Boycott jio; ಅಂಬಾನಿ-ಅದಾನಿ ಕಂಪನಿಗಳ ಬಾಯ್ಕಾಟ್‌ಗೆ ರೈತರ ಕರೆ!

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ರೈತ ವಿರೋಧಿಯಾಗಿದ್ದು, ಇವು ರೈತರನ್ನು ಕಾರ್ಪೊರೇಟ್ ಶಕ್ತಿಗಳ ಕುಣಿಕೆಗೆ ಸಿಕ್ಕಿಸುತ್ತವೆ ಎಂದು ರೈತರು ವಿರೋಧಿಸುತ್ತಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಕುರಿತು ಕಳಿಸಿದ್ದ ಲಿಖಿತ ತಿದ್ದುಪಡಿ ಪ್ರಸ್ತಾಪಗಳನ್ನು ರೈತರು ತಿರಸ್ಕರಿಸಿದ್ದಾರೆ. ಅಲ್ಲದೆ, ಅಂಬಾನಿಗೆ ಸೇರಿದ ರಿಲಯನ್ಸ್‌ ಕಂಪನಿಯ ಪೆಟ್ರೋಲ್‌, ಜಿಯೋ ಸಿಮ್‌ ಸೇರಿದಂತೆ ಎಲ್ಲಾ ರೀತಿಯ ಉತ್ಪನ್ನಗಳನ್ನು ಬಳಸದೇ ಅವುಗಳನ್ನು (ಬಾಯ್‌ಕಾಟ್‌) ತಿರಸ್ಕರಿಸುವಂತೆ ದೇಶದ ಜನರಿಗೆ ರೈತರು ಕರೆಕೊಟ್ಟಿದ್ದಾರೆ.

ನಾವು ಸರ್ಕಾರದ ಪ್ರಸ್ತಾಪಗಳನ್ನು ತಿರಸ್ಕರಿಸುತ್ತೇವೆ. ಪ್ರಧಾನಿ ಮೋದಿಯವರ ಸ್ನೇಹಿತ ಅಂಬಾನಿ-ಅದಾನಿಗಳ ಕಂಪನಿಗಳಿಗೆ ಸೇರಿದ ಉತ್ಪನ್ನಗಳನ್ನು ಬಾಯ್‌ಕಾಟ್‌ ಮಾಡಲು ದೇಶದ ಜನರಿಗೆ ಕರೆಕೊಟ್ಟಿದ್ದೇವೆ. ಡಿಸೆಂಬರ್ 12ರವೆರೆಗೆ ಜೈಪುರ-ದೆಹಲಿ ಹೆದ್ದಾರಿ ಬಂದ್‌ ಮಾಡುತ್ತೇವೆ. ಡಿಸೆಂಬರ್ 14 ರಂದು ರಾಜ್ಯಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಘೋರಾವ್ ಹಾಕುತ್ತೇವೆ ಎಂದು ರೈತ ಮುಖಂಡರ ಶಿವ ಕುಮಾರ್ ಕಕ್ಕಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ದೆಹಲಿಯ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡುವುದಾಗಿ ರೈತರು ಹೇಳಿದ್ದಾರೆ.

ಪ್ರತಿಭಟನಾ ನಿರತ ರೈತರು ಕರೆಕೊಟ್ಟಿರುವ ಬಾಯ್ಕಾಟ್‌ ಜಿಯೋ ಕರೆಗೆ ಬೆಂಬಲ ಸೂಚಿಸಿರುವ ಕರ್ನಾಟಕದ ವಿದ್ಯಾರ್ಥಿ ಯುವಜನರು ಜಿಯೋ ಸಿಮ್‌ ತ್ಯಜಿಸಿ, ಅನ್ಯ ಸಿಮ್‌ಗೆ ಪೋರ್ಟ್‌ ಆಗಿದ್ದಾರೆ. ಈ ಬಗ್ಗೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ!

ಏತನ್ಮಧ್ಯೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ, ಶರದ್ ಪವಾರ್ ಸೇರಿದಂತೆ ಐದು ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದಾರೆ.

ಸರ್ಕಾರದ ಪ್ರಸ್ತಾವನೆಯಲ್ಲಿ ಹೊಸದೇನೂ ಇಲ್ಲ. “ನಾವು ಮೂರು ಕೃಷಿ-ಮಾರ್ಕೆಟಿಂಗ್ ಕಾನೂನುಗಳ ವಿರುದ್ಧ ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಎಂದು ರೈತ ಮುಖಂಡ ಪ್ರಹಲಾದ್ ಸಿಂಗ್ ಭರುಖೇಡಾ ಹೇಳಿದ್ದಾರೆ.


ಇದನ್ನೂ ಓದಿ: MSP ಬಗ್ಗೆ ಲಿಖಿತ ಭರವಸೆ ನೀಡಿದ ಕೇಂದ್ರ ಸರ್ಕಾರ; ರೈತ ಹೋರಾಟದ 10 ಮುಖ್ಯಾಂಶಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights