ಮಹಿಳಾ ಸದಸ್ಯರ ಬದಲು ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ: ಸಿದ್ದರಾಮಯ್ಯ

ರಾಜ್ಯದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ (ಬೆಂಬಲಿತರೇ) ಹೆಚ್ಚು ಗೆದ್ದಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆ ಆರಂಭದಿಂದಲೂ ಕಾಂಗ್ರೆಸ್ ನವರೇ ಹೆಚ್ಚು ಗೆಲ್ಲುತ್ತಿದ್ದಾರೆ. ಗ್ರಾಮ ಪಂಚಾಯತ್‌ಗೆ ಆಯ್ಕೆಯಾಗುವ ಮಹಿಳಾ ಸದಸ್ಯರ ಬದಲು ಅವರ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ, ಮಹಿಳೆಯರು ಆಡಳಿತ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬದಾಮಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾದಾಮಿಯಲ್ಲಿರುವ 340 ಗ್ರಾಮ ಪಂ. ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ -196, ಬಿಜೆಪಿ-148 ಸ್ಥಾನ ಗೆದ್ದಿವೆ. ಗುಳೇದಗುಡ್ಡ-156 ಸ್ತಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ -92 ಹಾಗೂ ಬಿಜೆಪಿ-29 ಸ್ತಾನ ಗೆದ್ದಿವೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಇನ್ನೆರಡು ವರ್ಷ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಬರ್ತಿಲ್ಲ. ಗ್ರಾಮ ಪಂಚಾಯಿತಿಗೆ ಯಡಿಯೂರಪ್ಪ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ಒಳ ಒಪ್ಪಂದ ಮಾಡಿಕೊಂಡಿದ್ದವು: ಜೆಡಿಎಸ್‌ ಶಾಸಕ

ರಾಜ್ಯದ ಜನರಿಗೆ 7ಕೆಜಿ ಅಕ್ಕಿ ಕೊಡುತ್ತಿದ್ದೆವು. ಈಗ 7ಕೆಜಿಯಿಂದ 5ಕೆಜಿಗೆ ಇಳಿಸಿದ್ದಾರೆ‌‌. ಯಡಿಯೂರಪ್ಪ ಅವರ ಮನೆಯಿಂದ ಕೊಡ್ತಿದ್ರಾ‌. ನಾವು ಮತ್ತೆ ಅಧಿಕಾರಕ್ಕೆ ಬಂದರೆ 10ಕೆಜಿ ಅಕ್ಕಿ ಕೊಡ್ತೀವಿ ಎಂದು ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟಿನ್ ನಿಲ್ಲಿಸಲು ಹೊರಟಿದ್ದಾರೆ. ಮಕ್ಕಳಿಗೆ ಹಾಲು, ಶೂ, ಸಮವಸ್ತ್ರ ಕೊಟ್ಟಿದ್ದು ಬಿಜೆಪಿನಾ? ಅವರ ಜನರಿಗಾಗಿ ಏನೂ ಮಾಡುತ್ತಿಲ್ಲ. ನಾವು ಜಾರಿಗೆ ತಂದಿದ್ದ ವಿದ್ಯಾಸಿರಿ, ಕೃಷಿ ಭಾಗ್ಯ ಈಗ ಇದ್ಯಾ? ಅದನ್ನೂ ಕಿತ್ತುಕೊಂಡಿದ್ದಾರೆ.  ಬಿಜೆಪಿಯವರು ಯಾವಾತ್ತಾದರೂ ಒಂದೇ ಒಂದು ರೂಪಾಯಿ ಸಾಲಮನ್ನಾ ಮಾಡಿದ್ದು ಇದ್ರೆ ತೋರಿಸಿ‌. ಸಾಲಮನ್ನಾ ಮಾಡಿದ್ದು ಕಾಂಗ್ರೆಸ್. ನಾನು ಮುಖ್ಯಮಂತ್ರಿ ಆಗಿದ್ದಾಗ 1800 ಕೋಟಿ ರೈತರಿಗೆ ಪರಿಹಾರ ಕೊಟ್ಟೇ. ಬಿಜೆಪಿಯವರು ರೈತರಿಗೆ ಬೆಳೆ ಪರಿಹಾರ ಕೊಟ್ಟಿದ್ದಾರಾ? ರೈತರಿಗೆ ಏನು ಮಾಡಿದ್ದಾರೆ ಹೇಳಿ ನೋಡೋಣ? ಎಂದು ಸವಾಲು ಹಾಕಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲೂ ಆಪರೇಷನ್ ಕಮಲ ಮಾಡ್ತಾರೆ ಹುಷಾರಾಗಿರಿ. ಮಹಿಳೆಯರು ಶೇಕಡಾ 50ಕ್ಕಿಂತಲೂ ಹೆಚ್ಚು ಗ್ರಾಪಂ ನಲ್ಲಿ ಗೆದ್ದಿದ್ದಾರೆ. ಇದು ಹಳ್ಳಿ ಪಾರ್ಲಿಮೆಂಟ್. ಗ್ರಾಮ ಸಭೆ ಪವರ್ ಫುಲ್. ವರ್ಷಕ್ಕೆ ಎರಡು ಬಾರಿ ಗ್ರಾಮ ಸಭೆ ಮಾಡಲೇಬೇಕು. ಗ್ರಾಮ ಸಭೆಯಲ್ಲೇ ಏನೇನು ಕಾಮಗಾರಿ, ಮನೆ ಹಂಚಿಕೆ ಸೇರಿದಂತೆ ಅಭಿವೃದ್ಧಿ ಕಾರ್ಯ ತೀರ್ಮಾನ ವಾಗಬೇಕು. ಅಧ್ಯಕ್ಷರಾದವರು, ಪಿಡಿಒ ಹಿಂದೆ ಹೋಗ್ಬೇಡಿ. ಪಿಡಿಒ ನಿಮ್ಮ ಹಿಂದೆ ಇರಬೇಕು. ಮಹಿಳಾ ಸದಸ್ಯರ ಬದಲಿಗೆ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಇದನ್ನೂ ಓದಿ: ಬಿಜೆಪಿಯ ಬ್ರಾಹ್ಮಣ್ಯ v/s ಸಿದ್ದರಾಮಯ್ಯರ ಬಾಡೂಟ: ಮಾಂಸಾಹಾರದ ಬಗ್ಗೆ ಸಿದ್ದು ಹೇಳಿಕೆಗಳು ಹೀಗಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights