ಬಂಗಾಳ: ಬಿಜೆಪಿಯ ಹೊಸ ಕಾರ್ಯಕರ್ತರು ಮತ್ತು ಹಳೇ ಕಾರ್ಯಕರ್ತರ ನಡುವೆ ಮಾರಾಮಾರಿ-ಹಿಂಸಾಚಾರ!

ಪಶ್ಚಿಮ ಬಂಗಾಳದ ದುರ್ಗಾಪುರ ರ್ಯಾಲಿಯಲ್ಲಿ ಬಿಜೆಪಿಯ ಹೊಸ ಕಾರ್ಯಕರ್ತರು ಮತ್ತು ಹಳೇ ಕಾರ್ಯಕರ್ತರ ನಡುವೆ ಘಷರ್ಣೆ ನಡೆದಿದ್ದು, ಕೊನೆಗೆ ಹಿಂಸಾಚಾರಕ್ಕೆ ತಿರುಗಿದೆ.

ದುರ್ಗಾಪುರದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪಕ್ಷದ ರಾಜ್ಯದ್ಯಕ್ಷ ದಿಲೀಪ್‌ ಘೋಷ್‌ ಮತ್ತು ಪಕ್ಷದ ನಾಯಕ ಅರ್ಜುನ್‌ ಸಿಂಗ್‌ ಅವರ ಜೊತೆಗೆ ವೇದಿಕೆ ಮೇಲೆ ಯಾರು ಕುಳಿತುಕೊಳ್ಳಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಜೆಪಿ ಸೇರಿದ ಕಾರ್ಯಕರ್ತರು ಮತ್ತು ಮೊದಲಿನಿಂದಲೂ ಬಿಜೆಪಿಯಲ್ಲಿಯೇ ಇರುವ ಹಳೆಯ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು,  ಹಿಂಸಾಚಾರಕ್ಕೆ ಕಾರಣವಾಗಿದೆ.

ಘೋಷ್ ಮತ್ತು ಸಿಂಗ್ ಅವರು ಕಾರ್ಯಕ್ರಮಕ್ಕೆ ಬರುವ ಮುಂಚೆಯೇ ಹಿಂಸಾಚಾರ ಭುಗಿಲೆದ್ದಿತ್ತು.  ಮೂಲ ಬಿಜೆಪಿ ಕಾರ್ಯಕರ್ತರು ಮತ್ತು ಇತರ ಪಕ್ಷಗಳಿಂದ ಬಿಜೆಪಿಗೆ ಸೇರಿದವರ ನಡುವೆ ಕಾರ್ಯಕ್ರಮ ಸಂಘಟಿಸುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆದಿದ್ದು, ಕೊನೆಗೆ ಅದು ಪರಸ್ಪರ ಹೊಡೆದಾಟದ ಹಂತ ತಲುಪಿದೆ ಎಂದು ಬಂಗಾಳಿ ಸುದ್ದಿ ಚಾನೆಲ್ ಎಬಿಪಿ ಆನಂದ ಸುದ್ದಿ ಮಾಡಿದೆ.

ಪರಸ್ಪರ ವಾಗ್ವಾದಕ್ಕಿಳಿದಿದ್ದ ಕಾರ್ಯಕರ್ತರು ಕುರ್ಚಿಗಳು ಮತ್ತು ಕೋಲುಗಳಿಂದ  ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಸ್ಥಳೀಯ ನಾಯಕರು ಎಷ್ಟೇ ಮನವಿ ಮಾಡಿದರು ಕಾರ್ಯಕರ್ತರು ಕಿವಿಗೊಡದೆ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

“ನಾವು ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದೇವೆ. ಬಿಜೆಪಿಯಲ್ಲಿ ಯಾವುದೇ ಹೊಸ ಸದಸ್ಯರನ್ನು ಕರೆತರುವ ಅಥವಾ ವೇದಿಕೆಯಲ್ಲಿ ಪರಿಚಯಿಸುವ ಮೊದಲು ಸ್ಥಳೀಯ ವಾರ್ಡ್ ಅಧ್ಯಕ್ಷರಿಗೆ ತಿಳಿಸಬೇಕಾಗುತ್ತದೆ ಎಂಬ ನಿಯಮವಿತ್ತು. ಈ ಬಾರಿ ಅಂತಹ ಯಾವುದೇ ವಿಧಾನವನ್ನು ಅನುಸರಿಸಲಾಗಿಲ್ಲ” ಎಂದು ಪಕ್ಷದ ಹಳೆಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ: ‘ಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿಗೆ ಚುನಾವಣಾ ಆಯೋಗ ಸಿದ್ದವಾಗಿದೆ: ಚುನಾವಣಾ ಆಯುಕ್ತ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights