ದಲಿತರಿಗೆ ಕ್ಷೌರ ಮಾಡಿದ್ದಕ್ಕೆ ಸಾಮಾಜಿಕ ಬಹಿಷ್ಕಾರ: ಅಮಾನವೀಯತೆಗೆ ಸಾಕ್ಷಿಯಾದ ನಂಜನಗೂಡು!

ದಲಿತರಿಗೆ ಕ್ಷೌರ ಮಾಡಿದ ಏಕೈಕ ಕಾರಣಕ್ಕೆ ಸವಿತಾ ಸಮಾಜದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲೆರೆ ಎಂಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ ಎಂಬುವವರು ಬಹಳ ವರ್ಷಗಳಿಂದ ಕ್ಷೌರಿಕ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ಎಲ್ಲರಿಗೂ ಕಟಿಂಗ್ ಮತ್ತು ಸೇವಿಂಗ್ ಮಾಡುವುದು ಅವರ ಕಾಯಕ. ಆದರೆ ಕೆಲದಿನಗಳ ಹಿಂದೆ ನಾಯಕ ಸಮುದಾಯಕ್ಕೆ ಸೇರಿದ ಕೆಲವರು ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಕಟಿಂಗ್ ಮತ್ತು ಸೇವಿಂಗ್ ಮಾಡಬಾರದು ಎಂದು ಆದೇಶಿಸಿದ್ದರು. ಅಲ್ಲದೆ ಅದುವರೆಗೂ ಮಾಡಿದ್ದಕ್ಕೆ ಎರಡು ಬಾರಿ 5000 ರೂ ದಂಡ ಕಟ್ಟಿಸಿಕೊಂಡಿದ್ದಾರೆ.

ಆದರೆ ಆ ಸಮಯದಲ್ಲಿ ತಾಲ್ಲೂಕು ಕಚೇರಿಯ ಕೆಲ ಅಧಿಕಾರಿಗಳು ಎಲ್ಲರಿಗೂ ಕಟಿಂಗ್ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಒತ್ತಡ ಹಾಕಿದ್ದರು. ಅದರಂತೆ ನಾನು ಎಲ್ಲರಿಗೂ ಕಟಿಂಗ್ ಮಾಡುತ್ತಿದ್ದೆ. ಒಂದು ವೇಳೆ ಪರಿಶಿಷ್ಟ ಜಾತಿಯವರಿಗೆ ಕಟಿಂಗ್ ಮಾಡುವುದೇ ಆದರೆ 200-300ರೂ ಚಾರ್ಜ್ ಮಾಡಬೇಕೆಂದು ನಾಯಕ ಸಮುದಾಯದವರು ಧಮಕಿ ಹಾಕಿದ್ದಾರೆ. ಆದರೆ ಅದಕ್ಕೆ ಮಲ್ಲಿಕಾರ್ಜುನ ಶೆಟ್ಟಿಯವರು ಅದಕ್ಕೆ ಒಪ್ಪದೆ ಇಲ್ಲ ನಾನು 60-80 ರೂ ಮಾತ್ರ ತೆಗೆದುಕೊಳ್ಳುವುದು ಎಂದಿದ್ದಾರೆ. ಇದರಿಂದ ಕುಪಿತರಾದ ನಾಯಕ ಸಮುದಾಯದ ಚನ್ನನಾಯಕ ಎಂಬುವವರು 50000 ದಂಡ ಕಟ್ಟುವಂತೆ ಆದೇಶಿಸಿದ್ದಾರೆ.

ಈ ಕುರಿತು ಮಲ್ಲಿಕಾರ್ಜುನ ಶೆಟ್ಟಿಯವರು ಪೊಲೀಸ್ ಠಾಣೆ, ತಹಶೀಲ್ದಾರ್‌ರವರ ಬಳಿ ತಮಗೆ ರಕ್ಷಣೆ ಕೊಡುವಂತೆ ಮನವಿ ಮಾಡಿದರೂ ಸಹ ಅವರ್ಯಾರು ಸ್ಪಂದಿಸಿಲ್ಲ ಎಂಬುದು ಅವರ ಅಳಲಾಗಿದೆ. ಈ ನಡುವೆ ನಾಯಕ ಸಮುದಾಯದ ಕೆಲವರು ಮಲ್ಲಿಕಾರ್ಜುನ ಶೆಟ್ಟಿಯ ಮಗನನ್ನು ಪುಸಲಾಯಿಸಿ ಆತನಿಗೆ ಮದ್ಯ ಕುಡಿಸಿದ್ದು, ಮದ್ಯದ ಅಮಲಿನಲ್ಲಿ ಅವನನ್ನು ನಗ್ನಗೊಳಿಸಿ ಅದನ್ನು ವಿಡಿಯೋ ಮಾಡಿಕೊಂಡು ತಮ್ಮ ವಿರುದ್ಧ ದೂರು ನೀಡಿದರೆ ಈ ವಿಡಿಯೋವನ್ನು ಎಲ್ಲಡೆ ಹಂಚಲಾಗುವುದು ಎಂದು ಬ್ಲಾಕ್‌ಮೇಲ್ ಮಾಡಿರುವುದಾಗಿಯೂ ಮಲ್ಲಿಕಾರ್ಜುನ ಶೆಟ್ಟಿ ಆರೋಪಿಸಿದ್ದಾರೆ.

ಸದ್ಯ ಕೆಲ ದಲಿತ ಮುಖಂಡರು ಇದನ್ನು ಗಂಭೀರವಾಗಿ ಪರಿಗಣಿಸಿ ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್‌ರವ‌ರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ತಹಶೀಲ್ದಾರ್ ಖುದ್ದಾಗಿ ಗ್ರಾಮಕ್ಕೆ ತೆರಳುವುದಾಗಿ, ಒಂದು ವೇಳೆ ಆರೋಪ ಸಾಬೀತಾದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸುವುದಾಗಿ ತಿಳಿಸಿದ್ದಾರೆ. ಪ್ರಕರಣ ಎಲ್ಲಿಗೆ ಸಾಗುತ್ತದೆ ಕಾದು ನೋಡಬೇಕಿದೆ.


ಇದನ್ನೂ ಓದಿ: ವೋಟರ್‌ ಐಡಿಯೇ ನಮ್ಮ ಅಸ್ತ್ರ; ತಮಿಳುನಾಡು ಜನರಿಗೆ ಕಮಲ್‌ ಹಾಸನ್‌ ಕರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights