ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್‌ ಆದೇಶ; 198 ವಾರ್ಡ್‌ಗಳಿಗೆ ಚುನಾವಣೆ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ್ದು, ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಮೀಸಲಾತಿ ಪ್ರಕಟಗೊಂಡ ಆರು ವಾರಗಳೊಳಗೆ ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿ ಆದೇಶ ಹೊರಡಿಸಿದೆ.

ಬಿಬಿಎಂಪಿ ಚುನಾವಣೆಯನ್ನು ಶೀಘ್ರವಾಗಿ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌. ಓಕ‌ ನೇತೃತ್ವದ ನ್ಯಾಯಪೀಠ, 198 ವಾರ್ಡ್‌ಗಳಲ್ಲಿಯೂ ಚುನಾವಣೆಯನ್ನು ನಡೆಸಬೇಕು ಎಂದು ಆದೇಶ ನೀಡಿದೆ.

ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಿ ಕಾಯ್ದೆ ತಂದಿರುವುದರಿಂದಾಗಿ ಸದ್ಯ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದ, ಪಾಲಿಕೆ ಸದಸ್ಯ ಶಿವರಾಜು ಅವರು, ಹಿಂದಿನ 198 ವಾರ್ಡ್‌ಗಳ ಪ್ರಕಾರವೇ ಚುನಾವಣೆ ನಡೆಸುವಂತೆ ಸರ್ಕಾರ ಮತ್ತು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ವಾದವನ್ನು ಆಲಿಸಿರುವ ಕೋರ್ಟ್‌, ಹಿಂದಿನ 198 ವಾರ್ಡ್‌ಗಳ ಆಧಾರದಲ್ಲಿಯೇ ಚುನಾವಣೆಯನ್ನು ನಡೆಸಬೇಕು ಎಂದು ಹೇಳಿದೆ.

2020 ನ.10ಕ್ಕೆ ಪಾಲಿಕೆ ಅವಧಿ ಮುಗಿದಿದ್ದು, ಚುನಾವಣೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಿರುವ 198 ವಾರ್ಡ್‌ಗಳ ಆಧಾರದಲ್ಲಿಯೇ ಮತದಾರರ ಪಟ್ಟಿ ಮತ್ತು ಮೀಸಲಾತಿ ಪಟ್ಟಿ ರಚಿಸಲಾಗಿದೆ. ಆದರೆ, ಸರ್ಕಾರ ಚುನಾವಣೆಗೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಚುನಾವಣಾ ಆಯೋಗವು ಹೈಕೋರ್ಟ್‌ಗೆ ತಿಳಿಸಿತ್ತು.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಸರ್ಕಾರ ಕಾಯ್ದೆ ಜಾರಿಗೆ ತಂದಿತು. ಅದಕ್ಕಾಗಿ ಸದ್ಯವೇ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂದು ಹೇಳಿ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಸರ್ಕಾರದ ಈ ನಡೆ ಚುನಾವಣೆಯನ್ನು ದೀರ್ಘಾವಧಿಗೆ ಮುಂದೂಡುವ ಪ್ರಯತ್ನ ಎಂದು ಹೇಳಿದ್ದ ಹೈಕೋರ್ಟ್, ಈ ಹಿಂದೆ ಇದ್ದ 198 ವಾರ್ಡ್‌ಗಳ ಪ್ರಕಾರವೇ ಚುನಾವಣೆ ನಡೆಸಲು ಸೂಚಿಸಿದೆ.


ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣೆ: BJP ವಿರುದ್ಧ 57 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೂ TRSಗೆ ನಿರಾಸೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights