ಪತ್ರಕರ್ತ ಅಶ್ವತ್ಥ್ ಆತ್ಮಹತ್ಯೆಗೆ ಯತ್ನ? ವೃತ್ತಿ ತೊರೆಯಲು ಸಚಿವ ಸುಧಾಕರ್ ಕಾರಣ ಎಂದು ಆರೋಪ!
ಕನ್ನಡ ಪ್ರಭ ದಿನಪತ್ರಿಕೆಯ ಚಿಕ್ಕಬಳ್ಳಾಪುರ ವರದಿಗಾರರಾಗಿ ಕೆಲಸ ಮಾಡಿ, ಕೊನೆಗೆ ವೃತ್ತಿಯನ್ನೇ ತೊರೆದಿದ್ದ ಪತ್ರಕರ್ತ ಅಶ್ವತ್ಥ್ ನಾರಾಯಣ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಫೇಸ್ಬುಕ್ನಲ್ಲಿ ಸುಧೀರ್ಘ ಪತ್ರ ಬರೆದು, ಕಾಣೆಯಾಗಿದ್ದರು. ಭಾನುವಾರ ಅವರು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆತ್ಮಹತ್ಯೆಗೆ ನಿರ್ಧರಿಸಿದ್ದು ಪತ್ರಕರ್ತರೇ ಆದರೂ ಜೀವ ಬಾಯಿಗೆ ಬಂದಿದ್ದು ಸಂಪಾದಕರಿಗೆ ಮಾತ್ರ. ಅವರು ಬರೆದಿದ್ದ ಪತ್ರ ಮಾಧ್ಯಮಗಳು ಎಸಗುತ್ತಿರುವ ಘೋರಣೆಗಳು, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಕೆಳ ಹಂತದ ಪತ್ರಕರ್ತರ ಪಜೀತಿಗಳನ್ನು ಬಿಚ್ಚಿಟ್ಟಿದೆ.
ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಅಶ್ವತ್ಥ್ ಅವರು ತಮ್ಮ ವೃತ್ತಿಯ್ನನೇ ತೊರೆಯಲು ಹಾಲಿ ಆರೋಗ್ಯ ಸಚಿವ ಸುಧಾಕರ್ ಕಾರಣ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ಸಚಿವ ಸುಧಾಕರ್ ಅವರಿಗೆ ನೀವು ಚಿಕ್ಕಬಳ್ಳಾಪುರದಲ್ಲಿ ಇರುವುದು ಸಮಾಧಾನ ಇಲ್ಲ. ಹಾಗಾಗಿ ಸಂಪಾದಕರಾದ ರವಿ ಹೆಗಡೆ ಅವರು ಮುಂದಿನ ತಿಂಗಳಿಗೆ ನಿಮ್ಮನ್ನು ತೆಗೆಯುವ ಸಾಧ್ಯತೆ ಇದೆ ಎಂದು ಕನ್ನಡಪ್ರಭದ ಸಮನ್ವಯ ಸಂಪಾದಕರು ಹಾಗೂ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಹೇಳಿದ್ದರು. ನಂತರ ಅವರೇ ಕರೆ ಮಾಡಿ ನೀವು ಬೆಂಗಳೂರಿನಲ್ಲಿ ಕೆಲಸ ಮಾಡಿ ಎಂದು ಹೇಳಿದರು. ನಂತರ ಜುಲೈ 31ರಂದು ಕರೆ ಮಾಡಿ ಹೊಸ ವರದಿಗಾರರು ಆಗಸ್ಟ್ 5ರಿಂದ ಬರುವವರಿದ್ದಾರೆ. ಹಾಗಾಗಿ ನೀವು ಆಗಸ್ಟ್ 5ರವರೆಗೂ ಅಲ್ಲಿಯೇ ಕೆಲಸ ಮಾಡಿ, ಅವರು ಬಂದ ನಂತರ ಅವರಿಗೆ ಸುದ್ದಿ ಕಳುಹಿಸುವ ವಿಧಾನ ತಿಳಿಸಿ, ಆಗಸ್ಟ್ 7ರಿಂದ ಬೆಂಗಳೂರಿಗೆ ಬನ್ನಿ ಎಂದರು. ಇದರಿಂದ ನಾನು ಬರುವುದಿಲ್ಲ ಕೆಲಸಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದೆ. ಕೂಡಲೇ ರಾಜಿನಾಮೆಯನ್ನೂ ಸಲ್ಲಿಸಿದೆ. ಅಂದರೆ ನಾನು ಕನ್ನಡಪ್ರಭದಲ್ಲಿ ಕಲಸಕ್ಕೆ ರಾಜಿನಾಮೆ ನೀಡಲು ಈಗಿನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಂಬುದನ್ನು ಸ್ವತಃ ಕನ್ನಡಪ್ರಭ ಸಮನ್ವಯ ಸಂಪಾದಕರಾಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಹೇಳಿದ್ದರಿಂದ ಸುಧಾಕರ್ ಅವರಿಗೆ ನಾನು ಮಾಡಿರುವ ದ್ರೋಹವಾದರೂ ಏನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡೆ. ಆದರೆ ಅದು ನನ್ನ ಅರಿವಿಗೆ ಬರಲಿಲ್ಲ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: BJP ಆಡಳಿತದಲ್ಲಿ ಇದೂವರೆಗೂ 154 ಪತ್ರಕರ್ತರ ಬಂಧನ; 3 ಹತ್ಯೆ
ಆದರೂ, ಅಶ್ವತ್ಥ್ ನಾರಾಯಣ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿರುವ ಮರಣಪತ್ರದಲ್ಲಿನ ಸಂಗತಿಗಳ ಸತ್ಯಾಸತ್ಯತೆ ಇನ್ನಷ್ಟೇ ಹೊರಗೆ ಬರಬೇಕಿದೆ. ಖಿನ್ನತೆಯಲ್ಲಿ ಅಶ್ವತ್ಥ್ ಬರೆದಿರುವ ಪತ್ರದಲ್ಲಿನ ಸತ್ಯ ಎಷ್ಟು ? ಉತ್ಪ್ರೇಕ್ಷೆ ಎಷ್ಟು ? ಕಲ್ಪನೆ ಎಷ್ಟು ? ಅನಗತ್ಯ ಆತಂಕ ಎಷ್ಟು ? ಎನ್ನುವುದೆಲ್ಲಾ ತನಿಖೆಯಿಂದಷ್ಟೇ ಹೊರಗೆ ಬರಬೇಕಿದೆ.
ಅಲ್ಲಿಯವರೆಗೂ ಪತ್ರದಲ್ಲಿದ್ದ ಅಷ್ಟೂ ಸಂಗತಿಯನ್ನು ಯಥಾವತ್ತಾಗಿ ನಂಬಿಕೊಳ್ಳುವುದು ಕಷ್ಟ. ಹಾಗೆಯೇ ಸಾರಾಸಗಟಾಗಿ ನಿರಾಕರಿಸುವುದೂ ಕಷ್ಟ. ಆದರೆ ಸಾಯುವ ಅತಿರೇಕಕ್ಕೆ ಪತ್ರಕರ್ತನೊಬ್ಬ ನಿರ್ಧರಿಸಿದ್ದು ಆಘಾತಕಾರಿ ಸಂಗತಿ. ಅವರ ನಿರ್ಧಾರಕ್ಕೆ ಮಾಧ್ಯಮ ಲೋಕದ ಅನಾಚಾರವೇ ಕಾರಣ ಎಂದರೂ ತಪ್ಪಾಗಲಾರದು.
ಪತ್ರಿಕೋದ್ಯಮದ ಅವ್ಯವಸ್ಥೆ ಬಗ್ಗೆ ಅಶ್ವತ್ಥ ನಾರಾಯಣ ಅವರಿಗೆ ತುಂಬಾ ಬೇಸರವಿತ್ತು. ಅವರು ಆರೇಳು ತಿಂಗಳ ಹಿಂದೆಯೇ ಕನ್ನಡಪ್ರಭ ಪತ್ರಿಕೆಗೆ ರಾಜೀನಾಮೆ ನೀಡಿದ್ದರು. ಪತ್ರಿಕೋದ್ಯಮ ಕ್ಷೇತ್ರದಿಂದ ದೂರ ಉಳಿದು ತೋಟಗಾರಿಕೆ, ಕೃಷಿ ಚಟುವಟಿಕೆಯಲ್ಲಿ ತೊಡಗುವುದಾಗಿ ಪತ್ರಕರ್ತ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು.
ಪತ್ರಿಕೆ ತೊರೆಯಲು ಸಚಿವ ಸುಧಾಕರ್ ಅವರೇ ಕಾರಣ. ಪತ್ರಿಕೆ ಸಂಪಾದಕ ರವಿ ಹೆಗಡೆ ಮೇಲೆ ಪ್ರಭಾವ ಬೀರಿ ನನ್ನ ಲೇಖನಗಳನ್ನು ತಡೆ ಹಿಡಿಯುತ್ತಿದ್ದರು. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಚಿಕ್ಕಬಳ್ಳಾಪುರ ಪತ್ರಿಕಾ ಮಿತ್ರರಲ್ಲಿ ಕೂಡ ಹೇಳಿಕೊಂಡಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಿನ್ನೆ ರಾತ್ರಿ ಏಕಾಏಕಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ನಾಪತ್ತೆಯಾಗಿದ್ದರು. (ಅವರ ಪತ್ರ ಓದಲು ಇಲ್ಲಿ ಕ್ಲಿಕ್ ಮಾಡಿ)
ಫೇಸ್ ಬುಕ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಪೋಸ್ಟ್ ಮಾಡಿ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಪತ್ರಕರ್ತ ಅಶ್ವತ್ಥ ನಾರಾಯಣ ಬಾಗೆಪಲ್ಲಿ ತಾಲೂಕು ಕದಿರನ್ನಾಗಾರಿಪಲ್ಲಿ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ಪತ್ತೆಯಾಗಿದ್ದಾರೆ.
ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

