ಮೇಲ್ಜಾತಿ ಸ್ನೇಹಿತರ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನ ಹತ್ಯೆ
ಸಮಾರಂಭವೊಂದರಲ್ಲಿ ಮೇಲ್ಜಾತಿ ಗೆಳೆಯರ ಊಟದ ತಟ್ಟೆಯನ್ನು ಮುಟ್ಟಿದನೆಂದು 25 ವರ್ಷದ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಕೃಷಿ ಕಾರ್ಮಿಕ ದೇವರಾಜ್ ಅನುರಾಜಿ ಎಂಬಾತ ತನ್ನ ಇಬ್ಬರು ಮೇಲ್ಜಾತಿಯ ಗೆಳೆಯರಾದ ಅಪೂರ್ವಾ ಸೋನಿ ಮತ್ತು ಸಂತೋಷ್ ಪಾಲ್ ಅವರ ಊಟದ ತಟ್ಟೆಯನ್ನು ಮುಟ್ಟಿದ ನಂತರ ಥಳಿತಕ್ಕೆ ಒಳಗಾಗಿದ್ದಾನೆ.
ದೇವರಾಜ್ಗೆ ರಕ್ತಸ್ರಾವವಾಗುವವರೆಗೂ ಕೋಲುಗಳಿಂದ ಹೊಡೆಯಲಾಗಿದೆ. ಆತ ಮೂರ್ಛೆ ಹೋದ ನಂತರ ‘ಈತ ಗಾಯಗೊಂಡಿದ್ದಾನೆ’ ಎಂದು ಆತನ ಮನೆಗೆ ಸಾಗಿಸಿದರು. ನಂತರ ಸಂಜೆ 7 ರ ಸುಮಾರಿಗೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
“ಮೃತ ಮತ್ತು ಆರೋಪಿಗಳು ಒಂದೇ ಹಳ್ಳಿಯವರು. ಪಾರ್ಟಿಯಲ್ಲಿ ತಮ್ಮ ಸ್ನೇಹಿತರ ಊಟದ ತಟ್ಟೆಯನ್ನು ಮುಟ್ಟಿದ್ದಕ್ಕಾಗಿ ಅವರು ದೇವರಾಜ್ನನ್ನು ಕೊಂದಿದ್ದಾರೆ” ಎಂದು ಗೌರಿಹಾರ್ ಪೊಲೀಸ್ ಠಾಣೆಯ ಟೌನ್ ಇನ್ಸ್ಪೆಕ್ಟರ್ ಜಸ್ವಂತ್ ಸಿಂಗ್ ರಜಪೂತ್ ಹೇಳಿದ್ದಾರೆ.
ಇದನ್ನೂ ಓದಿ: ದಲಿತರ ಕೂದಲು ಕತ್ತರಿಸಿದ ಸಲೂನ್ ಮಾಲೀಕನಿಗೆ 50 ಸಾವಿರ ದಂಡದ ಜೊತೆಗೆ ಬಹಿಷ್ಕಾರ!
ಪರಾರಿಯಾಗಿದ್ದ ಆರೋಪಿಗಳ ಮೇಲೆ ಗೌರಿಹಾರ್ ಪೊಲೀಸರು ಕೊಲೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 34 ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ರಜಪೂತ್ ತಿಳಿಸಿದ್ದಾರೆ.
ಇದನ್ನೂ ಓದಿ: ದೂರು ಹಿಂಡೆಯುವಂತೆ ಒತ್ತಾಯ: ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಮೇಲ್ಜಾತಿ ಪುಂಡರು!
“ಆರೋಪಿಗಳನ್ನು ಹುಡುಕಲಾಗುತ್ತಿದೆ. ಅತೀ ಶೀಘ್ರದಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಗುವುದು. ಜೊತೆಗೆ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ವಯ ಸಂತ್ರಸ್ತರ ಕುಟುಂಬಕ್ಕೆ 8.25 ಲಕ್ಷ ರೂ. ಪರಿಹಾರ ಧನ ಸೇರಿದಂತೆ ಇತರ ಪ್ರಯೋಜನಗಳು ಸಿಗಲಿವೆ” ಎಂದು ಛತ್ತರ್ಪುರ ಜಿಲ್ಲೆಯ ಎಎಸ್ಪಿ ಹೇಳಿದರು.
ಮಧ್ಯಪ್ರದೇಶದಲ್ಲಿ ದಲಿತರ ವಿರುದ್ಧದ ಅಪರಾಧ ಹೊಸದೇನಲ್ಲ.
ಕೇವಲ ಹದಿನೈದು ದಿನಗಳ ಹಿಂದೆ, ಸಿಗರೇಟ್ ಹಚ್ಚಲು ಬೆಂಕಿಕಡ್ಡಿ ನೀಡಲು ನಿರಾಕರಿಸಿದ ಕಾರಣಕ್ಕೆ ಗುನಾ ಜಿಲ್ಲೆಯ ಕರೋಡ್ ಗ್ರಾಮದ ನಿವಾಸಿ 50 ವರ್ಷದ ದಲಿತ ಲಾಲ್ಜಿರಾಮ್ ಅಹಿರ್ವಾರ್ ಅವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ನೀಡದಿದ್ದಕ್ಕೆ ದಲಿತನ ಹತ್ಯೆ!

