ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಯೋಗಿ ಸರ್ಕಾರದ ಪಾತ್ರ  ಬಹಿರಂಗವಾಗಿದೆ: ಅಖಿಲೇಶ್ ಯಾದವ್

ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಪಾತ್ರ  ಬಹಿರಂಗವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

“ಹತ್ರಾಸ್ ಘಟನೆಯಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿದ ಸುಳ್ಳುಗಳನ್ನು ಬಹಿರಂಗಪಡಿಸಿದ ರೀತಿಯು, ಉತ್ತರ ಪ್ರದೇಶದಲ್ಲಿ ಸುಳ್ಳು ಪ್ರಕರಣಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆಯ ಆರಂಭವಾಗಿದೆ” ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಹಳ್ಳಿಯೊಂದರ 19 ವರ್ಷದ ದಲಿತ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಆರೋಪಪಟ್ಟಿ (ಜಾರ್ಜ್‌ ಶೀಟ್‌)ಅನ್ನು ಶುಕ್ರವಾರ ಸಲ್ಲಿಸಿತ್ತು.

ಚಾರ್ಜ್‌ಶೀಟ್‌ನಲ್ಲಿ, ಸೆಪ್ಟೆಂಬರ್ 19 ರಂದು ಸಂತ್ರಸ್ತೆ ನೀಡಿದ್ದ ಹೇಳಿಕೆಯಲ್ಲಿ ಆಕೆ ಮೂರು ಜನರನ್ನು ಹೆಸರಿಸಿದ್ದರೂ, ಒಬ್ಬರ ಹೆಸರನ್ನು ಮಾತ್ರ ಪೊಲೀಸರು ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದರೂ, ಆಕೆಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ವಿಧಿವಿಜ್ಙಾನ ಪರೀಕ್ಷೆಯಲ್ಲಿಯೂ ಅತ್ಯಾಚಾರದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಗಳು ಬರೆದಿದ್ದಾರೆ ಎಂದು ಸಿಬಿಐ ಹೇಳಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅಖಿಲೇಶ್‌ ಯಾದವ್, ಹತ್ರಾಸ್‌ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ಸಂಚು ಬಹಿರಂಗವಾಗಿದೆ. ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ವಿರುದ್ಧದ “ಸುಳ್ಳು ಪ್ರಕರಣ”ಗಳಲ್ಲಿಯೂ ಸರ್ಕಾರದ ಸಂಚು ಬಹಿರಂಗವಾಗಿಲಿದೆ. ನಾವು ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವವನ್ನು ನಂಬಿದ್ದೇವೆ. ಅಜಮ್ ಖಾನ್ ವಿರುದ್ಧ ಸರ್ಕಾರ ದಾಖಲಿಸಿರುವ ಸುಳ್ಳು ಪ್ರಕರಣಗಳು ಕಳಚಿಬೀಳಲಿವೆ. ಅಜಮ್‌ ಖಾನ್‌ ಅವರಿಗೆ ಶೀಘ್ರದಲ್ಲೇ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಖಾನ್‌, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಮಗ ಅಬ್ದುಲ್ಲಾ ಅವರು ನಕಲಿ ಜನನ ಪ್ರಮಾಣಪತ್ರ ನೀಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.


ಇದನ್ನೂ ಓದಿ: ಹತ್ರಾಸ್‌ ಪ್ರಕರಣ: ಸಾಮೂಹಿಕ ಅತ್ಯಾಚಾರ ಎಸಗಿ; ಕೊಲೆಗೈದಿದ್ದಾರೆ; ಸಿಬಿಐ ಜಾರ್ಜ್‌ಶೀಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights