ತೆರದಾಳ ಪುರಸಭೆ ಮಹಿಳಾ ಸದಸ್ಯೆ ಮೇಲೆ ಬಿಜೆಪಿ ಶಾಸಕ ಹಲ್ಲೆ; ಸಿಎಂ ಮೌನವೇಕೆ ಎಂದು ಡಿಕೆಶಿ ಆಕ್ರೋಶ

ತೆರದಾಳ ಪುರಸಭೆಯ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಮಹಿಳಾ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮಂತ್ರಿಗಳಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಲಿ, ಬಿಜೆಪಿ ಮಹಿಳಾ ಸಂಘಟನೆಗಳಾಗಲಿ ಮೌನ ವಹಿಸಿರುವುದೇಕೆ? ಮುಖ್ಯಮಂತ್ರಿಗಳು ಅವರ ಮನೆಯ ಹೆಣ್ಣುಮಕ್ಕಳಿಗೆ ಇಂತಹ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

‘ಭ್ರೂಣ ಹತ್ಯೆ ಎಂದರೆ ಕೊಲೆಗೆ ಸಮ. ಜತೆಗೆ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದೆ. ಇದು ಮಾನಭಂಗ ಹಾಗೂ ದೌರ್ಜನ್ಯದ ಪ್ರಕರಣ. ಮಹಾಭಾರತದಲ್ಲಿ ದುಶ್ಶಾಸನನ ದೌರ್ಜನ್ಯ ಕಣ್ಣೆದುರು ಕಂಡಂತೆ ಈ ಪ್ರಕರಣವನ್ನು ಮಾಧ್ಯಮಗಳು ತೋರಿಸಿವೆ. ಆದರೂ ಈವರೆಗೂ ಪೊಲೀಸರು ಪ್ರಕರಣ ದಾಖಲಿಸಿ, ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಕಿಡಿ ಕಾರಿದರು.

ಮುಖ್ಯಮಂತ್ರಿಗಳಾಗಲಿ, ಮಹಿಳಾ ಸಚಿವರಾಗಲಿ, ಶೋಭಾ ಕರಂದ್ಲಾಜೆ ಅವರಾಗಲಿ, ದೇಶದಲ್ಲಿರುವ ಮಹಿಳಾ ಸಂಘಟನೆಗಳಾಗಲಿ ಯಾರೊಬ್ಬರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇದು ಕೇವಲ ದೇಶ ಮಟ್ಟದಲ್ಲ, ಅಂತಾರಾಷ್ಟ್ರೀಯ ಮಟ್ಟದ ಪ್ರಕರಣ. ಬಿಜೆಪಿಯವರು ದೌರ್ಜನ್ಯ ಎಸಗಿದ ತಮ್ಮ ಶಾಸಕನ ರಕ್ಷಣೆಗಾಗಿ ನಿಂತಿರುವುದು ನಾಚಿಕೆಗೇಡಿನ ವಿಚಾರ. ಮುಖ್ಯಮಂತ್ರಿಗಳೇ ಇದೇ ಪರಿಸ್ಥಿತಿ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಬಂದಿದ್ದರೆ, ಶೋಭಾ ಕರಂದ್ಲಾಜೆ ಅವರೇ ಹಾಗೂ ಶಶಿಕಲಾ ಜೊಲ್ಲೆ ಅವರೇ ನಿಮಗೆ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಲವ್‌ಜಿಹಾದ್‌ ಕಾನೂನು: ಪೊಲೀಸರಿಗೆ ಪ್ರೀತಿ ಪಾಠ ಹೇಳಿದ ಹಿಂದೂ-ಮುಸ್ಲೀಂ ಕುಟುಂಬ!

“ಈ ವಿಚಾರವಾಗಿ ನಾನು, ನಮ್ಮ ವಿರೋಧ ಪಕ್ಷದ ನಾಯಕರು ಹಾಗೂ ಮಹಿಳಾ ಶಾಸಕರು ಇಂದು ತೆರದಾಳಕ್ಕೆ ಹೋಗಿ ಸಂತ್ರಸ್ತರ ಪರ ನಿಲ್ಲಲು ನಿರ್ಧರಿಸಿದ್ದೇವೆ. ಅಧಿವೇಶನದಲ್ಲೂ ಈ ವಿಚಾರವಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಇದು ಮಾನವೀಯತೆ ಹಾಗೂ ಹೆಣ್ಣಿನ ಕುಲಕ್ಕೆ ಮಾಡಿರುವ ಅಪಮಾನ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯೇ ಆ ಘಟನೆಗೆ ಕಾರಣರಾದವರ ಬಗ್ಗೆ ಹೇಳಿದ ನಂತರವೂ ಇನ್ನು ಅವರನ್ನು ಬಂಧಿಸಿಲ್ಲ ಎಂದರೆ, ಈ ಸರ್ಕಾರದಲ್ಲಿ ಮಹಿಳೆಯರಿಗೆ ಯಾವ ರೀತಿಯ ರಕ್ಷಣೆ, ಗೌರವ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದರು.

ಬಾಗಲಕೋಟೆಯ ಮಹಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾದ ಸವಿತಾ ಹುರಕಡ್ಲಿ ಅವರನ್ನು ಪೊಲೀಸರ ಸಮ್ಮುಖದಲ್ಲೇ ಎಳೆದಾಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು.


ಇದನ್ನೂ ಓದಿ: ಭಾರತದ ರೈತರ ಹೋರಾಟಕ್ಕೆ ಇಂಗ್ಲೆಂಡ್‌ನ 36 ಸಂಸದರ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights