ಯುವತಿಯನ್ನು ಜೀವಂತ ಸುಟ್ಟ ದುಷ್ಕರ್ಮಿಗಳು: ಸಂತ್ರಸ್ತೆಯೇ ಹೆಸರು ಹೇಳಿದರೂ ಆರೋಪಿಗಳನ್ನು ಬಂಧಿಸದ ಪೊಲೀಸರು!

20 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳು ಆಕೆಯನ್ನು ಜೀವಂತವಾಗಿ ಸುಟ್ಟು ಕೊಲೆ ಗೈದಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಸಾವನ್ನಪ್ಪುವ ಮುನ್ನ ಆರೋಪಿಗಳ ಹೆಸರುಗಳನ್ನು ಹೇಳಿದ್ದರೂ ಕೂಡ ಪೊಲೀಸರು ಆರೋಪಿಗಳನ್ನು ಬಂಧಿಸದೇ ಇರುವುದು ತೀವ್ರ ವಿರೋಧವನ್ನು ಉಂಟುಮಾಡಿದೆ.

“ಯುವತಿಗೆ ನಾಲ್ಕು ತಿಂಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಸತೀಶ್ ಕುಮಾರ್ ರಾಯ್ ಮತ್ತು ಚಂದನ್ ಕುಮಾರ್ ರಾಯ್ ನನ್ನ ಮಗಳನ್ನು ಸುಟ್ಟುಹಾಕಿದ್ದಾರೆ. ಅವಳು ಕೊನೆಯುಸಿರೆಳೆಯುವ ಮುನ್ನ ವೀಡಿಯೊದಲ್ಲಿ ದುಷ್ಕರ್ಮಿಳ ಹೆಸರು ಹೇಳಿದ್ದಾಳೆ. ಆದರೆ, ಅವರನ್ನು ಪೊಲೀಸರು ಬಂಧಿಸುತ್ತಿಲ್ಲ. ನಮ್ಮ ಪರವಾಗಿ ಧ್ವನಿ ಎತ್ತುವವರು ಯಾರೂ ಇಲ್ಲ” ಎಂದು ಸಾವನ್ನಪ್ಪಿದ ಯುವತಿಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಯುವತಿಯು ತನ್ನ ಮೇಲೆ ದೌರ್ಜನ್ಯ ಎಸಗಿದವರು ಸತೀಶ್ ರಾಯ್ ಹಾಗೂ ಚಂದನ್ ಕುಮಾರ್‌ ರಾಯ್ ಎಂದು ಹೇಳಿರುವ ವಿಡಿಯೋ ವೈರಲಾಗಿದ್ದರೂ, ಆರೋಪಿಗಳನ್ನು ಬಂಧಿಸಿಲ್ಲ.

“ಆರೋಪಿಗಳು ಮೂರು ತಿಂಗಳಿನಿಂದ ಅವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು.ಅಕ್ಟೋಬರ್ 30 ರಂದು ಸಂಜೆ 5 ಗಂಟೆಗೆ ಚಂದನ್ ಕುಮಾರ್ ಮತ್ತು ಸತೀಶ್ ಕುಮಾರ್ ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು” ಎಂದು ಪಾಟ್ನಾದಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಸಹೋದರ ಹೇಳುತ್ತಾರೆ.

ಎಬಿಪಿ ನ್ಯೂಸ್ ವರದಿಯ ಪ್ರಕಾರ “ಸತೀಶ್ ಯಾದವ್ ಹಳ್ಳಿಯ ಕುಖ್ಯಾತ ಗೂಂಡಾ ಆಗಿದ್ದು, ಯುವತಿಗೆ ಕಿರುಕುಳ ನಿಡುತ್ತಿದ್ದ. ಯುವತಿಯು ಈ ಬಗ್ಗೆ ದೂರು ನೀಡಿದಾಗ ಸತೀಶ್ ಮತ್ತು ಅವನ ಇಬ್ಬರು ಸಹಚರರು ಗುಲ್ನಾಜ್ ಅವರನ್ನು ಅವರ ಮನೆಯ ಬಳಿ ಜೀವಂತವಾಗಿ ಸುಟ್ಟುಹಾಕಿದರು” ಎಂದು ಹೇಳಿದೆ.

ಜಸ್ಟಿಸ್ ಫಾರ್ ಗುಲ್ನಾಝ್ (#JusticeForGulnaz) ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದು, ಗುಲ್ನಾಜ್ ಅವರ ತಾಯಿ ತಮ್ಮ ಕುಟುಂಬದೊಂದಿಗೆ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿರುವ ವೀಡಿಯೊಗಳು ವೈರಲ್ ಆಗಿದೆ. ಇಷ್ಟಾಗಿಯೂ ಬಿಹಾರದ ಮರು ಚುನಾಯಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಬಿಹಾರ ಪೊಲೀಸರಿಂದ ಇನ್ನೂ ಯಾವುದೇ ಹೇಳಿಕೆಗಳು ಹೊರ ಬಂದಿಲ್ಲ.


ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಬಾಲಕಿಯ ಹೃದಯ ಮತ್ತು ಶ್ವಾಸಕೋಶ ಕಿತ್ತೊಯ್ದ ಕಾಮುಕರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights