ಭಾರತ್‌ ಬಂದ್‌ ವಿರುದ್ಧ ಬಿಜೆಪಿ ಜಾಲತಾಣದಲ್ಲಿ ಕ್ಯಾಂಪೇನ್‌; ಕೇಸರಿ ಪಡೆಯ ವಾದವೇನು?

ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ಧ ರೈತರು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ಭಾಗವಾಗಿ ಇಂದು ಭಾರತ್‌ ಬಂದ್‌ಗೆ ಕರೆಕೊಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಕಾನೂನುಗಳನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಬೆಂಬಲಿಗರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದೆ. ಅಲ್ಲದೆ, ಈ ಪ್ರತಿಭಟನೆಯು ರಾಜಕೀಯ ವಿರೋಧಿಗಳು ಹರಡುತ್ತಿರುವ ತಪ್ಪು ಮಾಹಿತಿ ಎಂಬುದನ್ನು ಪುಶ್‌ ಮಾಡಲು ಪ್ರಯತ್ನಿಸುತ್ತಿದೆ.

ಇದಕ್ಕಾಗಿ, ಕೃಷಿ ಕಾನೂನುಗಳ ಕುರಿತ ಮೇಮ್‌ಗಳನ್ನು ಹಿಂದಿ ಭಾಷೆಯಲ್ಲಿ ರಚಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತಿದೆ. ಇವುಗಳಲ್ಲಿ, ಕೃಷಿ ಸುಗ್ರೀವಾಜ್ಞೆಗಳ ಪಾಸಿಟಿವ್ ಅಂಶಗಳನ್ನು ಉಲ್ಲೇಖಿಸುತ್ತಿದ್ದು, ರೈತರಿಗೆ ಆಗುವ ಉಪಯೋಗ, ಸರ್ಕಾರಿ ಬೆಂಬಲಿತ ಮಾರುಕಟ್ಟೆ, ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಮುಂದುವರಿಕೆಯ ಜೊತೆಗೆ ಹೊಸ ಹೊಸ ಉತ್ತಮ ಅಂಶಗಳನ್ನು ಸೇರಿಸಲಾಗಿದೆ ಎಂದು ಬಿಜೆಪಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಭಾರತ್‌ ಬಂದ್‌ ವಿರುದ್ದ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದೆ.

ಉದಾಹರಣೆಗೆ, ಬಿಜೆಪಿಯ ಒಂದು ಮೇಮ್‌ನಲ್ಲಿ “ಹಿಂದಿನ ಸರ್ಕಾರಗಳು ರೈತರನ್ನು ದಾರಿ ತಪ್ಪಿಸುತ್ತಿದ್ದರು, ಆದರೆ ಮೋದಿ ಸರ್ಕಾರ ರೈತರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದೆ.

ಇದು “ವದಂತಿ” ಮತ್ತು “ಸತ್ಯ”ವನ್ನು ಪ್ರತ್ಯೇಕಿಸುತ್ತದೆ: ವದಂತಿಯೆಂದರೆ “ಕೈಗಾರಿಕೋದ್ಯಮಿಗಳು ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ” ಎಂಬುದು. ಸತ್ಯವೆಂದರೆ, “ಹೊಸ ಕಾನೂನು ರೈತರಿಗೆ ಸಂಪೂರ್ಣ ರಕ್ಷಣೆ ನೀಡುವುದರಿಂದ ರೈತರ ಭೂಮಿಯನ್ನು ಯಾರೂ ವಶಪಡಿಸಿಕೊಳ್ಳಲು ಅಸಾಧ್ಯ” ಎಂದು ಮತ್ತೊಂದು ಮೇಮ್‌ನಲ್ಲಿ ಹೇಳಲಾಗಿದೆ.

ಹಾಗಾದರೆ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವುದು ಏಕೆ? 

ಎಂಎಸ್‌ಪಿ ಮುಂದುರೆಯುತ್ತದೆ ಎಂದು ಸರ್ಕಾರ ತನ್ನ ಮಾತುಗಳಲ್ಲಿ ಹೇಳುತ್ತಲೇ ಇದೆ. ಆದರೆ, ಅದನ್ನು ಲಿಖಿತವಾಗಿ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಹೊಸ ಕೃಷಿ ನೀತಿಯಲ್ಲಿಯೂ ಎಂಎಸ್‌ಪಿ ಮುಂದುವರೆಯುವುದೇ ಆದರೆ, ಅದನ್ನು ಲಿಖಿತವಾಗಿ ಸರ್ಕಾರ ನೀಡಬೇಕು. ಆದರೆ, ಸರ್ಕಾರ ಅದನ್ನು ಮಾಡುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಎಂಎಸ್‌ಪಿ ರದ್ದಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರೈತರು ಹೇಳಿದ್ದಾರೆ.

ಅಲ್ಲದೆ, ಹೊಸ ಕಾಯ್ದೆಯಲ್ಲಿ ಧಾನ್ಯಗಳ ಸಂಗ್ರಹ ಮಿತಿಯನ್ನು ಏರಿಸಲು ಅಥವಾ ರದ್ದುಮಾಡಲು ಅವಕಾಶವಿದೆ. ಇದು ಬಂಡವಾಳಿಗರು ಧಾನ್ಯಗಳನ್ನು ತಮ್ಮ ಗೋಡೋನ್‌ನಲ್ಲಿ ಎಷ್ಟು ಬೇಕಾದರೂ ಸಂಗ್ರಹಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವುದು ನಿಶ್ಚಿತ ಎಂಬುದನ್ನು ರೈತರು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿಯೇ ಈ ಕಾನೂನುಗಳ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ.


ಇದನ್ನೂ ಓದಿ: ಭಾರತ್ ಬಂದ್: ಇದು ಚಾರಿತ್ರಿಕ ಮತ್ತು ನಿರ್ಣಾಯಕ ಹೋರಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights