ಬಿಎಸ್‌ವೈ ವಿರುದ್ದ ಮತ್ತೆ ಯತ್ನಾಳ್‌ ವಾಗ್ದಾಳಿ: BJPಗೆ ತಲೆನೋವಾದ ಕೇಸರಿ ಶಾಸಕ‌!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದಿವೆ. ಆದರೂ, ಬಿಜೆಪಿಯ ಆಂತರಿಕ ಬಿಕ್ಕಟ್ಟು ಮಾತ್ರ ಇನ್ನೂ ಬಗೆಹರಿದಿಲ್ಲ. ಸಚಿವ ಸಂಪುಟ ವಿಸ್ತರಣೆಗೆ ಹಲವಾರು ತೊಡಕುಗಳು ಎದುರಾಗುತ್ತಿದ್ದು, ಸಿಎಂ ಬಿಎಸ್‌ವೈಗೆ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸುತ್ತಲೇ ಇರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ‌, ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಬಿಜೆಪಿ ಸರ್ಕಾರಕ್ಕೆ ವಿರೋಧ ಪಕ್ಷಗಳಿಗಿಂತಲೂ ಯತ್ನಾಳ್‌ ದೊಡ್ಡ ತಲೆನೋವಾಗಿದ್ದಾರೆ.

ಪಕ್ಷದ ನಾಯಕರು ಎಷ್ಟೇ ಹೇಳಿದರೂ ಬಿಎಸ್​ ಯಡಿಯೂರಪ್ಪ ವಿರುದ್ಧದ ತಮ್ಮ ಎಂದಿನ ವಾಗ್ದಾಳಿಯನ್ನು ನಿಲ್ಲಿಸದ ಯತ್ನಾಳ್ ಇಂದೂ ಸಹ ಮುಖ್ಯಮಂತ್ರಿಯ ಕಾರ್ಯ ವೈಖರಿಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜನವರಿ.4 ಮತ್ತು 5 ರಂದು ಬೆಂಗಳೂರಿನಲ್ಲಿ ವಿಭಾಗವಾರು ಶಾಸಕರ ಸಭೆ ಕರೆದಿದ್ದಾರೆ. ಆದರೆ, ಈ ಸಭೆಯ ವಿಚಾರವನ್ನು ಮುಂದಿಟ್ಟುಕೊಂಡು ಶಾಸಕ ಯತ್ನಾಳ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್​ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ ಹೀಗಿದೆ:

ಜ.4 ಮತ್ತು 5 ರಂದು ವಿಭಾಗವಾರು ಶಾಸಕರ ಬದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಈ ಹಿಂದಿನ ವಿಭಾಗವಾರು ಸಭೆಗಳು ವಿಫಲವಾಗಿವೆ. ಈ ಮೊದಲು ವಿಭಾಗವಾರು ಶಾಸಕರ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿತ್ತು. ಸಿಎಂ ತಕ್ಷಣ ಹಣ ಬಿಡುಗಡೆ ಮಾಡಿ ಎಂದು ಷರಾ ಬರೆದಿದ್ದರು. ಆದರೂ, ಈವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಯತ್ನಾಳ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕ ಯತ್ನಾಳ್‌ಗೆ ಗುಲಾಮಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುತ್ತಾರೆಯೇ?: ಕರವೇ ಪ್ರಶ್ನೆ

ಈ ಹಿಂದೆ ನಡೆದ ವಿಭಾಗವಾರು ಶಾಸಕರ ಸಭೆಯಿಂದಾಗಿ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಶಾಸಕರ ಮನಸ್ಸಿಗೆ ನೋವಾಗಿದೆ. ಉದಾಹರಣೆಗೆ ನನ್ನ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಶಾಸಕರು ಸಿಎಂ ಭೇಟಿಗೆ ಹೋದರೂ ಮುಖ್ಯಮಂತ್ರಿಗಳು ಸಿಗುತ್ತಿಲ್ಲ. ಬಹುಷಃ ಸಿಎಂ ಅನಾರೋಗ್ಯದ ದೃಷ್ಠಿಯಿಂದ ಸಿಗುತ್ತಿಲ್ಲ ಎಂದು ಭಾವಿಸುತ್ತೇನೆ ಎಂದು ಸಿಎಂ ಆರೋಗ್ಯದ ಬಗ್ಗೆಯೂ ಯತ್ನಾಳ ಪ್ರಸ್ತಾಪಿಸಿದ್ದಾರೆ.

ಇತ್ತೀಚೆಗೆ ನಡೆದ ನಾನಾ ನಿಗಮ ಮತ್ತು ಮಂಡಳಿಗಳಿಗೆ, ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅಲ್ಲದೇ, ಹಲವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ವಿಚಾರದಲ್ಲಿಯೂ ಬಿಜೆಪಿ ಶಾಸಕರನ್ನು ಕಡೆಗಣನೆ ಮಾಡಲಾಗಿದೆ. ಇದರಿಂದ ಕಾರ್ಯಕರ್ತರಿಗೂ ನೋವಾಗಿದೆ” ಎಂದು ಯತ್ನಾಳ ಸಿಎಂ ವಿರುದ್ಧದ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಆದ್ದರಿಂದ, ರಾಜ್ಯಾಧ್ಯಕ್ಷರು, ಸಿಎಂ ಜ. 4 ಮತ್ತು 5 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಈ ಮೂಲಕ ಬಿಜೆಪಿ ಶಾಸಕರಲ್ಲಿ ಇರುವ ಅಸಮಾಧಾನ ಹೋಗಲಾಡಿಸಬೇಕು ಎಂದು ಯತ್ನಾಳ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್​ ಕಟೀಲ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಯತ್ನಾಳ್ ಬಂಡಾಯ: ಸಿಎಂಗೆ ಬಿಸಿತುಪ್ಪವಾಗಿರುವ ಯತ್ನಾಳ್ ಉದ್ದೇಶವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights