ಚುನಾವಣಾ ಖರ್ಚು ಮಿತಿ ಹೆಚ್ಚಿಸಲು ಚುನಾವಣಾ ಆಯೋಗ ಚಿಂತನೆ; ಹಣದ ಹೊಳೆಗೆ ಬಿಹಾರ ಸಿದ್ಧ!
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಚುನಾವಣೆ ನಡೆಸುತ್ತಿರುವ ಚುನಾವಣಾ ಆಯೋಗ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ಮಿತಿಯನ್ನು ಶೇ.10 ರಿಂದ 15 ರಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಮತದಾನ ವಾಚ್‌ಡಾಗ್‌ನ ಮೂಲಗಳ ಪ್ರಕಾರ, ಬಿಹಾರ ವಿಧಾನಸಭಾ ಚುನಾವಣೆ, ವಿವಿಧ ರಾಜ್ಯಗಳ 64 ವಿಧಾನಸಭಾ ಸ್ಥಾನಗಳ ಮತ್ತು ಒಂದು ಲೋಕಸಭಾ ಸ್ಥಾನಕ್ಕೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಉಪಚುನಾವಣೆಗಳು ಸೇರಿದಂತೆ ಎಲ್ಲಾ ಚುನಾವಣೆಗಳಿಗೆ ಪರಿಷ್ಕೃತ ವೆಚ್ಚದ ಮಿತಿ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಘೋಷಿಸಲಾಗಿರುವ ಚುನಾವಣಾ ಪ್ರಚಾರದ ಸಮಯದಲ್ಲಿನ ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಹೆಚ್ಚಿನ ವೆಚ್ಚವನ್ನು ವ್ಯಯಿಸಬೇಕಾಗುತ್ತದೆ. ಆ ಕಾರಣದಿಂದಾಗಿ ಅವರಿಗೆ ಸಹಾಯ ಮಾಡಲು ವೆಚ್ಚದ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
“ಕೋವಿಡ್ ಕಾರಣದಿಂದಾಗಿ, ಕೆಲವು ಪಕ್ಷಗಳು ಸಾಮಾಜಿಕ-ದೂರವನ್ನು ಅನುಸರಿಸಲು ಹೆಚ್ಚಿನ ರ್ಯಾಲಿಗಳನ್ನು ನಡೆಸಬೇಕಾಗುತ್ತದೆ. ಮನೆ-ಮನೆ ಪ್ರಚಾರದಲ್ಲಿ ಐದು ಜನರಷ್ಟೇ ಭಾಗಿಯಾಗಬೇಕು ಮತ್ತು ಪ್ರಚಾರ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಲಾಗಿರುವುದರಿಂದ ಪ್ರಚಾರಕ್ಕೆ ಹೆಚ್ಚಿನ ಕಾರ್ಯಕರ್ತರನ್ನು ನಿಯೋಜಿಸಬೇಕಾಗುತ್ತದೆ. ಆದ್ದರಿಂದ ಚುನಾವಣಾ ಆಯೋಗವು ಖರ್ಚು ಮಿತಿಯನ್ನು ಶೇ.10-15ರಷ್ಟು ಹೆಚ್ಚಿಸಲು ಯೋಜಿಸಿದೆ” ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ ರಾಜಕೀಯದಲ್ಲಿ ಅಪಸ್ವರ; ಚುನಾವಣೆಗೂ ಮುನ್ನವೇ ಒಡೆಯುತ್ತವಾ ಮೈತ್ರಿಕೂಟ!
ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿಯನ್ನು ಭಾರತೀಯ ಕಾನೂನು ನಿಗದಿಪಡಿಸದಿದ್ದರೂ, ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಯು ಎಷ್ಟು ಖರ್ಚು ಮಾಡಬಹುದು ಎಂಬುದಕ್ಕೆ ಒಂದು ಮಿತಿ ಇದೆ.
ಈಗಿನಂತೆ, ಪ್ರತಿ ಅಭ್ಯರ್ಥಿಯ ವೆಚ್ಚ ಮಿತಿ ಲೋಕಸಭಾ ಚುನಾವಣೆಗೆ 50 -70 ಲಕ್ಷ ಮತ್ತು ವಿಧಾನಸಭಾ ಚುನಾವಣೆಗೆ 20 -28 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿತ್ತು. ಈಗ ಯೋಜಿಸುತ್ತಿರುವಂತೆ 10-15% ಏರಿಕೆಯಾದರೆ, ಲೋಕಸಭಾ ಚುನಾವಣೆಗೆ 55 ರಿಂದ 80.5 ಲಕ್ಷ ಮತ್ತು ವಿಧಾನಸಭಾ ಚುನಾವಣೆಗೆ 22 ರಿಂದ 30.2 ಲಕ್ಷದ ವರೆಗೆ ಖರ್ಚು ಮಾಡುವ ಅವಕಾಶವಿರುತ್ತದೆ.
ಈ ಹೆಚ್ಚಳ ಶಾಶ್ವತವಾಗಿ ಮುಂದುವರೆಯುತ್ತಯೇ?
ಚುನಾವಣಾ ವೆಚ್ಚಕ್ಕಾಗಿ ಹೆಚ್ಚಿಸಲಾಗಿರುವ ಮಿತಿ ಕೊರೊನಾ ರಿಲೀಫ್ ಸಂದರ್ಭಕ್ಕಾಗಿ ಮಾತ್ರ ಯೋಜಿಸಲಾಗಿದೆಯೇ ಅಥವಾ ಮುಂದೆ ನಡೆಯುವ ಎಲ್ಲಾ ಚುನಾವಣೆಗಳಿಗೂ ಅನ್ವಯವಾಗುತ್ತಯೇ ಎಂಬುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಕಳೆದ ತಿಂಗಳು, ಬಿಹಾರ ವಿಧಾನಸಭಾ ಚುನಾವಣೆಗೆ ಪ್ರಚಾರ ವೆಚ್ಚದ ಮಿತಿಯನ್ನು ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿತ್ತು.
ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಖರ್ಚು ಮಿತಿಯನ್ನು ಹೆಚ್ಚಿಸಲು ಚುನಾವಣಾ ಆಯೋಗವು ಪರಿಶೀಲನೆ ನಡೆಸುವುದಾಗಿ ಹೇಳಿದ್ದು, ಉದ್ದೇಶಿತ ಹೆಚ್ಚಳದ ಮಿತಿಯ ಬಗ್ಗೆ ನಿಖರವಾಗಿ ಹೇಳಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: JDUಗೆ ಶರದ್ ಯಾದವ್ ವಾಪಸ್? ಮುಂದುರೆಯುತ್ತಾ JDU-BJP ಮೈತ್ರಿ?

