ಭೂಸುಧಾರಣಾ ತಿದ್ದುಪಡಿ ಕಾಯ್ದೆಗೆ ಅನುಮೋದನೆ : ಕುಮಾರಸ್ವಾಮಿ ವಿರುದ್ಧ ಕೋಡಿಹಳ್ಳಿ ಗರಂ!

ರೈತರ ಆಕ್ರೋಶಕ್ಕೆ ಕಾರಣವಾಗಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಧಾನ ಪರಿಷತ್‍ನಲ್ಲಿ ಅನುಮೋದನೆ ಪಡೆಯಲು ಬೆಂಬಲ ನೀಡಿದ ಜೆಡಿಎಸ್ ಹಾಗೂ ಮಾಜಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಹಾಗೂ ರೈತ ಮುಖಂಡರು ಡೀಲ್, ಪುಟಗೋಸಿ ರಾಜಕಾರಣಿಗಳು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆರೋಪಗಳಿಗೆ ಕೋಲಾರದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಹಾಗೂ ರೈತ ಮುಖಂಡರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ರೈತರ ಹಿತ ಕಾಯುವ ಕೆಲಸ ಮಾಡಿಕೊಂಡು ಬಂದಿದೆ. ಜೆಡಿಎಸ್ ಎಂದೂ ರೈತ ವಿರೋಧಿ ನಿಲುವು ತಳೆಯಲ್ಲ. ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆ ಮಾಡುವವರಿಂದ ನಾನು ಕಲಿಯಬೇಕಾದ್ದು ಏನೂ ಇಲ್ಲ. ಸಿದ್ದರಾಮಯ್ಯ ಅವರದ್ದು ಡಬಲ್ ಗೇಮ್ ಎಂದು ಹೆಚ್‍ಡಿಕೆ ತಿರುಗೇಟು ನೀಡಿದ್ದಾರೆ.

ದೇವೇಗೌಡರು 60 ವರ್ಷಗಳಿಂದ ರೈತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಜೆಡಿಎಸ್ ಪಕ್ಷದಿಂದ ರೈತರನ್ನು ಉಳಿಸಲು ಸಾಲಮನ್ನಾ ಸೇರಿದಂತೆ ಹಲವು ಬಳುವಳಿ ಕೊಟ್ಟಿದ್ದೇವೆ. ಹೀಗಾಗಿ ಇವರಿಂದ ನನ್ನ ಪಕ್ಷಕ್ಕೆ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಾಗಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಬಗ್ಗೆ ನನಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ನನಗೆ ರೈತನಿಗೆ ಒಳ್ಳೆಯದಾಗಬೇಕು. ಈ ಕಾರಣಕ್ಕೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ಬೆಂಬಲ ನೀಡಿದ್ದೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರೈತರಿಗೆ ಜೆಡಿಎಸ್ ಪಕ್ಷ ದ್ರೋಹ ಮಾಡಿದೆ ಎಂದು ಆರೋಪಗಳು ಬಂದಿವೆ. ಜೆಡಿಎಸ್ ರೈತರ ದ್ರೋಹಿ ಎಂದು ಕೆಲವರು ಪಟ್ಟಕಟ್ಟಲು ಹೊರಟಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ 14 ತಿಂಗಳ ಅವಧಿಯಲ್ಲಿ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದಾಗ ಯಾರೂ ನನ್ನನ್ನು ಬೆಂಬಲಿಸಲಿಲ್ಲ. ಈ ಕಾಯ್ದೆ ರೈತ ವಿರೋಧಿ ಹೇಗೆ ಎಂಬುದನ್ನು ರೈತ ಸಂಘಟನೆಗಳು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಡಬಲ್ ಸ್ಟಾಂಡರ್ಡ್
ಭೂಸುಧಾರಣಾ ಕಾಯ್ದೆಯ 79(ಎ, ಬಿ) ಕಲಂ ಅಗತ್ಯತೆ, ಸಾಧಕ-ಬಾಧಕಗಳ ಪರಾಮರ್ಶೆಗೆ ಸಿದ್ದರಾಮಯ್ಯ ಅವರೂ ಸಿಎಂ ಆಗಿದ್ದಾಗ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದ್ದರು. ಅಂದಿನ ಸಂಪುಟ ಉಪಸಮಿತಿ 79(ಎ,ಬಿ) ಕಲಂಗಳನ್ನು ಕೈಬಿಡುವಂತೆ ಶಿಫಾರಸು ಮಾಡಲಾಗಿತ್ತು. ಈ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅವರದ್ದು ಈಗ ದಿವ್ಯ ಮೌನ. ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಉತ್ತರ ಕೊಡಬೇಕು. ನಾನು ಡಬಲ್‍ಗೇಮ್ ರಾಜಕಾರಣ ಮಾಡಿಲ್ಲ. ಡಬಲ್ ಗೇಮ್ ಕಾಂಗ್ರೆಸ್‍ನವರ ಹುಟ್ಟುಗುಣ.

ಈಗ ರೈತ ಪರ ಹೋರಾಟ ಮಾಡುತ್ತೇವೆ ಎಂದು ಹಸಿರು ಶಾಲು ಹಾಕಿಕೊಂಡು ಕಾಂಗ್ರೆಸ್ ಮುಖಂಡರು ಹೊರಟಿದ್ದಾರೆ. ತಿದ್ದುಪಡಿ ಕಾಯ್ದೆಯ ಬಗ್ಗೆ ನೀವು ತಿಳಿದುಕೊಂಡಿದ್ದೀರಾ ? ನಿಮ್ಮಿಂದ ನಾನು ರೈತ ಪರ ಹೋರಾಟ ಮಾಡಬೇಕೆಂಬುದರ ಬಗ್ಗೆ ಯಾರಿಂದಲೂ ಕಲಿಯಬೇಕಿಲ್ಲ. ನಮ್ಮಪ್ಪನೇ ನನಗೆ ಕಲಿಸಿದ್ದಾರೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಗುಲಾಮಿ ಪಕ್ಷವಲ್ಲ
ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ. ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ಕಾಂಗ್ರೆಸ್‍ನ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಭೂಸುಧಾರಣಾ ಕಾಯ್ದೆಯ 79(ಎ, ಬಿ) ಕಲಂನಿಂದ ನಾನೇ ತೊಂದರೆ ಅನುಭವಿಸಿದ್ದೇನೆ. 1983-84ರಲ್ಲಿ ನಾನಿನ್ನೂ ರಾಜಕಾರಣಕ್ಕೆ ಬರುವ ಮುನ್ನವೇ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿ 20 ವರ್ಷ ಯಾತನೆ ಪಟ್ಟಿದ್ದೇನೆ. ಈ ಕಾಯ್ದೆ ದುರುಪಯೋಗಪಡಿಸಿಕೊಂಡು ಅಧಿಕಾರಿಗಳು ಲಕ್ಷಾಂತರ ಕೋಟಿ ಲೂಟಿ ಹೊಡೆದಿದ್ದಾರೆ. ಭೂಸುಧಾರಣಾ ಕಾಯ್ದೆಯ 79(ಎ, ಬಿ) ಇದ್ದಾಗಲು ಈ ದೇಶದಲ್ಲಿ ಕೃಷಿ ಭೂಮಿಯನ್ನು ಯಾರೂ ಖರೀದಿ ಮಾಡಿಲ್ಲವೇ ? ಈಗಲೂ ರೈತರೇ ಭೂಮಿ ಇಟ್ಟುಕೊಂಡಿದ್ದಾರಾ ? ಕಾಯ್ದೆ ವಿಚಾರವಾಗಿ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ರೈತ ಸಂಘದ ಸ್ಥಾಪಕರಾಗಿದ್ದ ಪ್ರೊ.ನಂಜುಂಡಸ್ವಾಮಿ 1994ರಲ್ಲಿ ಶಾಸಕರಾಗಿದ್ದ ಭೂಸುಧಾರಣಾ ಕಾಯ್ದೆಯಿಂದ 79(ಎ, ಬಿ) ಕಲಂ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದರು. ಈ ಕಾಯ್ದೆಯಿಂದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟ ಮೂಲಭೂತ ಹಕ್ಕನ್ನೇ ಕಸಿದುಕೊಂಡಂತಾಗಿದೆ ಎಂದು ಬಾರುಕೋಲು ಚಳಿವಳಿ ಸ್ಥಾಪಕ ನಂಜುಂಡಸ್ವಾಮಿ ವಿಧಾನಸಭೆಯಲ್ಲಿ ಭಾಷಣ ಮಾಡಿದ್ದರು ಹೆಚ್‍ಡಿಕೆ ತಿರುಗೇಟು ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights