ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡುತ್ತೇವೆ: ವರದರಾಜೇಂದ್ರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊರೊನಾ-ಲಾಕ್‌ಡೌನ್‌ ಸಂದರ್ಭವನ್ನು ಬಳಿಸಿಕೊಂಡು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿ, ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ ತಿದ್ದುಪಡಿಗಳನ್ನು ಜಾರಿಗೊಳಿಸಿದ್ದು, ಸರ್ಕಾರ ಕಾರ್ಮಿಕ ವಿರೋಧಿ ನಡೆಯನ್ನು ಅನುಸರಿಸುತ್ತಿದೆ. ಹಾಗಾಗಿ ಸರ್ಕಾರದ ವಿರುದ್ಧ  ನ.26ರಂದು ದೇಶಾದ್ಯಂತ ನಡೆಯಲಿರುವ ಅಖಿಲ ಭಾರತ ಮುಷ್ಕರದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯೂ ಭಾಗಿಯಾಗಲಿದೆ ಎಂದು ಸಂಘಟನೆಯ ಸಂಚಾಲಕರಾದ ವರದರಾಜೇಂದ್ರ ತಿಳಿಸಿದ್ದಾರೆ.

ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರವು ಕಾರ್ಮಿಕರ ಪರವಾಗಿದ್ದ 44 ಕಾನೂನುಗಳನ್ನು ಕ್ರೋಢಿಕರಿಸಿ ನಾಲ್ಕೂ ಕೋಡ್‌ಗಳಾಗಿ ಮಾಡುತ್ತಿದೆ. ಇವು ಮಾಲೀಕರ ಪರವಾಗಿದ್ದು ಕಾರ್ಮಿಕರ ಕೆಲಸದ ಭದ್ರತೆ, ಸಾಮಾಜಿಕ ಭದ್ರತೆ, ಮತ್ತು ಸಂಬಳ ಭದ್ರತೆಯನ್ನು ಇವು ಕಸಿದುಕೊಂಡು ಅನಿರ್ಧಿಷ್ಟ ಅವಧಿಯ ಕೆಲಸಕ್ಕೆ ಅನುಮತಿ ನೀಡುತ್ತಿದೆ” ಎಂದು ಕಿಡಿಕಾರಿದರು.

ವೇತನ ಕೋಡ್ ಎಂಬ ಸಂಹಿತೆಯು ಕಾರ್ಮಿಕರ ವೇತನದ ಖಾತ್ರಿ ಮತ್ತು ಕನಿಷ್ಟ ವೇತನ ಜಾರಿ ಮಾಡುವ ಮಾಲೀಕರ ಜವಾಬ್ದಾರಿಯಿಂದ ತೆಗೆದು, ಬೇಕಾಬಿಟ್ಟಿ ನಡೆಸಿಕೊಳ್ಳಲು ಅವಕಾಶ ನೀಡುತ್ತದೆ. ಸಾಮಾಜಿಕ ಭದ್ರತೆ ಕೋಡ್ ಈಗ ಕಾರ್ಮಿಕರಿಗೆ ಇರುವ ಸಾಮಾಜಿಕ ಭದ್ರತೆಗಳಾದ ಇಎಸ್‌ಐ, ಪಿ.ಎಫ್ ಮತ್ತು ಗ್ರಾಚುಟಿ ಪಾವತಿಸುವ ಮಾಲೀಕರ ಜವಾಬ್ದಾರಿಯನ್ನು ಕಿತ್ತುಹಾಕಿದೆ ಎಂದು ವರದರಾಜೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ನ. 26-27ರಂದು ರೈತ-ಕಾರ್ಮಿಕ ಐತಿಹಾಸಿಕ ಹೋರಾಟಕ್ಕೆ ಸಜ್ಜಾಗುತ್ತಿದೆ ಭಾರತ!

ಕೈಗಾರಿಕಾ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥತಿಗಳ ಸಂಹಿತೆ ಹೆಸರಿನಲ್ಲಿ ಹಾಲಿ 100 ಕಾರ್ಮಿಕರು ಇರುವ ಕಾರ್ಖಾನೆಯನ್ನು ಮುಚ್ಚಲು ಸರ್ಕಾರದ ಅನುಮತಿ ಬೇಕಿತ್ತು. ಆದರೆ ಈಗ 300ಗಿಂತ ಕಡಿಮೆ ಕಾರ್ಮಿಕರು ಇರುವ ಕಾರ್ಖಾನೆಯನ್ನು ಮುಚ್ಚಲು ಸರ್ಕಾರದ ಅನುಮತಿ ಅಗತ್ಯವಿರುವುದಿಲ್ಲ ಮತ್ತು ಪ್ರಧಾನ ಉದ್ಯೋಗದಾತರಿಗೆ ಗುತ್ತಿಗೆ ಕಾರ್ಮಿಕರ ಕುರಿತು ಯಾವುದೇ ಜವಾಬ್ದಾರಿ ಇರುವುದಿಲ್ಲ ಎಂಬ ತಿದ್ದುಪಡಿ ತರಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೋದಿ ಸರ್ಕಾರದ ಕೈಗಾರಿಕಾ ಸಂಬಂಧಗಳ ಸಂಹಿತೆಯು ಕಾರ್ಮಿಕರ ಮುಷ್ಕರದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದರಲ್ಲಿ ಮುಷ್ಕರದಲ್ಲಿ ಭಾಗವಹಿಸುವ ಕಾರ್ಮಿಕರಿಗೆ ಶಿಕ್ಷೆ ಮತ್ತು 50000 ರೂಗಳ ದಂಡ ವಿಧಿಸಬಹುದಾಗಿದೆ. ಕಾರ್ಮಿಕರಲ್ಲದ ವ್ಯಕ್ತಿಯು ಕಾರ್ಮಿಕ ಸಂಘದ ಪದಾಧಿಕಾರಿಯಾಗುವುದನ್ನು ನಿಷೇದಿಸುತ್ತದೆ. ಶತಮಾನಗಳ ಹೋರಾಟದಿಂದ ಕಾರ್ಮಿಕರು 8 ಗಂಟೆಗಳ ಕೆಲಸದ ಅವಧಿ ಹಕ್ಕು ಪಡೆದಿದ್ದುದ್ದನ್ನು ಮೋದಿ ಸರ್ಕಾರ ಒಂದೇ ಏಟಿನಲ್ಲಿ ಮುಗಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಾಗಾಗಿ ತಿದ್ದುಪಡಿಯ ಮೂಲಕ ತರಲು ಹೊರಟಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಈ ಕೂಡಲೇ ಹಿಂಪಡೆಯಬೇಕು. ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಕೈಬಿಟ್ಟು ಬಲಪಡಿಸಲು ಕ್ರಮವಹಿಸಬೇಕು. ಎಲ್ಲಾ ರೀತಿಯ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ನಿಷೇದಿಸಬೇಕು. ರೈತ ವಿರೋಧಿಯಾಗಿರುವ ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ನವೆಂಬರ್ 26-27 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನಮ್ಮ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಜನಶಕ್ತಿಯ ಪದಾಧಿಕಾರಿಗಳಾದ ಪೂರ್ಣಿಮಾ, ಸಿದ್ದರಾಜು, ಪುಟ್ಟಸ್ವಾಮಿ, ಈಶ್ವರಿ ಮುಂತಾದವರು ಭಾಗವಹಿಸಿದ್ದರು.


ಇದನ್ನೂ ಓದಿ: ನ.26ಕ್ಕೆ ದೇಶಾದ್ಯಂತ ರೈತ-ಕಾರ್ಮಿಕರ ಮುಷ್ಕರ: ವಿದ್ಯಾರ್ಥಿ ಸಂಘಟನೆಗಳ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights