ಮೋದಿ ನಂ.2: ಯೋಗಿ ಆದಿತ್ಯನಾಥ್ ಇತರ ಬಿಜೆಪಿ ಸಿಎಂಗಳಿಗೆ ಆದರ್ಶವೆಂದು ಬಿಂಬಿಸಲು ಕಾರಣವೇನು?

ಕಳೆದ ವಾರ ವಿವಾದಾತ್ಮಕ ಗೋಹತ್ಯೆ ನಿಷೇಧ ಮಸೂದೆಯನ್ನು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಅಧಿವೇಶಕ್ಕೂ ಕೆಲವು ದಿನಗಳ ಮುನ್ನ ಸಿಎಂ ಯಡಿಯೂರಪ್ಪ ಅವರು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರನ್ನು ಉತ್ತರ ಪ್ರದೇಶಕ್ಕೆ ಕಳಿಸಿಕೊಟ್ಟಿದ್ದರು. ಕಾರಣ, 1955ರ ಗೋಹತ್ಯೆ ವಿರೋಧಿ ಕಾನೂನನನ್ನು ಉತ್ತರ ಪ್ರದೇಶದಲ್ಲಿ ಹೇಗೆ ಶಿಸ್ತುಬದ್ದವಾಗಿ ಜಾರಿ ಮಾಡಲಾಗಿದೆ ಎಂದು ತಿಳಿದುಕೊಳ್ಳಲು ಯುಪಿ ಸಿಎಂ ಯೋಗಿ ಆಧಿತ್ಯಾನಾಥ್‌, ಕರ್ನಾಟಕದ ಸಚಿವರನ್ನು ಆಹ್ವಾನಿಸಿದ್ದರು.

ವಿವಾಹದ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ. ಅದನ್ನು ತಡೆಯಲು ಲವ್‌ ಜಿಹಾದ್‌ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಬಿಜೆಪಿ, ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್ ಸುಗ್ರೀವಾಜ್ಞೆಯನ್ನು ನ.28 ರಂದು ಜಾರಿಗೆ ತಂದಿದೆ. ಇದಾದ ಒಂಬತ್ತು ದಿನಗಳ ನಂತರ, ಡಿ. 07 ರಂದು ಮಧ್ಯಪ್ರದೇಶ ವಿಧಾನಸಭಾ ಸ್ಪೀಕರ್ ರಾಮೇಶ್ವರ ಶರ್ಮಾ ಅವರು “ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ಲವ್‌ ಜಿಹಾದ್ ಕಾನೂನಿಂದ ನಾನು ಪ್ರಭಾವಿತನಾಗಿದ್ದೇನೆ. ಯೋಗಿ ಸರ್ಕಾರ ತ್ವರಿತವಾಗಿ ಕಾನೂನು ಜಾರಿ ಮಾಡಿದೆ. ಅಲ್ಲದೆ, ಮೊದಲ ಪ್ರಕರಣವನ್ನೂ ದಾಖಲಿಸಿದೆ. ಹೀಗಾಗಿ ಕಾನೂನಿನ ಬಗ್ಗೆ ಹೆಚ್ಚು ಚರ್ಚಿಸಲು ಲಕ್ನೋಗೆ ತೆರಳುತ್ತಿದ್ದೇನೆ ಎಂದು  ಶರ್ಮಾ ಹೊರಡುವ ಮೊದಲು ಭೋಪಾಲ್‌ನಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದರು.

ನವೆಂಬರ್ 01 ರಂದು ಯೋಗಿ ಆಧಿತ್ಯನಾಥ್‌  ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್‌ ಕಾನೂನು ಜಾರಿಗೆ ತರುವ ಯೋಜನೆಯನ್ನು ಘೋಷಿಸಿದ ಒಂದು ದಿನದ ನಂತರ, ಹರಿಯಾಣ ಸಿಎಂ ಮನೋಹರ್ ಲಾಲ್‌ ಖಟ್ಟರ್ ಕೂಡ ತಮ್ಮ ಸರ್ಕಾರವೂ ಕಾನೂನು ತರಲು ಆಲೋಚಿಸಿದೆ ಎಂದು ಘೋಷಿಸಿದರು. ಅಲ್ಲದೆ, ಅವರು ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿರುವ ಲವ್‌ ಜಿಹಾದ್‌ ಕಾನೂನುಗಳನ ಅಧ್ಯಯನ ಮಾಡಲು ಮೂರು ಸದಸ್ಯರ ಸಮಿತಿಯನ್ನೂ ರಚಿಸಿದರು.

ಇದನ್ನೂ ಓದಿ: ದ್ರಾವಿಡ ನಾಡಲ್ಲಿ ಬಿಜೆಪಿ ಆಟ: ಕೇಸರಿ ಪಡೆಗೆ ಮರುಳಾಗ್ತಾರಾ ತಮಿಳರು?

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಯೊಗಿ ಆದಿತ್ಯಾನಾಥ್‌ ಹೇಳುವುದನ್ನು ಪಾಲಿಸುತ್ತಿರುವುದು ಅಥವಾ ಅವರು ಹೇಳಿದಂತೆ ಕೇಳುವುದು ಇದೇ ಮೊದಲೇನೂ ಅಲ್ಲ. 2020ರ ಆರಂಭದಲ್ಲಿ ದೇಶಾದ್ಯಂತ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದ ಸಂದರ್ಭದಲ್ಲಿ ಸಾರ್ವಜನಕ ಆಸ್ತಿ-ಪಾಸ್ತಿಗೆ ಹಾನಿಯಾದರೆ ಅದರ ನಷ್ಟವನ್ನು ಪ್ರತಿಭಟನಾಕಾರರಿಂದಲೇ ಭರಸುತ್ತೇವೆ. ಅದಕ್ಕಾಗಿ ಪ್ರತಿಭಟನಾಕಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಯುಪಿ ಸರ್ಕಾರ ಹೇಳಿತ್ತು. ಈ ನಿಯಮದ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ತಮ್ಮ ರಾಜ್ಯದಲ್ಲೂ ಜಾರಿಗೆ ತರುವ ಬಗ್ಗೆ ಗಮನಹರಿಸಲು ಗುಜರಾತ್ ಸಿಎಂ ವಿಜಯ್ ರೂಪಾನಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಜೆಪಿಯಲ್ಲಿ ಯೋಗಿಗೆ ಹೊಸ ವರ್ಚಸ್ಸು: 

ಹಾಗಾದರೆ, ಬಿಜೆಪಿಯಲ್ಲಿ ಏನಾಗುತ್ತಿದೆ? ಯೋಗಿ ಆದಿತ್ಯನಾಥ್, ತಮ್ಮ ಪಕ್ಷದ ಇತರ ಮುಕ್ಯಮಂತ್ರಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಲು ಮತ್ತು ಬಿಜೆಪಿಗೆ ಆದರ್ಶದ ಸಿಎಂ ಅಗಲು ಕಾರಣವೇನು?  ಎಷ್ಟರಮಟ್ಟಿಗೆಂದರೆ, ತಮ್ಮ ನಿವಾಸದಲ್ಲಿ ಇಫ್ತಾರ್‌ ಕೂಟಗಳನ್ನು ಆಯೋಜಿಸುತ್ತಿದ್ದ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಕೂಡ ಆದಿತ್ಯನಾಥ್ ಅವರಂತೆ ಹಿಂದೂತ್ವದ ರುವಾರಿಯಾಗಲು ಪ್ರಯತ್ನಿಸುತ್ತಿದ್ದಾರೆ.

ನಾಲ್ಕು ಬಾರಿ ಸಿಎಂ ಆಗಿರುವ ಚೌಹಾಣ್ ಅವರು ಮಾದರಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು. ಇಂತಹ ವ್ಯಕ್ತಿ, ಮೊದಲ ಬಾರಿಗೆ ಸಿಎಂ ಆಗಿರುವ ಯೊಗಿ ಬಳಿಗೆ ಶಾಸನಗಳನ್ನು ರಚಿಸುವ ಬಗ್ಗೆ ತಿಳಿಯಲು ತಮ್ಮ ನಿಯೋಗ (ರಾಮೇಶ್ವರ್ ಶರ್ಮಾ)ವನ್ನು ಏಕೆ ಕಳುಹಿಸಬೇಕು?

ಇದನ್ನೂ ಓದಿ: 2024ರ ಚುನಾವಣೆಗೆ ಬಿಜೆಪಿ ಸಿದ್ದತೆ; ವಿಭಾಗಗಳ ಸಂಖ್ಯೆ 18ರಿಂದ 28ಕ್ಕೆ ಏರಿಕೆ!

ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಆದಿತ್ಯನಾಥ್ ಮಾಡಿದ ಕಮಾಲ್‌ (ಅದ್ಭುತಗಳು) ಬಗ್ಗೆ ಮಾತನಾಡುವುದನ್ನು ಎಲ್ಲೂ ಬಿಡುವುದಿಲ್ಲ. ಎಲ್ಲೆಲ್ಲಿಯೂ ಎಲ್ಲಾ ವಿಚಾರಗಳ ಬಗ್ಗೆಯೂ ಅವರು ಯೋಗಿಯ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.

1980ರ ದಶಕದ ಒನಿಡಾ ಟಿವಿ ಟ್ಯಾಗ್‌ಲೈನ್ ‘ನೆರೆಹೊರೆಯವರ ಅಸೂಯೆ, ಮಾಲೀಕರ ಹೆಮ್ಮೆ’ಎಂಬಂತೆ ಇದೂ ಕೂಡ. ಆದರೆ ಇಲ್ಲಿ ಅಸೂಯೆ ಪಟ್ಟಿಲ್ಲ, ಬದಲಾಗಿ ಬಿಜೆಪಿ ಸಿಎಂಗಳು ಆದಿತ್ಯನಾಥ್ ಅವರನ್ನು ಅನುಕರಿಸುವಂತೆ ಪ್ರೇರೇಪಿಸುತ್ತದೆ. ಯುಪಿ ಸಿಎಂ ಪ್ರಧಾನ ಮಂತ್ರಿಯಿಂದ ಪಡೆಯುತ್ತಿರುವ ಸಹಬ್ಬಾಸ್‌ ಗಿರಿಯನ್ನು ಉಳಿದ ಸಿಎಂಗಳು ನಿರ್ಲಕ್ಷಿಸುವಂತಿಲ್ಲ. ಅವರೂ ಅದನ್ನೂ ಫಾಲೋ ಮಾಡಲು ಮುಂದಾಗಿದ್ದಾರೆ.

ಆದರೆ ದೊಡ್ಡ ಪ್ರಶ್ನೆಯೆಂದರೆ: ಯೋಗಿ ಆದಿತ್ಯನಾಥ್ ಅವರು ಮೋದಿಯವರ ಒಪ್ಪಿಗೆ ತೆಗೆದುಕೊಳ್ಳದೆ ಇದೆಲ್ಲವನ್ನೂ ಮಾಡಿದ್ದಾರೆಯೇ? ಅದು ಸಾಧ್ಯವೇ? ಇತರ ಬಿಜೆಪಿ ಸಿಎಂಗಳು ಯೋಗಿಗೆ ಪ್ರಧಾನಮಂತ್ರಿಯ ಬೆಂಬಲವಿದೆ ಎಂಬುದನ್ನು ಅರಿತುಕೊಂಡರು. ಹಾಗಾಗಿ ಅವರನ್ನು ಅನುಕರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕಾರ್ಯನಿರತವಾಗಿದೆ ಮೋದಿ ಸರ್ಕಾರ; 06 ವರ್ಷದಲ್ಲಿ ಬಿಜೆಪಿ ಸಾಧನೆಗಳೇನು ಗೊತ್ತೇ?

ಇದು ಮೊದಲ ಬಾರಿ ಅಲ್ಲ, ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಅನ್ಯಗಳ ರಾಜ್ಯಗಳಿಂದ ಬರುವ ಮತ್ತು ಹೊರ ಹೋಗುವ ಸಂಚಾರವನ್ನು ನಿಷೇಧಿಸಿತ್ತು. ಇದರ ನಡುವೆಯೂ, ಆದಿತ್ಯನಾಥ್ ಸರ್ಕಾರ ಇತರ ರಾಜ್ಯಗಳಿಂದ ವಲಸೆ ಕಾರ್ಮಿಕರನ್ನು ಮರಳಿ ಕರೆತರಲು ನೂರಾರು ಬಸ್ಸುಗಳನ್ನು ಕಳುಹಿಸಲು ನಿರ್ಧರಿಸಿತು. ವಾಸ್ತವವಾಗಿ, ಕೇಂದ್ರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಯುಪಿ ಅದನ್ನು ಮಾಡಲು ಸಾಧ್ಯವಾದಾಗ, ಬಿಹಾರ ಸಿಎಂಗೆ ಇದು ಸಾಧ್ಯವಾಗಲಿಲ್ಲವೇಕೆ? ಕೋಟಾದಿಂದ ಬಿಹಾರ ವಿದ್ಯಾರ್ಥಿಗಳನ್ನು ಕರೆತರಲು ಬಿಹಾರ ಸರ್ಕಾರ ಅನುಮತಿ ನಿರಾಕರಿಸಲಾಯಿತು. ಇದರಿಂದಾಗಿ ಚುನಾವಣೆಯ ವಸ್ತಿಲಿನಲ್ಲಿದ್ದ ಬಿಹಾರ ಸಿಎಂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಮ್ಮ ರಾಜಕೀಯ ಬಂಡವಾಳವನ್ನು ಕಳೆದುಕೊಂಡರು. ಮಾರ್ಗಸೂಚಿಗಳನ್ನು ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ. ಆದರೆ, ಬೆಕ್ಕಿಗೆ ಯಾರು ಗಂಟೆ ಕಟ್ಟುತ್ತಾರೆ? ಯುಪಿ ಸಿಎಂ ಆದಿತ್ಯನಾಥ್ ರಾಜಕೀಯವಾಗಿಯೂ, ಪ್ರಭಾವಿತವಾಗಿಯೂ ತನ್ನದೇ ಆದ ಪ್ರಭಾವನ್ನು ಹಿಡಿದಿಟ್ಟುಕೊಳ್ಳಬಲ್ಲರು.

ಮೋದಿ ನಂ .2

ಎಡ ಮತ್ತು ಉದಾರವಾದಿಗಳು ‘ಪೊಲೀಸ್ ರಾಜ್’ ಎಂದು ಕರೆಯಲ್ಪಡುವ ಉತ್ತರ ಪ್ರದೇಶದಲ್ಲಿ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲದೆ, ಅದು ಸಂಪೂರ್ಣ ಕೋಮುವಾದಿ ರಾಜಕಾರಣವನ್ನು ಆವರಿಸಿದೆ. ಆದರೆ, ಬಿಜೆಪಿಯಲ್ಲಿ ಪ್ರಧಾನಿ ಮೋದಿಯ ನಂತರದಲ್ಲಿ ಯೋಗಿ ಆದಿತ್ಯನಾಥ್ ಸ್ಥಾನ ಪಡೆದಿದ್ದಾರೆ. ಮೋದಿಯ ನಂತರ ಮಹಾರಾಷ್ಟ್ರ, ಹೈದರಾಬಾದ್, ಪಶ್ಚಿಮ ಬಂಗಾಳ, ಕೇರಳ, ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲೂ ಚುನಾವಣೆಯ ಸಮಯದಲ್ಲಿ ಯೋಗಿಗೆ ಹೆಚ್ಚಿನ ಬೇಡಿಕೆಯಿದೆ.

ಪಕ್ಷವನ್ನು ನಿಯಂತ್ರಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೋದಿಯ ನಂತರ ಮತ್ತೊಂದು ಪ್ರಬಲ ಹಿಂದುತ್ವವಾದಿಯನ್ನು ಕಂಡುಹಿಡಿದು ಬೆಳೆಸುತ್ತಿದೆ.  ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಭೂತಪೂರ್ವ ಪ್ರಾಬಲ್ಯ ತಂದುಕೊಟ್ಟ ಹೆಗ್ಗಳಿಕೆಗೆ ಪ್ರಧಾನಿ ಪಾತ್ರರಾಗಿದ್ದಾರೆ. ಆದರೆ ಸಿಎಂ ಆದ ನಾಲ್ಕು ವರ್ಷಗಳಲ್ಲಿ ಆದಿತ್ಯನಾಥ್ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡು ನಾಯಕರಾಗಿದ್ದಾರೆ.  ಯೋಗಿಯನ್ನು ಮೋದಿ ನಂ. 2 ಎಂದು ಬಿಂಬಿಸಲಾಗುತ್ತಿದೆ. ಯೋಗಿ ಹಿಂದೂ ಹೃದಯ ಸಮ್ರಾಟ್‌ ಎಂದು ಚಿತ್ರಸಲು ಆರ್‌ಎಸ್‌ಎಸ್‌ ಶ್ರಮಿಸುತ್ತಿದೆ

ಹಾಗಾಗಿಯೇ ಯೋಗಿಗೆ ಹೆಚ್ಚಿನ ಮಾನ್ಯತೆಗಳು ದೊರೆಯುತ್ತಿವೆ. ಯೋಗಿಯನ್ನು ಉಳಿದ ಬಿಜೆಪಿ ಸಿಎಂಗಳು ಫಾಲೋ ಮಾಡಲು ಹಪಾಹಪಿಸುತ್ತಿದ್ದಾರೆ.

ಮೂಲ: ದಿ ಪ್ರಿಂಟ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಒಂದೂ ಸ್ಥಾನ ಗೆಲ್ಲದ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹಪಾಹಪಿಸುತ್ತಿದೆ ಬಿಜೆಪಿ !

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights