ಗಣರಾಜ್ಯದ ದಿನ ರೈತರ ಶಕ್ತಿ ಪ್ರದರ್ಶನ; ಗುರುವಾರ ಬೃಹತ್ ಟ್ರಾಕ್ಟರ್ ರ್‍ಯಾಲಿ ತಾಲೀಮು!
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ದ ಹೋರಾಟ ನಡೆಸುತ್ತಿರುವ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ ನಡೆದ 7ನೇ ಸುತ್ತಿನ ಮಾತುಕತೆಯೂ ಮುರಿದು ಬಿದ್ದಿದೆ. ಜನವರಿ 08 ರಂದು ಎಂಟನೆ ಸುತ್ತಿನ ಮಾತುಕತೆ ನಡೆಯಲಿದೆ. ಈ ಮಧ್ಯೆ, ನಾಳೆ (ಜ. 07ರಂದು) ರೈತರು ಟ್ರಾಕ್ಟರ್ ರ್‍ಯಾಲಿ ನಡೆಸಲು ರೈತರು ನಿರ್ಧರಿಸಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚ ತಿಳಿಸಿದೆ.
ಟ್ರಾಕ್ಟರ್ ಮೆರವಣಿಗೆ ದೆಹಲಿಯ ಪೂರ್ವ ಮತ್ತು ಪಶ್ಚಿಮ ಹೆದ್ದಾರಿಗಳಲ್ಲಿ ಸಾಗಲಿದೆ. ಜನವರಿ 26 ರಂದು ಗಣರಾಜ್ಯೋತ್ಸವದ ದಿನವೂ ರೈತರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದು, ಅಂದು ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸಲಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆಯಲ್ಲಿ ಪೂರ್ವಾಭ್ಯಾಸವಾಗಿರಲಿದ್ದು, ನಾಳಿನ ಮೆರವಣಿಗೆಯಲ್ಲಿ ಪ್ರತಿಭಟನಾನಿರತ 40 ರೈತ ಸಂಘಟನೆಗಳು ಭಾಗವಹಿಸಲಿದೆ ಎಂದು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸಮನ್ವಯ ಸಮಿತಿ ಸದಸ್ಯ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಗುರುವಾರ, ಕುಂಡ್ಲಿ, ಟಿಕ್ರಿ, ಗಾಜಿಪುರ್ ಮತ್ತು ರೆವಸನ್ ಗಡಿಯಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಎರಡೂ ಹೆದ್ದಾರಿಗಳಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಲಿದ್ದು, ಮಧ್ಯ ಭಾಗದಲ್ಲಿ ಸಭೆ ನಡೆಸಿ ನಂತರ ಪ್ರತಿಭಟನಾ ಸ್ಥಳಕ್ಕೆ ಹಿಂದಿರುಗಲಿದ್ದಾರೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.
“ಜನವರಿ 8 ರಂದು ಮತ್ತೆ ಚರ್ಚೆ ನಡೆಸುತ್ತೇವೆ. ಇಂದಿನ ಸಭೆಯಲ್ಲಿ ಕಾನೂನು ಹಿಂಪಡೆಯುವ ಬಗ್ಗೆ ಚರ್ಚೆ ಆಗಿಲ್ಲ. ಪರ್ಯಾಯ ಮಾರ್ಗ ಹುಡುಕಬೇಕೆಂದು ರೈತರು ಬಯಸುತ್ತಿದ್ದಾರೆ. ಆದರೆ ಎರಡೂ ಕೈ ಕೂಡಿದರೆ ಚಪ್ಪಾಳೆ ಆಗಲಿದೆ” ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಈ ಹಿಂದೆ ನಡೆದಿದ್ದ ಸಭೆಯಲ್ಲಿ ರೈತರ ನಾಲ್ಕು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳಾಗಿರುವ ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ಕೃಷಿ ತ್ಯಾಜ್ಯ ಸುಡುವಿಕೆ ನಿಬಂಧನೆಗಳ ಆದೇಶವನ್ನು ಹಿಂಪಡೆಯಲು ಒಪ್ಪಿಗೆ ನೀಡಲಾಗಿತ್ತು.
ಇದನ್ನೂ ಓದಿ: ಜಗ್ಗದ ರೈತ ಹೋರಾಟ; ರೈತರನ್ನು ದಮನಿಸಲು ತಂತ್ರ ಎಣೆಯುತ್ತಿದೆಯೇ BJP ಸರ್ಕಾರ?

