25 ಶಿಕ್ಷಕರಿಗೆ ಕೊರೊನಾ ಸೋಂಕು ದೃಢ; ಆತಂಕದಲ್ಲಿ ವಿದ್ಯಾರ್ಥಿಗಳು, ಶಾಲೆಯೇ ಬೇಡ ಎನ್ನುತ್ತಿರುವ ಪೋಷಕರು

ಲಾಕ್‌ಡೌನ್‌ ನಂತರ ಜನಜೀವನ ಸಾಧಾರಣ ಮಟ್ಟದಲ್ಲಿ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಆದರೂ, ಕೊರೊನಾ ಬಗೆಗಿನ  ಆತಂಕ ಮತ್ತು ಭಯ ಕಡಿಮೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಜನವರಿ 01ರಿಂದ ಶಾಲಾ-ಕಾಲೇಜುಗಳನ್ನು ಆರಂಭ ಮಾಡಿದೆ. ಆದರೆ, ಶಾಲೆಗಳು ತೆರೆದ ಮೊದಲ ದಿನಗಳಲ್ಲೇ​ 25 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಗದಗ ಜಿಲ್ಲೆಯಲ್ಲಿಯೇ 10 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 05 ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಹೀಗಾಗಿ, ಒಂದು ವರ್ಷ ವ್ಯರ್ಥವಾದರೂ ಸರಿಯೇ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಹಲವು ಪೋಷಕರು ನಿರ್ಧರಿಸಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿಯ ಪ್ರಮಾಣ ಕಡಿಮೆಯಾಗುವ ಆತಂಕ ಎದುರಾಗಿದೆ.

ಲೋಕಲ್ ಸರ್ಕಲ್ಸ್ ಎಂಬ ಆನ್‌ಲೈನ್‌ ವೇದಿಕೆಯೊಂದು ಶಾಲಾ-ಕಾಲೇಜುಗಳು ತೆರೆಯುತ್ತಿರುವ ಬಗ್ಗೆ ಪೋಷಕರ ಅಭಿಪ್ರಾಯವೇನು ಎಂದು ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ.69 ಜನರು ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಂತೆ, ಏಪ್ರಿಲ್‌ ನಂತರದಲ್ಲಿ ತೆರೆಯಲಿ, ಈಗ ಬೇಡ ಎಂದು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಬಿಹಾರ: ನಿತೀಶ್‌ ಸರ್ಕಾರಕ್ಕೆ ಲಾಲು ವಿಲನ್‌? BJP ಮೈತ್ರಿ ಸರ್ಕಾರಕ್ಕೆ ಸಂಚಕಾರ?

ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, “ಕೊರೊನಾಗೆ ಯಾರೂ ಹೆದರುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಅಗತ್ಯವಾದ ಎಲ್ಲಾ​ ಕ್ರಮಗಳನ್ನೂ ಜರುಗಿಸಲಿದೆ. ಪೋಷಕರು ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿ” ಎಂದು  ಹೇಳಿದ್ದಾರೆ.

“ಶಾಲೆ ಆರಂಭವಾದ ನಂತರ 1 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಮರಳಿದ್ದಾರೆ. ನಿಜಕ್ಕೂ ಇದು ಆಶಾದಾಯಕ ಬೆಳವಣಿಗೆ. ಈ ನಡುವೆ 25 ಶಿಕ್ಷಕರಿಗೆ ಸೋಂಕು ಧೃಡಪಟ್ಟಿರುವುದು ಅಧಿಕೃತ ಅಲ್ಲ. ಅಲ್ಲದೆ, ಹೀಗಾಗಿ ಯಾರೂ ಹೆದರುವ ಅಗತ್ಯ ಇಲ್ಲ. ಶಾಲೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಎಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಬಂದಿದೆ ಎಂಬ ನಿಖರ ಮಾಹಿತಿ‌ ಇಲ್ಲ” ಎಂದು ಅವರು ಹೇಳಿದ್ದಾರೆ.

ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದು ನಂತರ ಧೃಡಪಡಿಸುತ್ತೇನೆ. ಶಾಲೆಗಳು ಸುಸೂತ್ರವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಸರ್ಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ. ಯಾರಿಗಾದರೂ ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಲಾಗುವುದು” ಎಂದು ಸಚಿವ ಸುಧಾಕರ್​ ತಿಳಿಸಿದ್ದಾರೆ.


ಇದನ್ನೂ ಓದಿ: ಬಿಜೆಪಿಗೆ ಬಂದರೆ ಅಧ್ಯಕ್ಷ ಸ್ಥಾನ ಕೊಡಿಸುತ್ತೇವೆ; ಗ್ರಾಮ ಪಂ. ಸದಸ್ಯನಿಗೆ BJP ಜಿಲ್ಲಾಧ್ಯಕ್ಷ ಆಮಿಷವೊಡ್ಡಿದ ಆಡಿಯೋ ವೈರಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights