ತಮಿಳುನಾಡು ಚುನಾವಣೆ: ಕಮಲ್ ಹಾಸನ್ – ಓವೈಸಿ ಮೈತ್ರಿ ಸಾಧ್ಯತೆ!
ಹೈದರಾಬಾದ್‌ಗೆ ಸೀಮಿತವಾಗಿದ್ದ ಅಸಾದುದ್ದೀನ್ ಒವೈಸಿ ನೇತೃತ್ವದ AIMAM ಪಕ್ಷ ಈಗ ಆಂಧ್ರಪ್ರದೇಶವನ್ನು ದಾಟಿ ತನ್ನಪ್ರಭಾವವನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಬಿಹಾರದಲ್ಲಿ ಸ್ಪರ್ಧಿಸಿ ನಿರೀಕ್ಷಿತ ಸಾಧನೆ ಮಾಡಿರುವ ಓವೈಸಿ ಅವರ ಪಕ್ಷ ಪ. ಬಂಗಾಳ ಮತ್ತು ತಮಿಳುನಾಡಿನಲ್ಲಿಯೂ ಸ್ಪರ್ಧಿಸಲು ನಿರ್ಧರಿಸಿದೆ.
ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮಯ್ಯಮ್ ಪಕ್ಷದೊಂದಿಗೆ AIMAM ಪಕ್ಷ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳ ಪೈಕಿ ಎಐಎಂಐಎಂ ಪಕ್ಷ ಕನಿಷ್ಠ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ ಎಂದು ಹೇಳಲಾಗಿದೆ.
“ತಮಿಳುನಾಡು ಚುನಾವಣೆಗೆ ಸಂಬಂಧಿಸಿದಂತೆ ಒವೈಸಿ ಅವರು ಇಂದು ತಮ್ಮ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ್ದು, ಜನವರಿಯಲ್ಲಿ ತಿರುಚ್ಚಿ ಮತ್ತು ಚೆನ್ನೈನಲ್ಲಿ ಪಕ್ಷದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕಮಲ ಹಾಸನ್ ಅವರ ಮಕ್ಕಳ್ ನೀದಿ ಮಯ್ಯಮ್ ಪಕ್ಷ ಕೂಡ ಪೂರ್ಣಪ್ರಮಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸರ್ಧಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಮಲ್ ಹಾಸನ್ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವೋಟರ್ ಐಡಿಯೇ ನಮ್ಮ ಅಸ್ತ್ರ; ತಮಿಳುನಾಡು ಜನರಿಗೆ ಕಮಲ್ ಹಾಸನ್ ಕರೆ
2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಎಂಎನ್ಎಂ ಸ್ಪರ್ಧೆ ಮಾಡಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಕಮಲ್ ಪಾಳಯ ಠೇವಣಿ ಕಳೆದುಕೊಂಡಿತ್ತು. ಈ ಬಾರಿಯ ವಿಧಾನಸಭೆ ಚುನಾವಣಗೆ ಸಕ್ಕತ್ ತಯಾರಿ ನಡೆಸುತ್ತಿದ್ದಾರೆ.
ವೇಲೂರು, ರಾಣಿಪೇಟ್, ತಿರುಪತ್ತೂರು, ಕೃಷ್ಣಗಿರಿ, ರಾಮನಾಥಪುರಂ, ಪುದುಕೋಟ್ಟೈ, ತಿರುಚ್ಚಿ, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಾಗಿದ್ದು, ತಮಿಳುನಾಡಿನಲ್ಲಿ ಶೇ.5ರಷ್ಟು ಮುಸ್ಲೀಂ ಸಮುದಾಯದ ಜನರಿದ್ದಾರೆ. ತಮಿಳುನಾಡಿನಲ್ಲಿ ಮುಸ್ಲಿಮ್ ಲೀಗ್, ಇಂಡಿಯನ್ ನ್ಯಾಷನಲ್ ಲೀಗ್, ಮನಿದನೇಯ ಮಕ್ಕಳ್ ಕಚ್ಚಿ, ತಮಿಳುನಾಡು ತೌಹೀದ್ ಜಮಾತ್ ಮತ್ತಿತರ ಮುಸ್ಲಿಂ ಪಕ್ಷಗಳಿದ್ದು, ಅವರೆಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಓವೈಸಿ ಸಿದ್ದರಾಗಿದ್ದಾರೆ ಎನ್ನಲಾಗಿದೆ.
ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಭಯೋತ್ಪಾದಕ ಎಂದು ಘೋಷಿಸಬೇಕೆಂದು ಎಂದು ಕಮಲ್ ಹಾಸನ್ ಕಳೆದ ವರ್ಷ ಒತ್ತಾಯಿಸಿದ್ದರು. ಇದಕ್ಕೆ ಒವೈಸಿ ಕೂಡ ಬೆಂಬಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಚುನಾವಣೆಗೆ ಇಬ್ಬರೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ದಡ್ಡವಾಗಿದೆ.
ಇದನ್ನೂ ಓದಿ: ದ್ರಾವಿಡ ನಾಡಲ್ಲಿ ಬಿಜೆಪಿ ಆಟ: ಕೇಸರಿ ಪಡೆಗೆ ಮರುಳಾಗ್ತಾರಾ ತಮಿಳರು?