ದೆಹಲಿ ಹೋರಾಟ ಹೇಗೆಲ್ಲಾ ನಡೆಯುತ್ತಿದೆ; ಕರ್ನಾಟಕ ಹೋರಾಟಗಾರರ ಅನುಭವ ಲೇಖನ: ಓದಿ

ಮೊನ್ನೆ ದೆಹಲಿ ಹರಿಯಾಣ ಬಾರ್ಡರಿನಲ್ಲಿರುವ ಟಿಕ್ರಿ ಬಾರ್ಡರಿಗೆ ನಾವೆಲ್ಲಾ ಬಂದು ಸೇರಿದೆವು. ಟಿಕ್ರಿ ಬಾರ್ಡರ್ ಪೂರ್ತಿ ಬ್ಲಾಕ್ ಆಗಿತ್ತು. ಅಲ್ಲಿಂದ ಮುಂದೆ ಹೋಗಲು ಹಾದಿಯೇ ಇಲ್ಲ ದೊಡ್ಡ ದೊಡ್ಡ ಕಾಂಟ್ರಾಕ್ಟ್ ಬ್ಲಾಕ್ ಗಳನ್ನು ರಸ್ತಗೆ ಹಾಕಿ, ಕಬ್ಬಿಣದ ತಡೆಗೋಡೆಗಳನ್ನು ಮತ್ತು ತಂತಿ ಬೇಲಿಗಳನ್ನು ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅರೆಸೈನ್ಯ ಪಡೆಯವರು ಬಂದೂಕುಗಳನ್ನು ಹಿಡಿದು, ದೇಹಕ್ಕೆ ರಕ್ಷಣೆಯ ಗಾರ್ಡುಗಳನ್ನು ಕಟ್ಟಿಕೊಂಡು ಯಾರೊಂದಿಗೂ ಮಾತನಾಡದೆ ಚಲಿಸುವ ಕಲ್ಲ ಮೂರ್ತಿಗಳಂತೆ ಕಾಣುತ್ತಿದ್ದಾರೆ. ಎರಡು ದೇಶಗಳ ನಡುವಿನ ಗಡಿಯನ್ನೂ ಇಷ್ಟೊಂದು ಬಿಗಿಬಂದೋಬಸ್ತು ಮಾಡಿರುವುದಿಲ್ಲ. ಈ ಕಡೆಯಿಂದ ಆ ಕಡೆಗೆ ಹೈವೇ ಮೇಲೆ ಯಾರೊಬ್ಬರೂ ದಾಟಲು ಸಾಧ್ಯವಿಲ್ಲ.

ಸ್ಥಳೀಯರನ್ನು ಕೇಳಿಕೊಂಡು ಸಂದಿಗಳ ಮಾರ್ಗ ಹಿಡಿದೆವು. ಗಾಡಿಗಳನ್ನು ಎಡಕ್ಕೆ ಬಲಕ್ಕೆ ತಿರುಗಿಸುತ್ತಾ, ಸಂದಿಗೊಂದಿ ಹಳ್ಳ ಗುಂಡಿಗಳನ್ನು ಹೇಗೋ ದಾಟಿಸಿಕೊಂಡು ಗಡಿಯ ಆ ಭಾಗಕ್ಕೆ ಬಂದು ತಲುಪಿದೆವು. ಗಡಿಯ ಭಾಗದಲ್ಲಿ ಇರುವ ಚಿತ್ರಣವೇ ಬೇರೆ. ಅತ್ತ ಬಿಗಿಮುಖದ ಪೋಲೀಸರಿದ್ದರೆ ಇತ್ತ ಉತ್ಸಾಹದಲ್ಲಿ ಝಂಡಾಗಳನ್ನು ಹಿಡಿದುಕೊಂಡು, ಟ್ರಾಕ್ಟರುಗಳಿಗೆ ಜೋರು ಮೈಕುಗಳನ್ನು ಕಟ್ಟಿಕೊಂಡು, ಕೇಕೆ ಹಾಕಿಕೊಂಡು ತಂಡತಂಡವಾಗಿ ಚಲಿಸುತ್ತಿರುವ ಯುವಜನರು. ಟ್ರಾಲಿಗಳ ಮುಂದೆ ಚಹಾ ಮಾಡಿಕೊಂಡು ಕುರ್ಚಿ ಹಾಕಿಕೊಂಡು ಹರಟೆ ಹೊಡೆಯುತ್ತಿರುವ ಹಿರಿ ಜೀವಗಳು. ಮಧ್ಯಹ್ನದ ಅಡುಗೆಗೆ ತಯಾರಿ ನಡೆಸುತ್ತಿರುವ ಮಧ್ಯಮ ವಯಸ್ಕರು, ಮೆರವಣಿಗೆಗಳಿಗೆ ಸಿದ್ಧವಾಗುತ್ತಿರುವ ಕಾರ್ಯಕರ್ತರು. ಇದೊಂದು ಸಂತೆಯೊಳಗಿನ ಸಂತರ ಬಿಡಾರವಾಗಿ ಕಂಡು ಬರುತ್ತಿತ್ತು.

ಟಿಕ್ರಿ ಬಹಳ ಕಿಷ್ಕೆಂದೆ ಪ್ರದೇಶ. ಎರಡೂ ಇಕ್ಕೆಲುಗಳಲ್ಲಿ ಅಂಗಡಿಗಳು, ನಗರದ ಬೇರೆ ಬೇರೆ ಭಾಗಗಳನ್ನು ಕನೆಕ್ಟ್ ಮಾಡುವ ಮುಖ್ಯ ಬೀದಿಗಳು, ಹೈವೆ ಮಧ್ಯದಲ್ಲಿ ಮೆಟ್ರೋ ಫ್ಲೈ ಓವರ್, ಸಿಕ್ಕಾಬಟ್ಟೆ ಆಟೋ, ಕಾರು, ಟೆಂಪೋ, ದ್ವಿಚಕ್ರ. ಒಟ್ಟು ನಾಗರೀಕ ಗೌಜು ಪ್ರದೇಶ. ಬೆಂಗಳೂರಿನ ಕೆ. ಆರ್. ಮಾರ್ಕೆಟ್ ಪ್ರದೇಶ ಎಂದು ಕಲ್ಪಿಸಿಕೊಳ್ಳಿ. ಆದರೆ ಇಡೀ ಪ್ರದೇಶ ಹೋರಾಟಗಾರರ ವಶದಲ್ಲಿ. ಮಧ್ಯದಲ್ಲಿ ಅನೇಕ ಕಿಲೋಮೀಟರ್ ಟ್ರ್ಯಾಲಿಗಳ ಸಾಲು. ಅಲ್ಲಲ್ಲಿ ವೇದಿಕೆಗಳು, ರಸ್ತೆಯುದ್ದಕ್ಕೂ ಅಡಿಗೆ ಒಲೆಗಳು, ನಿರಂತರ ಆಹಾರ ಒದಗಿಸುತ್ತಿರುವ ಲಂಗರುಗಳು, ಟ್ರ್ಯಾಲಿಯ ಮುಂದಿನ ಅಂಗಳಗಳು, ಟ್ರಾಕ್ಟರುಗಳ ಮೇಲೆ ಕೂತು ಮೆರವಣಿಗೆ ಹೊರಟಿರುವ ಯುವಕರು….ಟ್ರಾಫಿಕ್ ಕರ್ಕಶದ ಮತ್ತು ಹೋರಾಟದ ಘೋಷಣೆಗಳ ಮಿಶ್ರ ಸದ್ದುಗದ್ದಲ. ಇಷ್ಟೆಲ್ಲಾ ಇದ್ದರೂ ಜನನಿಬಿಡಿ ಪ್ರದೇಶವಾಗಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗಬಾರದೆಂದು ಸರ್ವಿಸ್ ರೋಡಿನಲ್ಲಿ ವಾಹನಗಳ ಓಡಾಟಕ್ಕೆ ಹೋರಾಟಗಾರರೇ ಅವಕಾಶ ಮಾಡಿಕೊಟ್ಟಿದ್ದಾರೆ. ಇವರೇ ಟ್ರಾಫಿಲ್ ಪೋಲೀಸರಂತೆ ಕೆಲಸ ಮಾಡುತ್ತಾ ಜ್ಯಾಮ್ ಆಗದೆ ವಾಹನಗಳು ಚಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ವಾಹನಗಳ ಹೆಬ್ಬಾವು ಸಾಲಿನಲ್ಲಿ ಇಷ್ಟಿಷ್ಟು ಇಷ್ಟಿಷ್ಟು ಮುಂದೆ ಸಾಗಿ ಅಂತೂ ಇಂತೂ..ಬಹದ್ದರ್ ಗಂಜ್ ಎಂದು ಕರೆಯುವ ಮೆಟ್ರೋ ಸ್ಟೇಷನ್ನಿನ ಬಳಿ ಬಂದು ಸೇರಿದೆವು. ನಮಗೆ ಇಲ್ಲಿಗೆ ಬರಲು ಸೂಚಿಸಲಾಗಿತ್ತು. ಅಷ್ಟು ಹೊತ್ತಿಗೆ ದೆಹಲಿಯ ಮತ್ತು ಪಂಜಾಬಿನ ನಮ್ಮ ಮಿತ್ರರು ಸಹ ನಮ್ಮ ಜೊತೆಗೂಡಲು ಆಗಮಿಸತೊಡಗಿದ್ದರು.

ಇದನ್ನೂ ಓದಿ: ರೈತ ಹೋರಾಟದಲ್ಲಿ ದಲಿತ-ಭೂರಹಿತ ಕಾರ್ಮಿಕರು ಭಾಗಿಯಾಗಿದ್ದಾರೆ? ಅವರಿಗೂ ಹೋರಾಟಕ್ಕೂ ಏನು ಸಂಬಂಧ? 

ಇಂಕ್ವಿಲಾಬಿ ಸೆಂಟರ್ ಮತ್ತು ಬೆಕೆಯು ಡಕೊಂದ ಸಂಗಾತಿಗಳು ನಮ್ಮ ತಂಡವನ್ನು ಮೆರವಣಿಗೆಯಲ್ಲಿ ಕರೆದುಕೊಂಡು ವೇದಿಕೆಯ ಕಡೆ ಹೊರಟರು. [ನಾನು, ಬಡಗಲಪುರ ನಾಗೇಂದ್ರರು ಮತ್ತು ಚಾಮರಸ ಮಾಲಿ ಪಾಟೀಲರು ಬೇರೊಂದು ಕಡೆ ಹೋಗಬೇಕಿದ್ದರಿಂದ ರ್ಯಾಲಿಯಲ್ಲಿ ಭಾಗವಹಿಸಲು ಆಗಲಿಲ್ಲ. ಮಿಕ್ಕವರು ರ್ಯಾಲಿಯಲ್ಲಿ 2 ಕಿಮೀ ನಡೆದು ಸಾವಿರಾರು ಜನರಿದ್ದ ವೇದಿಕೆಯನ್ನು ತಲುಪಿದರಂತೆ. ತಂಡದ ಪರವಾಗಿ ಸಭೆಯನ್ನುದ್ದೇಶಿಸಿ ದಲಿತ ಚಳವಳಿಯ ಮುಖಂಡರಾದ ಗುರುಪ್ರಸಾದ್ ಕೆರಗೋಡರು ಮಾತನಾಡಿದರಂತೆ].

ಬಹುಮುಖ್ಯ ಮತ್ತೊಂದು ಸಭೆಯೊಂದರಲ್ಲಿ [ಇದರ ಕುರಿತು ಕೊನೆ ಕಂತಿನಲ್ಲಿ] ಪಾಲ್ಗೊಳ್ಳಲು ಹೋಗಿದ್ದ ನಾವು ಹೇಗೋಗೋ ಜಾಗ ಮಾಡಿಕೊಂಡು ಹಿಂದಿರುಗುವ ಹೊತ್ತಿಗೆ ರಾತ್ರಿ 7.30 ಆಗಿತ್ತು. ನಾನು, ಕುಮಾರ್ ಮತ್ತು ತನ್ವೀರ್ ರಾತ್ರಿ ಟಿಕ್ರಿಯಲ್ಲೇ ತಂಗಲು ತೀರ್ಮಾನಿಸಿದ್ದೆವು. ಆದರೆ ರಾತ್ರಿ ಪಂಜಾಬಿನಿಂದ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ತಂಡಗಳು ಆಗಮಿಸಿದ್ದರಿಂದ ಪುರುಷರಿಗೆ ಜಾಗ ಒದಗಿಸುವುದು ಸಂಘಟಕರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ನಾನೊಬ್ಬನೇ ರಾತ್ರಿ ಉಳಿದೆ. ಬಿಕೆಯು ಡಕೊಂದಾದ ಮುಂದಾಳುಗಳು ಸಿಕ್ಕರು. ರೊಟ್ಟಿ ತಿಂದು, ಚಹಾ ಕುಡಿದು, ಕಂಬಳಿ ಹೊದ್ದು ಮಾತಿಗೆ ಕೂತೆವು. ಇಡೀ ಹೋರಾಟ ಬೆಳವಣಿಗೆಯಾದ ಪ್ರಕ್ರಿಯೆಯನ್ನು ಅವರು ವಿವರಿಸುತ್ತಾ ಹೋದರು. ನಾನು ಸಂತೋಷ ಮತ್ತು ಆಶ್ಛರ್ಯದಲ್ಲಿ ಕೇಳುತ್ತಾ ಹೋದೆ. ಅವರ ಮಾತಿನ ಸಾರ ಇಷ್ಟು…..

ಇದನ್ನೂ ಓದಿ: ಹೋರಾಟದಲ್ಲೂ ಕೃಷಿ ಬಿಡದ ರೈತರು; ಪ್ರತಿಭಟನೆಯಲ್ಲೇ ಈರುಳ್ಳಿ ಬೆಳೆ!

– ಅಚ್ಚರಿ ಎಂಬಂತೆ 2016ರಲ್ಲಿ ಪಂಜಾಬಿನ ಬರ್ನಾಲಾ ನಗರದಲ್ಲಿ ನಡೆದ ಕೃಷಿ ಬಿಕ್ಕಟ್ಟಿನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಿಂದ ಮಾತು ಪ್ರಾರಂಭಿಸಿದರು. [ಕರ್ನಾಟಕ ಜನಶಕ್ತಿ ಮತ್ತು ಬಿಕೆಯು ಡಕೊಂದ ಜಂಟಿಯಾಗಿ ಇದನ್ನು ಆಯೋಜಿಸಿದ್ದವು]. “ಅದೊಂದು ರೀತಿಯಲ್ಲಿ ಆರಂಭ ಎನ್ನಬಹುದು. ವಾಸ್ತವದಲ್ಲಿ ನಾವು ಅದನ್ನು ಸಂಘಟಿಸುವುದು ಕಷ್ಟ ಎಂದೆವು. ಜನಶಕ್ತಿಯವರು ಇಲ್ಲ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ಅದು ಸಾಧ್ಯವಾಯಿತು. 22 ರೈತ ಸಂಘಟನೆಗಳು ಒಟ್ಟುಗೂಡಲು ಮತ್ತು ಕೃಷಿ ಬಿಕ್ಕಟ್ಟಿನ ಮೂಲವಾದ ಕಾರ್ಪೊರೇಟ್ ಆಕ್ರಮಣದ ಕುರಿತು ಏಕ ಗ್ರಹಿಕೆಗೆ ತಲುಪಲು ಈ ರಾಷ್ಟ್ರೀಯ ವಿಚಾರ ಸಂಕಿರಣವೂ ಸಹಾಯವಾಯಿತು. ಹಾಗಾಗಿ ಈ ಹೋರಾಟದಲ್ಲಿ ಕರ್ನಾಟಕದ ಸಂಗಾತಿಗಳ ಪಾತ್ರವೂ ಇದೆ” ಎಂದರು. “ಮಸ್ಕ ಹಚ್ಚಬೇಡಿ” ಎಂದು ನಾನಂದದ್ದರಿಂದ ಒಂದಷ್ಟು ತಮಾಷೆ ನಡೆದು ಮತ್ತೆ ವಿಚಾರಕ್ಕೆ ಮರಳಿದೆವು.

– ವಿವಿಧ ರೈತ ಮತ್ತು ಜನಪರ ಸಂಘಟನೆಗಳು ಒಟ್ಟುಗೂಡಿ ಕೆಲಸ ಮಾಡುವ ಪರಂಪರೆ ಕಳೆದ 10 ವರ್ಷದಲ್ಲಿ ಪಂಜಾಬಿನಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ರಾಜಕೀಯ ಭೀನ್ನಾಭಿಪ್ರಾಯಗಳಿದ್ದರೂ ರೈತರ ಹಕ್ಕೊತ್ತಾಯಗಳ ವಿಚಾರದಲ್ಲಿ ಏಕಾಭಿಪ್ರಾಯ ಮತ್ತು ಐಕ್ಯ ಕರೆಗಳನ್ನು ನೀಡುವ ವಿದ್ಯಾಮಾನ ಸಾಕಷ್ಟು ಉತ್ತಮಗೊಂಡಿದೆ. ಇದು ಹಿನ್ನೆಲೆ ಮತ್ತು ಭೂಮಿಕೆ, ಇದಿಲ್ಲದಿರುತ್ತಿದ್ದರೆ ಈ ಹೋರಾಟ ಸಾಧ್ಯವಾಗುತ್ತಿರಲಿಲ್ಲ ಎಂದು ಮಾತಿಗೆ ಮುನ್ನುಡಿ ಹಾಕಿದರು.

– ಇತ್ತೀಚಿಗೆ ಕೇಂದ್ರ ಸರ್ಕಾರ ಈ ಮೂರು ಕ್ರಿಮಿನಲ್ ಕಾಯ್ದೆಗಳನ್ನು ಜಾರಿಗೆ ತಂದಾಗ ನಾವು ಬಹಳ ಚಿಂತಿತರಾದೆವು. ಜನರಲ್ಲಿ ಕೊರೋನಾ ಭಯ ತುಂಬಾ ಇತ್ತು. ಆದರೆ ಕೊರೋನಾಗೆ ಹೆದರಿ ಮನೆಯಲ್ಲಿ ಕೂತರೆ ಕೃಷಿ ಮತ್ತು ರೈತರ ಸರ್ವನಾಶ ಖಚಿತ ಎಂಬುದು ಮನದಟ್ಟಾಗಿತ್ತು. ಜೂನ್ ತಿಂಗಳಲ್ಲಿ ಎಲ್ಲರೂ ಸೇರಿ ಕೊರೋನಾವನ್ನು ಮರಿಯೋಣ, ಏನೇ ಬರಲಿ ಬೀದಿಗಳಿದು ಹೋರಾಡೋಣ ಎಂದು ತೀರ್ಮಾನಿಸಿದೆವು. ಪ್ರಚಾರಂದೋಲನ ಮತ್ತು ಪ್ರತಿಭಟನೆಗಳಿಗೆ ಕರೆ ನೀಡತೊಡಗಿದೆವು. ಆದರೆ ನಮಗೇ ಅಚ್ಚರಿಯಾಗುವಂತೆ ಜನರು ಹೋರಾಟಗಳಲ್ಲಿ ಪಾಲ್ಗೊಳ್ಳತೊಡಗಿದರು. ಅದನ್ನು ನೋಡಿ ನಾವು ಇನ್ನಷ್ಟು ದೊಡ್ಡ ಕರೆಗಳಿಗೆ ಮುಂದಾದೆವು, ಜನರು ಮತ್ತೆ ನಮ್ಮ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಹೋರಾಟಗಳಲ್ಲಿ ಪಾಲ್ಗೊಳ್ಳತೊಡಗಿದರು. ಇದಕ್ಕೆ ಕಾರಣ ಪಂಜಾಬಿನ ರೈತರು ಕಂಪನಿಗಳ ಬಣ್ಣದ ಮಾತು, ವಂಚನೆ ಮತ್ತು ಕ್ರೌರ್ಯ ಮೂರನ್ನೂ ಹತ್ತಿರದಿಂದ ನೋಡಿದ್ದಾರೆ. ಮಂಡಿಗಳು ಮುಳುಗುತ್ತವೆ, ಬೆಳೆ ಮತ್ತು ಬೆಲೆ ಅವರ ನಿಯಂತ್ರಣಕ್ಕೆ ಹೋಗುತ್ತದೆ. ಅಷ್ಟೇ ಅಲ್ಲ ಕ್ರಮೇಣ ನಮ್ಮ ಭೂಮಿಯೂ ಅವರ ಪಾಲಾಗಿ, ನಾವು ನೆಲೆ ಇಲ್ಲದವರಾಗುತ್ತೇವೆ ಎಂಬ ಅಭಪ್ರಾಯ ಜನಜನಿತವಾಗಿಬಿಟ್ಟಿತು. ಜನ ಬೀದಿಗಳಿಗೆ ಹರಿದುಬರತೊಡಗಿದರು. ಅನಿರ್ಧಿಷ್ಟ ರಸ್ತಾ ರೋಕೋ ಹಲವು ಪ್ರದೇಶಗಳಲ್ಲಿ ಯಶಸ್ವಿಯಾಯಿತು. ರಾಜಕೀಯ ಪಕ್ಷಗಳ ಕಛೇರಿಗಳ ಮುಂದೆ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆದವು. ಜನರ ಆಕ್ರೋಶಕ್ಕೆ ಹೆದರಿ ಎಲ್ಲಾ ವಿರೋಧ ಪಕ್ಷಗಳು ಕೃಷಿ ನೀತಿಗಳನ್ನು ವಿರೋಧಿಸುವ ನಿಲುವು ತೆಗೆದುಕೊಂಡವು. ಇದರ ಮುಂದುವರಿಕೆಯಾಗಿ ಎನ್ ಡಿ ಎ ಸಹಭಾಗಿ ಪಕ್ಷಗಳನ್ನು ಅದರಿಂದ ಹೊರಬರಲು ಆಗ್ರಹಿಸಲಾಯಿತು ಮತ್ತು ರಾಜಿನಾಮೆ ಕೊಡುವಂತೆ ಮಾಡಲಾಯಿತು. ಬಿಜೆಪಿ ನಾಯಕರ ಮೇಲೂ ಒತ್ತಡ ಹೆಚ್ಚಿಸಲಾಯಿತು ಮತ್ತು ಅನೇಕ ಜನ ಕೆಳ ಹಂತದ ಪದಾಧಿಕಾರಿಗಳು ಬಿಜೆಪಿಯನ್ನು ತೊರೆದುಬಿಟ್ಟರು. ಇದ್ದವರೂ ತಾವೂ ಇದನ್ನು ವಿರೋಧಿಸುತ್ತೇವೆ. ಮೋದಿಯವರ ಗಮನಕ್ಕೆ ತಂದು ಅವರು ಇದನ್ನು ಹಿಂತೆಗೆದುಕೊಳ್ಳುವಂತೆ ಮಾಡುತ್ತೇವೆ ಎನ್ನತೊಡಗಿದರು. ಸಾರಾಂಶದಲ್ಲಿ ಎರಡು ತಿಂಗಳಲ್ಲಿ ಈ ಕಾಯ್ದೆಗಳನ್ನು ಸಮರ್ಥಿಸುವವರು ಯಾರೂ ಇಲ್ಲ ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ಏರ್ಪಟ್ಟಿತು.

ಇದನ್ನೂ ಓದಿ: ಕಾಮನ್ ಸೆನ್ಸ್ ಇಲ್ಲದ, ಸುಳ್ಳುಗಳ ಸರದಾರ ಮೋದಿ: ಬಡಗಲಪುರ ನಾಗೇಂದ್ರ

– ಹೋರಾಟದ ಈ ವಾತಾವರಣಕ್ಕೆ ಹೊಸ ಚೈತನ್ಯ ತುಂಬಿದ್ದು ಸಾಹಿತಿ ಕಲಾವಿದರು. 80ರ ದಶಕದ ನಂತರ ಹೋರಾಟದ ಹೊಸ ಹಾಡುಗಳೇ ಪಂಜಾಬಿನಲ್ಲಿ ಹುಟ್ಟಿರಲಿಲ್ಲ. ಹಳೇ ಹಾಡುಗಳನ್ನೇ ಎಲ್ಲಾ ಸಂಘಟನೆಗಳ ಕಾರ್ಯರ್ತರು ಹಾಡುತ್ತಿದ್ದರು. ಆದರೆ ಈ ಹೊಸ ವಾತಾವಾರಣ ಸಾಹಿತ್ಯ ಸ್ಫೋಟಕ್ಕೆ ಕಾರಣವಾಯಿತು. ಪಂಜಾಬಿನ ಎಲ್ಲಾ ಅಂದರೆ ಎಲ್ಲಾ ಪ್ರಮುಖ ಗೀತ ರಚನೆಕಾರರು ಹೊಸ ಹಾಡುಗಳನ್ನು ಬರೆದರು. ಎಲ್ಲಾ ಪ್ರಸಿದ್ಧ ಸಂಗೀತಕಾರರು ದೇಸಿ ಮತ್ತು ಆಧುನಿಕತೆ ಬೆರೆತಿರುವ ಬೀಟ್ಸ್ ಗಳ ಹಾಡುಗಳನ್ನು ಸಂಯೋಜಿಸಿ ಹರಿಬಿಟ್ಟರು. ಈ ಹಾಡುಗಳು ಯುವಜನರ ರಕ್ತ ಉಕ್ಕೇರುವಂತೆ ಮಾಡಿದವು. ಕಲಾವಿದರಿಗೆ ಯುವಕರ ದೊಡ್ಡ ಫ್ಯಾನ್ಸ್ ಫಾಲೋಅಪ್ ಇದೆ. ತಮ್ಮ ಹೀರೋಗಳು ಹೋರಾಟದ ಪರವಾಗಿ ಹಾಡತೊಡಗಿದಂತೆ ಹುಡುಗರ ನಡುವೆ ಉತ್ಸಾಹದ ಬಿರುಗಾಳಿ ಬೀಸಿತು. ಇಡೀ ವಾತಾವರಣ ಶಕ್ತಿ ಸಂಚಯಿತಗೊಂಡುಬಿಟ್ಟಿತು.

ದೆಹಲಿ ರೈತ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕದ ರೈತ ಮುಖಂಡರು ಹೇಳಿದ್ದೇನು?

– ಈ ರೈತ ವಿರೋಧಿ ಪಾಲಿಸಿಗಳ ಹಿಂದಿರುವ ಮೂಲ ಶಕ್ತಿಗಳನ್ನು ಬಯಲುಗೊಳಿಸಬೇಕು ಮತ್ತು ಅವರಿಗೆ ಬಿಸಿ ತಟ್ಟುವಂತೆ ಮಾಡಬೇಕು ಎಂದು ತೀರ್ಮಾನಿಸಲಾಯಿತು. ಬಾಯ್ಕಾಟ್ ಅದಾನಿ – ಅಂಬಾನಿಯ ಕರೆ ನೀಡಲಾಯಿತು. ಈ ಕರೆ ಯುವಕರಲ್ಲಿ ಅತ್ಯಂತ ಜನಪ್ರಿಯವಾಯಿತು. ಜನರೇ ನುಗ್ಗಿ ರಿಲೆಯನ್ಸ್ ಮಾಲ್ ಗಳನ್ನು, ಬಂಕ್ ಗಳನ್ನು ಬಂದ್ ಮಾಡಿಸಿದರು. ಮಾಲ್ ಗಳನ್ನು ಬಂದ್ ಮಾಡಿಸಿದ ಕೂಡಲೇ ಸಣ್ಣ ವ್ಯಾಪಾರಿಗಳೆಲ್ಲಾ ಖುಷಿ ಪಟ್ಟು ರೈತರಿಗೆ ಬೆಂಬಲ ನೀಡತೊಡಗಿದರು. ಜಿಯೋ ತೊರೆಯುವ ಆಂದೋಲನ ಬಹಳ ಸರಳವಾಗಿ ಎಲ್ಲರೂ ಪಾಲ್ಗೊಳ್ಳಬಹುದಾದ ಚಳವಳಿಯಾಗಿಬಿಟ್ಟಿತು. ರೈತರು ಮತ್ತು ಯುವಜನರು ಪಂಜಾಬಿನ ಎಲ್ಲಾ ಟೋಲುಗಳಿಗೂ ನುಗ್ಗಿ ಹಣ ವಸೂಲಿಯ ಬೂತುಗಳನ್ನು ಕಿತ್ತೊಗೆದು ಟೋಲ್ ರಹಿತ ಸಂಚಾರಕ್ಕೆ ದಾರಿಮಾಡಿಕೊಟ್ಟರು. ಇದರಿಂದ ಜನಸಾಮಾನ್ಯರು ಬಹಳ ಸಂತಸಗೊಂಡು ಬೆಂಬಲ ವ್ಯಕ್ತಪಡಿಸಿದರು. ರೈಲು ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಯಿತು. ಆದರೆ ಗೂಡ್ಸ್ ಗಾಡಿಗಳನ್ನು ತಡೆಯದಿರುವ ತೀರ್ಮಾನ ತೆಗೆದುಕೊಳ್ಳಲಾಯಿತು. ಏಕೆಂದರೆ ಸರಕು ನಿಂತರೆ ಬೆಲೆ ಏರಿಕೆಯಾಗಿ ಜನರಿಗೇ ಪೆಟ್ಟು ತಗಲುತ್ತದೆ ಮತ್ತು ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ರೈತ ಸಂಘಟನೆಗಳ ಈ ವಿವೇಕಯುತ ತೀರ್ಮಾನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಈ ಎಲ್ಲಾ ಕ್ರಮಗಳು ರೈತ ಹೋರಾಟದ ಜೊತೆ ಮಿಕ್ಕೆಲ್ಲಾ ಸಮುದಾಯಗಳನ್ನು ಬೆಸೆದವು ಮತ್ತು ಬೆಂಬಲ ಹೆಚ್ಚಲು ಕಾರಣವಾದವು.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ; ದೆಹಲಿಯ ಟಿಕ್ರಿ ಗಡಿ ತಲುಪಿದ ಅಂಧರು!

– ಇಂತಹ ಸಂದರ್ಭದಲ್ಲಿ ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್ ಸಿಸಿ ನವೆಂಬರ್ 26-27 ದೆಹಲಿ ಚಲೋ ಕರೆ ನೀಡಿತು. ಇದೊಂದು ಸಕಾಲಿಕ ಕರೆಯಾಗಿತ್ತು. ಈ ಕರೆಯನ್ನು ಯಶಸ್ವಿಗೊಳಿಸುವುದು ಹೇಗೆ ಎಂಬ ಚರ್ಚೆಗಳು ನಡೆದವು. ಸುಮ್ಮನೆ ದೆಹಲಿಗೆ ಹೋಗಿ ಬಂದರೆ ಏನು ಪ್ರಯೋಜನ? ಎಂಬ ಪ್ರಶ್ನೆ ಎದ್ದಿತು. ಇಷ್ಟರಿಂದಲೇ ಮೋದಿ ನಮ್ಮ ಮಾತನ್ನು ಕೇಳಿಬಿಡುತ್ತಾನಾ? ಎಂಬ ಪ್ರಶ್ನೆ ಸಹಜವಾಗಿತ್ತು. 26-27 ಕರೆಗೆ ಓಗೊಟ್ಟು ಹೋಗೋಣ. ಆದರೆ ಬರಿಕೈಯಲ್ಲಿ ಹಿಂದಿರುಗುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು. ಕಾಯ್ದೆಗಳು ರದ್ದಾಗುವಂತೆ ಮಾಡಬೇಕಾದರೆ, ಮೋದಿಯನ್ನು ಮಣಿಸಬೇಕಾದರೆ ಕಡಿಮೆ ಎಂದರೂ ಒಂದು ತಿಂಗಳು ನಿಲ್ಲಬೇಕಾಗುತ್ತದೆ, ಮೂರು ತಿಂಗಳೂ ಆಗಬಹುದು….ಎಷ್ಟೇ ಆದರೂ ಸರಿ ರದ್ದುಗೊಳಿಸದೆ ಹಿಂದಿರುಗುವುದು ಬೇಡ ಎಂಬ ಏಕ ತೀರ್ಮಾನಕ್ಕೆ ಬರಲಾಯಿತು. ಅದನ್ನು ಗಮನದಲ್ಲಿಟ್ಟುಕೊಂಡು ಸಹಸ್ರಾರು ಟ್ರಾಕ್ಟರುಗಳನ್ನು ಹೊರಡಿಸಬೇಕು. ಪ್ರತಿ ಟ್ರಾಕ್ಟರಿಗೆ ಕಡ್ಡಾಯವಾಗಿ ಎರಡು ಟ್ರಾಲಿಗಳನ್ನು ಕಟ್ಟಬೇಕು. ಒಂದರಲ್ಲಿ ಜನ ಮತ್ತು ಮತ್ತೊಂದರಲ್ಲಿ ಒಂದು ತಿಂಗಳು ಬದುಕುಳಿಯಲು ಬೇಕಾದ ದಿನಸಿ, ಪಾತ್ರೆ, ಒಲೆ, ಹೊದಿಗೆ, ಇತ್ಯಾದಿ ಎಲ್ಲಾ ಅಗತ್ಯಗಳನ್ನು ಹೇರಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು. ಎಷ್ಟು ಸಾಧ್ಯವೋ ನುಗ್ಗೋಣ. ಎಲ್ಲಿ ತಡಿಯುತ್ತಾರೋ ಅಲ್ಲೇ ರಸ್ತೆ ಬ್ಲಾಕ್ ಮಾಡಿ ಬೀಡುಬಿಡೋಣ ಎಂದುಕೊಂಡೆವು. ಈ ಯೋಜನೆ, ಸಿದ್ಧತೆ ಮತ್ತು ಸಂಕಲ್ಪದ ಜೊತೆ ನವೆಂಬರ್ 24 ರಿಂದ ಸಹಸ್ರಾರು ಟ್ರಾಕ್ಟರ್, ಟ್ರಾಲಿಗಳ ರೈತ ದಂಡು ದಿಲ್ಲಿಯ ಕಡೆ ಹೆಜ್ಜೆ ಹಾಕತೊಡಗಿತು.

ಕೃಷಿ ತಿದ್ದುಪಡಿ ಕಾಯ್ದೆ: ರೈತರು ಈ ಪರಿ ರೊಚ್ಚಿಗೇಳಲು ಕಾರಣವೇನು? ನೀವು  ತಿಳಿದುಕೊಳ್ಳಬೇಕಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

– ಸಹಸ್ರ ಸಹಸ್ರ ಟ್ರಾಕ್ಟರುಗಳು, ಎರಡೆರಡು ಟ್ರಾಲಿಗಳು ಸೇರಿ ದೊಡ್ಡ ಪ್ರವಾಹದಂತೆ ಕಾಣತೊಡಗಿತು. ಪೋಲೀಸರು ಒಡ್ಡಿದ ಅಡೆತಡೆಗಳನ್ನು ಲೆಕ್ಕಿಸದೆ ಟ್ರಾಕ್ಟರುಗಳು ತಳ್ಳಿಕೊಂಡು ಬರತೊಡಗಿದವು. ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಅದು ತಡೆಯುವ ಪ್ರಯತ್ನ ಮಾಡಲಿಲ್ಲ. ಆದರೆ ಹರ್ಯಾಣ ಸರ್ಕಾರ ತುಂಬಾ ತೊಂದರೆ ಕೊಡತೊಡಗಿತು. ನಾವು ಹರಿಯಾಣವನ್ನು ದಾಟಿಯೇ ದಿಲ್ಲಿಗೆ ಬರಬೇಕಿತ್ತು. ಪಂಜಾಬಿನ ರೈತರ ಜೊತೆ ಹರಿಯಾಣಾದ ರೈತರೂ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡರು. ರಸ್ತೆಗೆ ತಡೆಗೋಡೆ ಹಾಕಿದ ಕಡೆ ಹೊಲಗಳ ಮೂಲಕ ದಾರಿ ಮಾಡಿ ಟ್ರಾಕ್ಟರ್ ದಂಡು ಮುನ್ನಡೆಯಲು ಅವಕಾಶ ಮಾಡಿಕೊಟ್ಟರು. ಅಡೆತಡೆಗಳನ್ನು ದಾಟಿ ಟ್ರಾಕ್ಟರ್ ಪಡೆ ದಿಲ್ಲಿ ಹತ್ತಿರಕ್ಕೆ ಬಲಸಂಚಯಿಸಿಕೊಳ್ಳುತ್ತಾ ಸಾಗತೊಡಗಿದಂತೆ ಕೇಂದ್ರ ಸರ್ಕಾರ ಬೆದರಿತು. ಅದು ಈ ರೀತಿಯ ಸಂಖ್ಯೆ ಮತ್ತು ತೀವ್ರತೆಯನ್ನು ಎದುರು ನೋಡಿರಲಿಲ್ಲ. ಬೃಹತ್ ಸಂಖ್ಯೆಯಲ್ಲಿ ದೀರ್ಘಕಾಲ ಉಳಿಯುವ ಸಿದ್ಧತೆ ಜೊತೆ ಬರುತ್ತಿರುವುದರಿಂದ ದಿಲ್ಲಿಯಲ್ಲಿ ಪ್ರವೇಶ ಮಾಡಲು ಬಿಡಬಾರದು ಎಂಬ ತೀರ್ಮಾನಕ್ಕೆ ಬಂದರು. ಆದರೆ ಈ ಟ್ರಾಕ್ಟರ್ ಪಡೆಯನ್ನು ತಡೆಯುವುದು ಸುಲಭವಿರಲಿಲ್ಲ. ಜಲಫಿರಂಗಿಗಳು ಯಾವ ಕೆಲಸಕ್ಕೂ ಬರಲಿಲ್ಲ. ರಸ್ತೆ ತಡೆಗಳನ್ನು ನಮ್ಮವರು ಕಸದ ರೀತಿ ಕಿತ್ತೊಗೆದರು. ಇದರಿಂದ ಗಾಬರಿಗೊಂಡ ಸರ್ಕಾರ ತಾನೇ ಹೆದ್ದಾರಿಗಳನ್ನು ತೋಡಿ ಕಂದಕಗಳನ್ನು ನಿರ್ಮಿಸಿತು. ದೊಡ್ಡ ದೊಡ್ಡ ಬೌಲ್ಡರ್ ಗಳನ್ನು ತಂದು ರಸ್ತೆಗಳಿಗೆ ಸುರಿದು, ತಂತಿ ಬೇಲಿಗಳನ್ನು ಬಿಗಿದು ಒಳ ನುಗ್ಗದಂತೆ ತಡೆಯಿತು. ಎಷ್ಟು ಸಾಧ್ಯವೋ ಅಷ್ಟು ಉಳನುಗ್ಗಬೇಕು ಎಂದುಕೊಂಡಿದ್ದೆವು. ಹಾಗಾಗಿ ಸಾಕಷ್ಟು ಒಳನುಗ್ಗಿ ಹಾಗೂ ಸಾಧ್ಯವಾಗದೇ ಹೋದ ಪ್ರದೇಶಗಳಲ್ಲಿ ಬೀಡುಬಿಟ್ಟೆವು. ಕೇಂದ್ರ ಸರ್ಕಾರ ಬಯಲು ಬಂದೀಖಾನೆ ಮಾಡಬಹುದಾದ ಒಂದು ಜಾಗವನ್ನು ತೋರಿಸಿ ಇಲ್ಲಿಗೆ ಬನ್ನಿ ಎಂದು ಕರೆಯಿತು. ನಾವದನ್ನು ತಿರಸ್ಕರಿಸಿದೆವು. ತಡೆದಲ್ಲೇ ನಿಲ್ಲುವ ತೀರ್ಮಾನ ತೆಗೆದುಕೊಂಡೆವು.

ಇದನ್ನೂ ಓದಿ: ಬಂಡವಾಳಿಗರ ಮನೆ ನಾಯಿಯ ಹೆಸರಿನಲ್ಲೂ ಆಸ್ತಿ ಮಾಡಲು ನೆರವಾಗಿದೆ ಸರ್ಕಾರ: ನೂರ್ ಶ್ರೀಧರ್

– ಬೀದಿಯಲ್ಲಿ ಬಿಡಾರಗಳನ್ನು ಹೂಡಲು ಯುವಕರು ದೊಡ್ಡ ಪ್ರಮಾಣದಲ್ಲಿ ಹೆಗಲಾದರು. ಸ್ವಯಸೇವಕರಾಗಿ ನಿಂತು ಅವರು ಎಲ್ಲಾ ಕೆಲಸ ಮಾಡತೊಡಗಿದರು. ಒಂದೇ ದಿನದಲ್ಲಿ 90 ಸಾವಿರ ಟ್ರಾಲಿಗಳ ನೆಲೆ ನಿರ್ಮಾಣಗೊಂಡಿತು. ಒಂದೆರಡು ದಿನವಾಗುತ್ತಿದ್ದಂತೆ ನೆರವಿನ ಮಹಾಪೂರ ಹರಿದುಬರತೊಡಗಿತು. ನೀರು ಯಾರು ತಂದರೋ, ಹಾಲ್ಯಾರೋ, ಹಿಟ್ಟ್ಯಾರೋ, ಗ್ಯಾಸರೋ, ಮೈಕ್ಯಾರೋ….ಯಾರು ಏನು ತರುತ್ತಿದ್ದಾರೆ ಎಂದು ನೋಡಲೂ ಪುರುಸೊತ್ತಿಲ್ಲದಂತೆ ಎಲ್ಲಾ ವ್ಯವಸ್ಥೆಗಳೂ ಒದಗಿಬಂದವು. ನಾವು ಯೋಜಿತವಾಗೇ ಕೆಲಸ ಮಾಡಿದ್ದರೂ ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ, ಪಾಲ್ಗೊಳ್ಳುವಿಕೆ ಮತ್ತು ಬೆಂಬಲ ಜನಸಾಮಾನ್ಯರಿಂದ ಈ ಹೋರಾಟಕ್ಕೆ ಒದಗಿ ಬಂದಿತು. ಇನ್ನು ಮೂರು ತಿಂಗಳು ಸಹ ಉಳಿಯಬಹುದು. ಆದರೆ ಉಳಿಯುವುದು ನಮ್ಮ ಗುರಿ ಅಲ್ಲವಲ್ಲ. ಒತ್ತಡ ಹೆಚ್ಚಿಸಬೇಕು ಎಂದರು.

– ದಕ್ಷಿಣದಲ್ಲಿ ನಡೆಯುತ್ತಿರುವ ಹೋರಾಟದ ಪ್ರಚಾರ ಉತ್ತರದಲ್ಲಿ ಆಗುವಂತೆ ಮಾಡಬೇಕು, ದಕ್ಷಿಣದಲ್ಲಿ ಹೋರಾಟವನ್ನು ಇನ್ನಷ್ಟು ಬಿರುಸುಗೊಳಿಸಬೇಕು ಮತ್ತು ಇವೆರಡನ್ನೂ ಬೆಸೆಯಬೇಕು. ಇದರಲ್ಲಿ ತಮ್ಮುಗಳ ಪಾತ್ರ ಬಹಳ ಮುಖ್ಯ. ನಮ್ಮ ಕಡೆಯಿಂದ ಏನು ಸಹಕಾರಬೇಕು ಹೇಳಿ ಮಾಡೋಣ ಎಂದರು.
ಹಿರಿಯರ ಮಾತು ಕೇಳುತ್ತಾ ಕೇಳುತ್ತಾ ರಾತ್ರಿ 2.30 ಆಗಿತ್ತು. ತಿಂಗಳಿಂದ ಬೀದಿಯಲ್ಲೇ ಇದ್ದರೂ, ಹಗಲೆಲ್ಲಾ ಅಲೆದಿದ್ದರೂ, ದಣಿವಿಲ್ಲದೆ ಮಾತಾಡಿದ್ದರು. ಮಲಗಿಕೊಳ್ಳಿ ಬೆಳಗ್ಗೆ ಮತ್ತೆ ಇದ್ದೇ ಇದೆ ಎಂದು ಹೇಳಿ ನಾನೂ ಸಿಕ್ಕ ಮೂಲೆಯಲ್ಲಿ ಮುದುಡಿಕೊಂಡೆ. ಎರಡು ಗಂಟೆ ಕಣ್ಣು ಮುಚ್ಚಿ 4.30ಕ್ಕೆ ಎದ್ದು ನಾನು ಮತ್ತು ಮಾಸಾದ ಅಮಿತ್ ನಮ್ಮವರು ಉಳಿದುಕೊಂಡಿರುವ ಕರ್ನಾಟಕ ಸಂಘದ ಕಡೆ ಪಯಣ ಪ್ರಾರಂಭಿಸಿದೆವು. ಏಕೆಂದರೆ ಎಲ್ಲರ ಜೊತೆಗೂಡಿ ಹೋರಾಟದ ಕೇಂದ್ರ ತಾಣವಾದ ಸಿಂಘುಗೆ ಹೋಗಬೇಕಿತ್ತು. ಸಿಂಘು ಕತೆ ಮತ್ತಷ್ಟು ರೋಮಾಂಚನಕಾರಿಯಾದದ್ದ …ನಾಳೆ ಬರಿಯುತ್ತೇನೆ…. ಹೋರಾಟದ ಮೇಳ .

– ನೂರ್ ಶ್ರೀಧರ್


ಇದನ್ನೂ ಓದಿ: ದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ…: ನೂರ್ ಶ್ರೀಧರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights