ಬಿಎಸ್‌ವೈ ಮೇಲೆ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳದ BJP: ಯಾಕೆ ಗೊತ್ತೇ?

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮುಂದುವರೆಯುತ್ತಲೇ ಇದೆ. ನಿನ್ನೆ (ಸೋಮವಾರ) ನಡೆದ ಬಿಜೆಪಿ ಶಾಸಕರ ಸಭೆಯಲ್ಲೂ ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ಅವರು ಸರ್ಕಾರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಹೋದಲ್ಲಿ ಬಂದಲ್ಲಿ ಎಲ್ಲಾಕಡೆ ಯಡಿಯೂರಪ್ಪ ವಿರುದ್ದ ಯತ್ನಾಳ್‌ ವಾಗ್ದಾಳಿ ನಡೆಸುತ್ತಿದ್ದರೂ, ಬಿಜೆಪಿ ನಾಯಕತ್ವ ಯತ್ನಾಳ್‌ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಸಚಿವಾಕಾಂಕ್ಷಿಯಾಗಿರುವ ಯತ್ನಾಳ್‌, ಸಚಿವ ಸ್ಥಾನ ಮಿಸ್‌ ಆದ ಕಾರಣಕ್ಕೆ ಬಿಎಸ್‌ವೈ ವಿರುದ್ದ ವಾಗ್ಧಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿಗೆ ಬಂದವರಿಗೆ ಸರ್ಕಾರದಲ್ಲಿ ಒತ್ತುಕೊಡಲಾಗುತ್ತಿದೆ. ತಮ್ಮನ್ನು ಕಡೆಗಣಿಸಲಾಗುತ್ತಿದೆ. ಇದಕ್ಕೆ ಬಿಎಸ್‌ವೈ ಕಾರಣ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಬಿಎಸ್‌ವೈ ಕೆಲವೇ ದಿನಗಳಲ್ಲಿ ಸಿಎಂ ಪಟ್ಟದಿಂದ ಕೆಳಗಿಳಿಯುತ್ತಾರೆ ಎಂದು ಹೇಳಿದ್ದ ಯತ್ನಾಳ್‌, ಪಕ್ಷಕ್ಕೆ ಹಾಗೂ ಯಡಿಯೂರಪ್ಪನವರಿಗೂ ಮುಜುಗರ ಉಂಟು ಮಾಡಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು ಎಂದು ಬಿಎಸ್‌ವೈ ಆಪ್ತರು ಒತ್ತಾಯ ಮಾಡಿದ್ದರು.

ಇದನ್ನೂ ಓದಿ: ಬಿಎಸ್‌ವೈ ವಿರುದ್ದ ಮತ್ತೆ ಯತ್ನಾಳ್‌ ವಾಗ್ದಾಳಿ: BJPಗೆ ತಲೆನೋವಾದ ಕೇಸರಿ ಶಾಸಕ‌!

ಅಲ್ಲದೆ, ಶಿವಮೊಗ್ಗದಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲೂ ಯತ್ನಾಳ್ ವಿರುದ್ದ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದರು. ಕೋರ್‌ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಈ ವಿಚಾರ ಪ್ರಸ್ಥಾಪಿಸಿದ್ದರು. ಇದರಿಂದಾಗಿ, ಯತ್ನಾಳ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಆದರೂ, ಈ ವರೆಗೆ ಯತ್ನಾಳ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕನಿಷ್ಠ ಪಕ್ಷ ನೋಟಿಸ್‌ ಕೂಡಾ ನೀಡಿಲ್ಲ. ಅಲ್ಲದೆ, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನನಗೆ ಯಾವುದೇ ಸೂಚನೆಯನ್ನು ನೀಡಿಲ್ಲ. ಬದಲಾಗಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವುದು ಅಥವಾ ನೋಟಿಸ್‌ ನೀಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದು ಕೇಂದ್ರ ಶಿಸ್ತು ಸಮಿತಿಯ ವ್ಯಾಪ್ತಿಗೆ ಒಳಪಡಲಿದೆ ಎಂದು ಹೇಳಿ ಜಾರಿಕೊಂಡಿದ್ದಾರೆ.

ಒಟ್ಟಿನಲ್ಲಿ ಸಿಎಂ ವಿರುದ್ದ ಬಂಡಾಯ ಎದ್ದಿರುವ ಯತ್ನಾಳ್‌ ವಾಗ್ದಾಳಿಗೆ ಫುಲ್‌ಸ್ಟಾಪ್‌ ಇಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಯತ್ನಾಳ್‌ ವಾಗ್ದಾಳಿ ಮುಂದುವರೆದೇ ಇದೆ. ಆದರೂ ಬಿಜೆಪಿ ನಾಯಕರು ಸಮ್ಮನೇ ಇರುವುದು, ಬಿಜೆಪಿ ಒಳಗೇ ಬಿಎಸ್‌ವೈ ವಿರುದ್ಧ ಇರುವ ಆಂತರಿಕ ಅಸಮಾಧಾನವೇ ಕಾರಣ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.


ಇದನ್ನೂ ಓದಿ: ದೇಶದಲ್ಲಿ 35 ಸಾವಿರ ದೇವಾಲಯ ನಿರ್ಮಿಸಿ ಎಂದ SL ಭೈರಪ್ಪ: ಆಲಯ ಬಿಡು, ಬಯಲಿಗೆ ಬಾ ಎಂದ ನೆಟ್ಟಿಗರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights