FACT CHECK | ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ರಾ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ?
ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ 2025ಕ್ಕೆ ಭೇಟಿ ನೀಡಿದ್ದಾರೆ ಎಂಬ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ 2025ಕ್ಕೆ ಹಲವು ಬಾಲಿವುಡ್ ತಾರೆಯರು ಭೇಟಿ ನೀಡಿದ್ದಾರೆ. ರೆಮೋ ಡಿಸೋಜಾ, ಶಂಕರ್ ಮಹದೇವನ್, ಅನುಪಮ್ ಖೇರ್, ಅದಾ ಶರ್ಮಾ, ಗುರು ರಂಧಾವಾ, ಹೇಮಾ ಮಾಲಿನಿ, ಕಬೀರ್ ಖಾನ್, ಮಿಲಿಂದ್ ಸೋಮನ್, ಪೂನಮ್ ಪಾಂಡೆ ಮತ್ತು ಸುನಿಲ್ ಗ್ರೋವರ್ ಮುಂತಾದವರು ಈಗಾಗಲೇ ಕುಂಭಮೇಳಕ್ಕೆ ಹಾಜರಾಗಿದ್ದಾರೆ. ಈ ಮಧ್ಯೆ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಕೂಡ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
![]()
X ನಲ್ಲಿ ಮುಖೇಶ್ ಓಶಿಯನ್ ಎಂಬುವವರು ಈ ಫೋಟೋಗಳನ್ನು ಹಂಚಿಕೊಂಡು, “ಮಹಾಕುಂಭ ಮೇಳ 2025 ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ” ಎಂದು ಬರೆದಿದ್ದಾರೆ. ಇದೇ ರೀತಿಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ “ಕ್ರಿಕೆಟ್ ಸ್ಟಾರ್ಸ್” ಎಂಬ ಖಾತೆಯಿಂದ ಎಂತಹ ಬೆಳಗ್ಗೆ ಮತ್ತು ಅದ್ಭುತ ಕ್ಷಣ! ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ಪೋಸ್ಟ್ಅನ್ನು ಪರಿಶೀಲಿಸಲು ಅವರ ವಯಕ್ತಿಕ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಪರಿಶೀಲಿಸಿದಾಗ, ಅವರ ಖಾತೆಗಳಲ್ಲಿ ಮಹಾಕುಂಭಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿರಲಿಲ್ಲ. ವೈರಲ್ ಆಗಿರುವ ಯಾವುದೇ ಫೋಟೊಗಳು ಲಭ್ಯವಾಗಿಲ್ಲ.
![]()
ನಂತರ, ಫೋಟೋಗಳನ್ನು ಎಐ (AI) ತಂತ್ರಾಂಶ ಮೂಲಕ ಪರಿಶೀಲಿಸಲಾಯಿತು. Deepai.org ಎಂಬ AI ಪರಿಕರದಲ್ಲಿ ಪರಿಶೀಲಿಸಿದಾಗ, ಟ್ವೀಟರ್ನಲ್ಲಿ ಹಂಚಿಕೊಳ್ಳಲಾದ ಫೋಟೋವು 97.10% AI ನಿಂದ ರಚಿಸಲ್ಪಟ್ಟಿದೆ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಫೋಟೋವು ಶೇಕಡಾ 97.80 AI ನಿಂದ ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.
![]()
ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಎಐ ತಂತ್ರಜ್ಞಾನದಿಂದ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ವಾಸ್ತವದಲ್ಲಿ ಅವರು ಕುಂಭಮೇಳಕ್ಕೆ ಹೋಗಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕುಂಭಮೇಳಕ್ಕೆ ತೆರಳುತ್ತಿದ್ದ ರೈಲು ಪ್ರಯಾಣಿಕನಿಂದ ಹಣ ಪೀಕುತ್ತಿದ್ದ TTE ಎಂಬ ವಿಡಿಯೋದ ಅಸಲೀಯತ್ತೇನು?

