‘ಯಾರಿಂದಲೂ ಜೆಡಿಎಸ್ ಅಲುಗಾಡಿಸಲು ಸಾಧ್ಯವಿಲ್ಲ’- ಹೆಚ್.ಡಿ ದೇವೇಗೌಡ ವಾಗ್ದಾಳಿ

ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಕೈ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. “ ರಾಜಕೀಯ ಅಂದಮೇಲೆ ಸೋಲು ಗೆಲವು ಇದ್ದದ್ದೇ. ಹಾಗಂತ ಯಾವ ಪಕ್ಷವನ್ನೂ ಲಘುವಾಗಿ ನೋಡಬಾರದು. ತೆನೆ ಹೊತ್ತ ಮಹಿಳೆಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ದೇವೇಗೌಡ ಕುಮಾರಸ್ವಾಮಿ ಹೊರತಾಗಿ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಪಕ್ಷ ಯಾರೋಬ್ಬರನ್ನೂ ನೆಚ್ಚಿಕೊಂಡಿಲ್ಲ” ಎಂದು ಕಿಡಿಕಾರಿದ್ದಾರೆ.

ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅನ್ನೋದು ಮುಖ್ಯಸ್ಥರಿಗೆ ಗೊತ್ತಿರುತ್ತದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಮಾತಾಡೋದನ್ನು ನೋಡಿದ್ದೇನೆ. ಇದಕ್ಕೆ ಕಾರಣ ಕುಮಾರಸ್ವಾಮಿನಾ, ರೇವಣ್ಣನಾ ಯಾರು ಕಾರಣ? ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ.

1989ರಲ್ಲಿ ಎಲ್ಲರೂ ಸೇರಿ ನನ್ನನ್ನು ಹೊರಗೆ ಹಾಕಿದ್ದರು, ಏಕಾಂಕಿಯಾಗಿದ್ದೆ. ಯಾರ ಹೆಸರನ್ನೂ ಹೇಳುವುದಿಲ್ಲ. ಆಮೇಲೆ ಮತ್ತೆ ಎಲ್ಲರೂ ವಾಪಾಸ್ ನನ್ನ ಹತ್ತಿರವೇ ಬಂದರು. ಪಕ್ಷ ಕಟ್ಟಲು ಯಾರಾದರೂ ನಂಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ? ಈಗ ಕೆಲವರು ಬದುಕಿದ್ದಾರೆ ಅವರಿಗೆ ಹೇಳುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್-ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಪ್ರಾದೇಶಿಕ ಪಕ್ಷವೊಂದು ತನ್ನದೇ ಶಕ್ತಿಯಿಂದ ಆಡಳಿತ ನಡೆಸುವ ಶಕ್ತಿ ಬಂದ ಮೇಲೂ ಯಾಕೆ ಇದು ಈ ತಪ್ಪು? ಇದನ್ನು ನಮ್ಮ ನಾಯಕರೇ ಹೊತ್ತುಕೊಳ್ಳಬೇಕು. ಜನರ ಮೇಲೆ ಆಪಾದನೆ ಮಾಡೋಕೆ ಹೋಗಲ್ಲ. ಆದರೆ ಕುಮಾರಸ್ವಾಮಿ ಅವರ ಸರ್ಕಾರ ಬಿದ್ದು ಹೋಗುತ್ತದೆ ಅಂತ ಸುದ್ದಿ ಕೊಟ್ಟವರು ಯಾರು? ತೆನೆ ಹೊತ್ತ ಮಹಿಳೆ ಬಗ್ಗೆ ಈ ರೀತಿಯೆಲ್ಲಾ ಮಾತಾಡಬಾರದು. ಈ ಪಕ್ಷವನ್ನು ಯಾರೂ ಅಲುಗಾಡಿಸುವುದೂ ಸಾಧ್ಯವಿಲ್ಲ. ಸೋಲು ಗೆಲುವು ಮಾಮೂಲಿ. ನಾನು ಕಾಂಗ್ರೆಸ್ ಬಗ್ಗೆ ಮಾತಾಡಿದರೆ ತುಂಬಾ ಮಾತಾಡುತ್ತೇನೆ. ಕಾಂಗ್ರೆಸ್ ಬಗ್ಗೆ ನಂಗೆ ಗೊತ್ತಿದೆ ಎಂದು ದೇವೇಗೌಡರು ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಮಾತು ಬಂದಿದ್ದು ಎಲ್ಲಿಂದ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದರು.

ಸಭಾಪತಿ ಸ್ಥಾನ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಕೊಡಬೇಕು ಅಂತ ಆಗಿನ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಹೇಳಿದ್ದೆ. ಅದು ಮಾತನಾಡೋಣ ಬಿಡಿ ಅದು ದೊಡ್ಡ ವಿಚಾರವಲ್ಲ ಎಂದಿದ್ದರು. ಆದರೆ ಆಮೇಲೆ ಏನಾಯ್ತು? ನಮಗೆ ಸಭಾಪತಿ ಸ್ಥಾನ ಕೊಡಲಿಲ್ಲ. ಸಭಾಪತಿ ಸ್ಥಾನವನ್ನು ಹೊರಟ್ಟಿ ಅವರಿಗೆ ಕೊಡಬೇಕು ಎಂದುಕೊಂಡಿದ್ದೆ. ಸತತವಾಗಿ 7 ಬಾರಿ ವಿಧಾನಪರಿಷತ್‌ಗೆ ಬಸವರಾಜ್ ಹೊರಟ್ಟಿ ಆಯ್ಕೆಯಾಗಿದ್ದಾರೆ. ಆದರೆ ಸಭಾಪತಿ ಸ್ಥಾನ ಕೊಡಲು ಆಗಲಿಲ್ಲ. ವಿಧಾನ ಪರಿಷತ್ ಸಭಾಪತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಿಎಂ ಒಬ್ಬರು, ನನ್ನ ಜಾತ್ಯತೀತ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಈಗ ಸಭಾಪತಿ ಅವರು ರಾಜೀನಾಮೆ ಕೊಡಲು ಸಿದ್ಧವಾಗಿದ್ದಾರೆ. ಆಗಲೇ ಅವರು ಕಾರು, ಬಂಗಲೆ ವಾಪಸ್ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಡಬೇಡಿ ಅಂತ ಅವರಿಗೆ ಹೇಳಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಭೂಸುಧಾರಣಾ ವಿಧೇಯಕ್ಕೆ ಬೆಂಬಲ ನಾನು ದಾವೋಸ್ ಗೆ ಹೋಗಿ ಬಂದ ಮೇಲೆ ಕೈಗಾರಿಕೆಗೆ ಭೂಮಿ ಕೊಡುವ ವಿಚಾರ ಚರ್ಚೆಗೆ ಬಂತು. ನಮ್ಮ ರಾಜ್ಯಕ್ಕೆ ಬನ್ನಿ ಅಂತ ನಾನು ಕೈಗಾರಿಕೋದ್ಯಮಿಗಳಿಗೆ ಹೇಳಿದ್ದೆ. ಆದರೆ ಈಗಿರುವ ಕಾನೂನಿನ ಪ್ರಕಾರ ಒಂದಿಂಚು ಭೂಮಿಯನ್ನು ಕೈಗಾರಿಕೆಗಳಿಗೆ ಕೊಡಲು ಸಾಧ್ಯವಿಲ್ಲ ಅಂತ ಅಧಿಕಾರಿಗಳು ಅಭಿಪ್ರಾಯ ಕೊಟ್ಟಿದ್ದರು. ಕಾನೂನಿಗೆ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ನಾವು ತಿದ್ದುಪಡಿ ಕಾಯಿದೆ ಬೆಂಬಲಿಸಿದ್ದೇವೆಂದು ಕರ್ನಾಟಕ ಭೂಸುಧಾರಣಾ ಕಾಯಿದೆಯನ್ನು ಬೆಂಬಲಿಸಿದ್ದನ್ನು ದೇವೇಗೌಡರು ಸಮರ್ಥನೆ ಮಾಡಿಕೊಂಡರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights