾಸ್ತವದಲ್ಲಿ ಡೆಮಾಕ್ರಟ್ ಪಕ್ಷದೊಳಗಿರುವ “ಪ್ರೊಗ್ರೆಸೀವ್ಸ” ಎಂದು ಗುರುತಿಸಿಕೊಳ್ಳಲ್ಪಡುವ ಸಮಾಜವಾದಿಗಳು, ಪ್ರಗತಿಪರರು ಮತ್ತು ತಳಮಟ್ಟದ ಕಾರ್ಯಕರ್ತರು ಹಗಳಿರಲು ಶ್ರಮಪಟ್ಟು ಡೆಮಾಕ್ರಾಟ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಮತದಾನ ಮಾಡುವಂತೆ ಮನಒಲಿಸದೇ ಹೋಗಿದ್ದರೆ ಡೆಮಾಕ್ರಾಟುಗಳ ಈ “ಮಾಡರೇಟ್” ಗೆಲುವು ಕೂಡಾ ಸಾಧ್ಯವಿರಲಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಟ್ರಂಪ್ ಸದ್ಯಕ್ಕೆ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಹಠಹಿಡಿದಿದ್ದರೂ ಡಿಸೆಂಬರ್ ೧೪ ರಂದು ಎಲೆಕ್ಟಾರಲ್ ಕಾಲೇಜು ಅಧಿಕೃತವಾಗಿ ಅಧ್ಯಕ್ಷರ ಆಯ್ಕೆಯನ್ನು ಘೋಷಿಸುವವೇಳೆಗೆ ಎಲ್ಲವೂ ಸರಿಹೋಗಬಹುದು ಎಂದು ನಿರೀಕ್ಷಿಸಲಾಗಿದೆ.

ಆದರೆ ಅಮೇರಿಕನ್ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿರುವವರು ಅದಕ್ಕಿಂತ ಹೆಚ್ಚಿನ ಆತಂಕದ ಅಂಶವೊಂದನ್ನು ಗಮನಕ್ಕೆ ತರುತ್ತಿದ್ದಾರೆ.

ಟ್ರಂಪ್ ಎಂಬ ಭೂತದ ಅಪಾಯ ಎದುರಿಗಿರುವ ತನಕ ಡೆಮಾಕ್ರಾಟ್ ಪಕ್ಷದೊಳಗಿರುವ “ಮಾಡರೇಟ್” ಅಂದರೆ ಕಾರ್ಪೊರೇಟ್ ಪರ ಡೆಮಾಕ್ರಾಟರು ಮತ್ತು “ಪ್ರೊಗ್ರೆಸಿವ್” ಡೆಮಾಕ್ರಾಟರ ಹೋರಾಟವೆಲ್ಲಾ ಟ್ರಂಪ್ ವಿರುದ್ಧವೇ ಇತ್ತು.

ಆದರೆ ಒಮ್ಮೆ ಟ್ರಂಪಿನ ಅಪಾಯ ಮರೆಯಾಗುತ್ತಿದ್ದಂತೆ ಡೆಮಾಕ್ರಾಟ್ಟ್ ಪಕ್ಷದೊಳಗಿನ ಮಾಡರೇಟುಗಳು ಪ್ರೊಗ್ರೆಸಿವ್ ಡೆಮಾಕ್ರಾಟರನ್ನು ಅಂಚಿಗೆ ತಳ್ಳಲು ಪ್ರಾರಂಭಿಸಿದ್ದಾರೆ.

ವಾಸ್ತವವಾಗಿ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಡೆಮಾಕ್ರಾಟರಿಗೆ ರಿಪಬ್ಲಿಕನ್ನರಿಗಿಂತ ಹೆಚ್ಚಿನ ಮತಗಳು ಸಿಗಲು ಸಾಧ್ಯವಾಗಿದ್ದು – ಉಚಿತ ವೈದ್ಯ, ವಿಮೆಯಿಲ್ಲದವರಿಗೂ ವೈದ್ಯ, ಹೆಚ್ಚಿನ ಕೂಲಿ , ಕಡಿಮೆ ಬಾಡಿಗೆ, ಸಣ್ಣ ಉದ್ಯಮಕ್ಕೆ ಉತ್ತೇಜನ ಹಾಗು ಪ್ರೋತ್ಸಾಹಗಳಂಥ “ಪ್ರೊಗ್ರೆಸಿವ್ ” ಅಜೇಂಡಾಗಳನ್ನು ಮುಂದಿಟ್ಟಿದ್ದರಿಂದ.

ಆದರೆ ಒಮ್ಮೆ ಡೆಮಾಕ್ರಾಟ್ ಬೈದೇನ್ ಅವರಿಗೆ ಬಹುಮತ ದೊರೆಯುವುದು ಖಚಿತವಾದ ಕೂಡಲೇ ಡೆಮಾಕ್ರಾಟ್ ಪಕ್ಷದೊಳಗಿನ ಕಾರ್ಪೊರೇಟ್ “ಮಾಡರೇಟು”ಗಳು ಹಲವು ಕಡೆ ಡೆಮಾಕ್ರಾಟುಗಳು ರಿಪಬ್ಲಿಕನ್ನರಿಗಿಂತ ಕಡಿಮೆ ಮತಗಳನ್ನು ಗಳಿಸಲು ಕಾರಣ ಪ್ರೊಗ್ರೆಸಿವ್ ಗಳು ಸಮಾಜವಾದಿ ಅಜೆಂಡಾ ಪ್ರಚಾರ ಮಾಡಿದ್ದಕ್ಕೆ ಎಂದು ದೂರಲು ಪ್ರಾರಂಭಿಸಿದ್ದಾರಂತೆ!!

ಆದ್ದರಿಂದಲೇ ಪ್ರೊಗ್ರೆಸಿವ್ ಬಣದ ಡೆಮಾಕ್ರಾಟರು ಕೂಲಿ ಹಾಗೂ ಉಚಿತ ವೈದ್ಯದ ಬಗ್ಗೆ ಪ್ರಶ್ನೆಎತ್ತುತ್ತಿರುವುದನ್ನು “ಪಕ್ಷದ್ರೋಹ ” ಎಂದು ಜರೆಯುತ್ತಿದ್ದಾರಂತೆ. (ಭಾರತಕ್ಕಿಂತ ವಾಸಿ.. ಇಲ್ಲಿ ಅಂಥಾ ಬೇಡಿಕೆ ಇಡುವುದು ದೇಶದ್ರೋಹವೇ ಆಗಿಬಿಡುತ್ತಿತ್ತು!!)

ಡೆಮಾಕ್ರಾಟ್ ಪಕ್ಷದೊಳಗೆ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ಇಂದಿನ The Hindu ಪತ್ರಿಕೆಯಲ್ಲಿ ಡೆನ್ಮಾರ್ಕಿನ ಪ್ರೊಫೆಸರ್ ತಬೀಷ್ ಖೇರ್ ಅವರು ತಮ್ಮ US progressives in cross hairs” ಎಂಬ ಲೇಖನದಲ್ಲಿ ವಿವರಿಸಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ನಿಧಾನವಾಗಿ ಪ್ರೊಗ್ರೆಸಿವ್ ಡೆಮಾಕ್ರಾಟರನ್ನು ಮಾಡರೇಟ್ ಡೆಮಾಕ್ರಾಟರು ಸಂಪೂರ್ಣವಾಗಿ ಮೂಲೆಗುಂಪು ಮಾಡಬಹುದು, ಪ್ರಧಾನಧಾರೆ ಮಾಧ್ಯಮಗಳು ಪ್ರೊಗ್ರೆಸಿವ್ಸ್ ಗಳ ಯಾವುದೇ ವರದಿಯನ್ನು ಮಾಡದಿರಬಹುದು. ಅವರುಗಳಿಗೆ ಜಡ, ಮೊಂಡು ಮತ್ತು ಪಕ್ಷ ವಿಭಜಕ ಶಕ್ತಿಗಳೆಂಬ ಹಣೆಪಟ್ಟಿ ಹಚ್ಚಿ ಅಸಹಾಯಕರನ್ನಾಗಿಸಬಹುದು ಎಂದು ತಬೀಷ್ ವಿವರಿಸುತ್ತಾರೆ….

ಈ ಬೆಳವಣಿಗೆಗಳು ಎರಡನೇ ಅವಧಿಗೆ ಟ್ರಂಪ್ ಅಧ್ಯಕ್ಷಾರಾಗುವುದನ್ನು ಸುಗಮಗೊಳಿಸುತ್ತದೆ ಎಂದು ಕೂಡ ಎಚ್ಚರಿಸುತ್ತಾರೆ…

ಈ ಎಚ್ಚರಿಕೆ ಬರಿ ಅಮೆರಿಕದ ಚುನಾವಣೆ ಬಗ್ಗೆ ಮಾತ್ರ ಎನ್ನುತ್ತೀರಾ?…..

– ಶಿವಸುಂದರ್


ಇದನ್ನೂ ಓದಿ: ಅಮೆರಿಕಾದಲ್ಲಿ ಹಿಂಸಾಚಾರ: ಟ್ರಂಪ್‌-ಬೈಡನ್‌ ಬೆಂಬಲಿಗರ ನಡುವೆ ಮಾರಾಮಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights