ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ!

ಭಾರತದಲ್ಲಿನ ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ ಎಂದು ಕಳೆದ 27 ದಿನಗಳಿಂದ ದೆಹಲಿಯ ಗಡಿಗಳಲ್ಲಿನ ಹೋರಾಟನಿರತ ರೈತ ಮುಖಂಡರು ಬ್ರಿಟನ್ ಸಂಸದರಿಗೆ ಪತ್ರ ಬರೆಯುವದಾಗಿ ತಿಳಿಸಿದ್ದಾರೆ.

ಜನವರಿ 26ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್‌ ಬರಲಿದ್ದಾರೆ ಎಂದು ವರದಿಯಾಗಿದೆ. ಭಾರತ ಸರ್ಕಾರ ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವವರೆಗೂ ಇಂಗ್ಲೆಂಡ್‌ನ ಪ್ರಧಾನಿ ಭಾರತಕ್ಕೆ ಬರದಂತೆ ತಡೆಯಬೇಕೆಂದು ಅಲ್ಲಿನ ಸಂಸದರಿಗೆ ಪತ್ರ ಬರೆದು ಕೋರುತ್ತೇವೆ ಎಂದು ಪಂಜಾಬ್‌ನ ರೈತ ಮುಖಂಡ ಕುಲವಂತ್‌ ಸಿಂಗ್ ಸಂಧು ತಿಳಿಸಿದ್ದಾರೆ.

ಇಂದು ಸಿಂಘೂ ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಇಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ರವರೊಂದಿಗೆ ರೈತ ಮುಖಂಡರ ಸಭೆ ನಡೆಯಲಿದೆ. ಕೆಂದ್ರ ಸರ್ಕಾರದ ಪ್ರಸ್ತಾಪಗಳ ಕುರಿತು ಅಲ್ಲಿ ಚರ್ಚೆ ನಡೆಯಲಿದೆ. 3 ಕೃಷಿ ಕಾನೂನುಗಳು ಬೇಷರತ್ ಆಗಿ ಹಿಂಪಡೆಯಬೇಕೆಂಬುದು ನಮ್ಮ ಆಗ್ರಹ. ಸಭೆಯ ನಂತರ ಮುಂದಿನ ಹೋರಾಟದ ರೂಪುರೇಷೆಗಳನ್ನು ತಿಳಿಸುತ್ತೇವೆ” ಎಂದಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ ಮತ್ತು ಕಿಸಾನ್ ಸಂಘರ್ಷ ಸಮಿತಿಯ ಸದಸ್ಯರೊಂದಿಗೆ ಕೃಷಿ ಭವನದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಭೆ ನಡೆಸುತ್ತಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಇನ್ನು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತ ಮುಖಂಡರು ಹೋರಾಟವನ್ನು ತೀವ್ರಗೊಳಿಸಲು ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಡೆಸುವ ವೇಳೆ ದೇಶಾದ್ಯಂತ ಮನೆಯಿಂದ ಹೊರಬಂದು ತಟ್ಟೆ ಬಾರಿಸುವಂತೆ ಕರೆ ನೀಡಿದ್ದಾರೆ.

“ರೈತ ಹೋರಾಟ ಬೆಂಬಲಿಸಿ ಪ್ರತಿದಿನ 11 ಜನರ ತಂಡ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿ. ನಂತರ ಅದನ್ನು ಮತ್ತೆ 11 ಜನರ ಮುಂದುವರೆಸುವುದು. ಈ ರೀತಿ ರಿಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳೋಣ” ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಕರೆ ನಿಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights