ಕಪಿಲ್ ಗುಜ್ಜರ್ BJP ಸೇರ್ಪಡೆ ಮತ್ತು ಉಚ್ಚಾಟನೆ; ಬಿಜೆಪಿಯ ಇಂಥದ್ದೇ ಯಡವಟ್ಟುಗಳು ಹೀಗಿವೆ!
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಹೋರಾಟ ನಡೆಸುತ್ತಿದ್ದ ಶಾಹೀನ್‌ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾಕಿದ್ದ ಕಪಿಲ್ ಗುಜ್ಜರ್ ಬುಧವಾರ ಬಿಜೆಪಿ ಸೇರಿದ್ದ, ಕೆಲವೇ ಗಂಟೆಗಳಲ್ಲಿ ಆತನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಬಿಜೆಪಿಯಲ್ಲಿನ ಈ ರೀತಿಯ ಪ್ರಚೋದನಾ ಪ್ರಕ್ರಿಯೆಗಳು ಆಗಾಗ ನಡೆಯುತ್ತಲೇ ಇದ್ದು, ಈ ಘಟನೆ ಬಿಜೆಪಿಯ 2014ರ ಹಿಂದಿನ ಘಟನೆಗಳನ್ನು ಈಗ ಮತ್ತೆ ನೆನಪಿಸಿದೆ.
ಗುಜ್ಜರ್‌ನನ್ನು ಬಿಜೆಪಿ ಸೇರಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ವಿರೋಧಕ್ಕೆ ಮಣಿದ ಬಿಜೆಪಿ, ಆತ “ಶಾಹೀನ್‌ಬಾಗ್ ಘಟನೆಯಲ್ಲಿ ಭಾಗಿಯಾಗಿದ್ದ ಎಂಬುದು ತಿಳಿದಿರಲಿಲ್ಲ” ಎಂದು ಹೇಳಿಕೆ ನೀಡಿದ್ದು, ಆತನನ್ನು ಪಕ್ಷದಿಂದ ಉಚ್ಚಾಟಿಸಿದೆ.
ಈ ರೀತಿಯಲ್ಲಿ ಸಾರ್ವಜನಿಕ ವಿರೋಧಕ್ಕೆ ಮಣಿದು ಬಿಜೆಪಿಗೆ ಸೇರಿದವರನ್ನು ಶೀಘ್ರವೇ ಹೊರಹಾಕುವುದು ಕೇಸರಿ ಪಕ್ಷದಲ್ಲಿ ಇದೇ ಮೊದಲೇನು ಅಲ್ಲ.
2014 ರಲ್ಲಿ, ಬಿಹಾರದ ಸಬೀರ್ ಅಲಿಯನ್ನು ಪಕ್ಷಕ್ಕೆ ಸೇರಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಬಿಜೆಪಿಗೆ ಅಲಿಯ ಸೇರ್ಪಡೆಯು ಪಕ್ಷದೊಳಗೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಭಾರತೀಯ ಮುಜಾಹಿದ್ದೀನ್‌ನ ಭಯೋತ್ಪಾದಕ ಗುಂಪಿನ ಮಾಸ್ಟರ್ ಮೈಂಡ್ ಯಾಸಿನ್ ಭಟ್ಕಲ್ ಮೇಲೆ ಅಲಿ ಸಿಂಪತಿ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು. ಪ್ರಸ್ತುತ ಕೇಂದ್ರ ಸಚಿವರಾಗಿರುವ ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಅಲಿ ಸೇರ್ಪಡೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಆದರೆ ನಂತರ ಆ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ.
ಇದನ್ನೂ ಓದಿ: ಅಂಬಾನಿ ಪರನಿಂತ ಪ್ರಧಾನಿ ಮೋದಿ? ರೈತರ ಬಾಯ್ಕಾಟ್ ಜಿಯೋಗೆ ಪರೋಕ್ಷವಾಗಿ ವಿರೋಧ!
ಅಂತಹ ವಿಷಯಗಳ ಬಗ್ಗೆ ಆಂತರಿಕವಾಗಿ ಚರ್ಚಿಸಬೇಕೆಂದು ಆಗಿನ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ಪಕ್ಷದ ಉನ್ನತ ನಾಯಕರು ಚರ್ಚಿಸಿದ್ದರು. ಅದೇ ವರ್ಷ (2014), ದಿವಂಗತ ಸುಷ್ಮಾ ಸ್ವರಾಜ್ ಅವರು ಬಳ್ಳಾರಿ ಗಣಿಗಾರಿಕೆ ಹಗರಣದಲ್ಲಿ ಆರೋಪಿಯಾಗಿದ್ದ ರೆಡ್ಡಿ ಸಹೋದರರ ಸಂಬಂಧಿ ಬಿ.ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೂ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು.
“ನನ್ನ ತೀವ್ರ ವಿರೋಧದ ನಡುವೆಯೂ ಬಿ.ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ” ಎಂದು ಸುಷ್ಮಾ ಟ್ವೀಟ್ ಮಾಡಿದ್ದರು. ಅದಾಗ್ಯೂ, ಶ್ರೀರಾಮುಲು ಅವರನ್ನು ಪಕ್ಷದಿಂದ ತೆಗೆದುಹಾಕಲಿಲ್ಲ.
2014 ರಲ್ಲಿ ಹೆಚ್ಚಿನ ಬೆಂಬಲಿಗರೊಂದಿಗೆ ಹುಬ್ಬಳ್ಳಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಮತ್ತೊಬ್ಬ ವಿವಾದಾತ್ಮಕ ವ್ಯಕ್ತಿ ಪ್ರಮೋದ್ ಮುತಾಲಿಕ್ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಪಕ್ಷದ ಮೇಲೆ ಬಿಜೆಪಿಗರೇ ಒತ್ತಡ ಹೇರಿದ್ದರು.
ಇಂತಹ ಸಂದರ್ಭದಲ್ಲಿ ಪಕ್ಷವು ಎಚ್ಚರಿಕೆ ವಹಿಸುತ್ತದೆಯೇ ಎಂಬ ಪ್ರಶ್ನೆ ಎದುರಾದಾಗ, ಬಿಜೆಪಿ ಮುಖಂಡರೊಬ್ಬರು ಇದು ಅಸಾಧ್ಯವೆಂದು ಹೇಳಿದರು. “ಬಿಜೆಪಿಗೆ ಮಾತ್ರವಲ್ಲದೆ, ಯಾವುದೇ ಬೃಹತ್ ರಾಜಕೀಯ ಪಕ್ಷಗಳಿಗೆ, ಪ್ರತಿ ಸೇರ್ಪಡೆ ಅಥವಾ ಘಟನೆಗಳ ಬಗ್ಗೆ ನಿಗಾ ಇಡಲು ಸಾಧ್ಯವಿಲ್ಲ. ಕೆಲವೊಮ್ಮೆ ಇಂತಹ ಘಟನೆಗಳು ಬ್ಲಾಕ್ ಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ ಕಂಡುಬರುತ್ತವೆ. ಅಂತಹವರ ಬಗ್ಗೆ ರಾಜ್ಯ ಅಥವಾ ಕೇಂದ್ರದ ನಾಯಕತ್ವದ ಗಮನಕ್ಕೆ ಬಂದಾಗ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಹೆಸರು ಹೇಳಲು ಇಚ್ಚಿಸದ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂ. ಚುನಾವಣೆ; 54,041 ಸ್ಥಾನಗಳ ಫಲಿತಾಂಶ ಪ್ರಕಟ; BJPಗೆ ಮೇಲುಗೈ